ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿಯಾಗಿದ್ದು,ಕ್ರಿಯಾಶೀಲ ವ್ಯಕ್ತಿಯನ್ನಾಗಿ ರೂಪಿಸುತ್ತದೆ ಎಂದು ಮಧುಗಿರಿ ಪಟ್ಟಣದ ಜೋಡಿದಾರ್ ಕಿರಣ್ ಅಭಿಪ್ರಾಯಪಟ್ಟರು.ತಾಲೂಕಿನ ಪುರವರ ಸರ್ಕಾರಿ ಪ್ರೌಶಾಲೆ ವಿದ್ಯಾರ್ಥಿಗಳಿಗೆ ಸ್ವಯಪ್ರೇರಿತರಾಗಿ ಉಚಿತ ಯೋಗ ಮ್ಯಾಟ್ ವಿತರಿಸಿ ಮಾತನಾಡಿದರು. ಪ್ರತಿನಿತ್ಯ ಯೋಗಭ್ಯಾಸ ಮಾಡುವುದರಿಂದ ಜೀವನದಲ್ಲಿ ಶಿಸ್ತು, ಸಂಯಮ, ಏಕಾಗ್ರತೆ ಮತ್ತು ನೆನಪಿನ ಶಕ್ತಿ ವೃದ್ಧಿಸಿ ಸಮಾಜದಲ್ಲಿ ಪರಿಪೂರ್ಣ ವ್ಯಕ್ತಿಯಾಗಿ ಹೊರ ಹೊಮ್ಮಲು ಯೋಗಾಭ್ಯಾಸವನ್ನು ನಿರಂತರವಾಗಿ ರೂಡಿಸಿಕೊಳ್ಳಬೇಕು. ದೈನಂದಿನ ಬದುಕಿನಲ್ಲಿ ಒತ್ತಡವನ್ನು ಕಡಿಮೆ ಮಾಡಿ ಸದಾ ಚಟುವಟಿಕೆಯಿಂದಿರಲು ಯೋಗಾಸನಗಳು ಪ್ರಯೋಜನ ಎಂದರು. ಶಾಲಾ -ಕಾಲೇಜುಗಳ ಪಠ್ಯಪುಸ್ತಕಗಳಲ್ಲಿ ಸರ್ಕಾರಗಳು ಯೋಗ ಸೇರಿಸಿ ಮಕ್ಕಳ ಶೈಕ್ಷಣಿಕ ಪ್ರಗತಿ ಮತ್ತು ಉತ್ತಮ ಆರೋಗ್ಯವಂತ ವ್ಯಕ್ತಿಯಾಗಿ ಬದುಕು ನಡೆಸಲು ಯೋಗ ಸಹಕಾರಿ ಎಂದರು. ಇದೇ ವೇಳೆ ಸರ್ಕಾರಿ ಪ್ರೌಢಶಾಲೆಯಿಂದ ಬೋಧಕ ಬೋಧಕೇತರರು ಜೋಡಿದಾರ್ ಕಿರಣ್ ಅವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಸಚಿದಾನಂದಮೂರ್ತಿ,ದೈಹಿಕ ಶಿಕ್ಷಕಿ ಚಂದ್ರಪ್ರಭಾ,ಸಹ ಶಿಕ್ಷಕರಾದ ದೊಡ್ಡತಿಮ್ಮಯ್ಯ,ಮಂಜುಳಾ,ಶಾಲಾ ಅಬಿವೃದ್ಧಿ ಅಧ್ಯಕ್ಷ ರಾಜಶೇಖರ್ ಸೇರಿದಂತೆ ಅನೇಕರಿದ್ದರು.