ಆರೋಗ್ಯಕ್ಕೆ ಯೋಗವೇ ಪರಿಹಾರ: ಶಂ.ನಾ. ಶಾಸ್ತ್ರಿ

| Published : Nov 01 2024, 12:13 AM IST

ಸಾರಾಂಶ

ನಿತ್ಯವೂ ಸಮಯಕ್ಕೆ ಸರಿಯಾಗಿ ಹಿತ-ಮಿತ ಆಹಾರವನ್ನು ಸ್ವೀಕರಿಸಬೇಕು. ಹಸಿವಾದಾಗಲೇ ಊಟ ಮಾಡಬೇಕು. ಅದು ಮಿತಿ ಮೀರಿದಲ್ಲಿ ಆಹಾರವೇ ವಿಷವಾಗುವುದು.

ಶಿರಸಿ: ಮನುಷ್ಯನಲ್ಲಿ ಹಾರ್ಮೋನುಗಳ ಅಸಮತೋಲನ, ರೋಗನಿರೋಧಕ ಶಕ್ತಿಯ ಕುಗ್ಗುವಿಕೆ ಮತ್ತು ಆಂತರಿಕ ರಕ್ಷಣಾ ವ್ಯವಸ್ಥೆಯ ಕುಂದುವಿಕೆಯಿಂದ ಎಲ್ಲ ಬಗೆಯ ಆರೋಗ್ಯ ಸಮಸ್ಯೆಗಳುಂಟಾಗುತ್ತವೆ. ಇಂತಹ ಎಲ್ಲ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಗೆ ಸೂಕ್ತ ಯೋಗ ಅತ್ಯತ್ತಮ ಪರಿಹಾರ ನೀಡುತ್ತವೆ ಎಂಬುದಾಗಿ ಕಳೆದ 28 ವರ್ಷಗಳಿಂದಲೂ ಯೋಗಾನುಷ್ಠಾನ ನಿರತರಾಗಿರುವ ಶಂಕರನಾರಾಯಣ ಶಾಸ್ತ್ರಿ ತಿಳಿಸಿದರು.ಶಿರಸಿ ರೋಟರಿ ಅ. 26ರ ಸಂಜೆ ರೋಟರಿ ಸೆಂಟರಿನಲ್ಲಿ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ನಿತ್ಯವೂ ಎಲ್ಲರೂ ಮಾಡಬಹುದಾದ ಸರಳ ಯೋಗದ ಪ್ರಾತ್ಯಕ್ಷಿಕೆ ನೀಡಿ ವಿವರಣೆ ಕೊಡುತ್ತ ವಿವಿಧ ನೀರ್ನಾಳ ಗ್ರಂಥಿಗಳಿಗೆ ಪುನಶ್ಚೇತನ ನೀಡುವ, ಜೀವಕೋಶಗಳಲ್ಲಿ ಸರಾಗವಾಗಿ ರಕ್ತ ಸಂಚಾರವಾಗುವಂತೆ ಮಾಡುವ ಮತ್ತು ಜೀರ್ಣಕ್ರಿಯೆಯನ್ನು ಸುಗಮಗೊಳಿಸುವ ಸರಳ ಯೋಗಸೂತ್ರಗಳನ್ನು ತಿಳಿಸಿದರಲ್ಲದೇ ಸೂರ್ಯೋದಯದ ಮುನ್ನ ಒಂದರಿಂದ ಒಂದೂವರೆ ಲೀ. ನೀರನ್ನು ಕುಡಿಯುವುದರಿಂದ(ಉಷಾಪಾನ) ಆಗುವ ಪ್ರಯೋಜನವನ್ನೂ ತಿಳಿಸಿದರು. ನಂತರದಲ್ಲಿ ಅವರಿಗೆ ರೋಟರಿ ವತಿಯಿಂದ ಸಾರ್ವಜನಿಕ ಸಂಮಾನ ಮಾಡಲಾಯಿತು.ನಮ್ಮ ಹೊಟ್ಟೆ, ನಮ್ಮ ಆರೋಗ್ಯ ವಿಷಯವಾಗಿ ಉಪನ್ಯಾಸ ನೀಡಿದ ಡಾ. ವಿನಾಯಕ ಹೆಬ್ಬಾರ್, ನಿತ್ಯವೂ ಸಮಯಕ್ಕೆ ಸರಿಯಾಗಿ ಹಿತ-ಮಿತ ಆಹಾರವನ್ನು ಸ್ವೀಕರಿಸಬೇಕು. ಹಸಿವಾದಾಗಲೇ ಊಟ ಮಾಡಬೇಕು. ಅದು ಮಿತಿ ಮೀರಿದಲ್ಲಿ ಆಹಾರವೇ ವಿಷವಾಗುವುದು. ಪ್ರಾಣಿಗಳು ಹೊಟ್ಟೆ ತುಂಬಿದ್ದಾಗ ಎದುರಿಗೇ ಲಭ್ಯವಿದ್ದರೂ ಆಹಾರ ಸೇವಿಸುವುದಿಲ್ಲ. ಮನುಷ್ಯನಾದರೋ, ಪುನಃ ನಿಗದಿತ ಸಮಯಕ್ಕೆ ಆಹಾರ ಸಿಗುವುದೆಂದು ನಿಶ್ಚಿತವಾಗಿ ಗೊತ್ತಿದ್ದರೂ ಅಧಿಕ ಆಹಾರ ಸೇವನೆ ಮಾಡುತ್ತಾನೆ. ಸೂರ್ಯೋದಯದ ಬಳಿಕ ಅಗ್ನಿ ಜಾಗೃತವಾಗುವ ಸಮಯದಲ್ಲಿ ಆಹಾರ ಸೇವಿಸಿ ಸೂರ್ಯಾಸ್ತದ ಬಳಿಕ ಸೇವಿಸಕೂಡದು.

ಕಾಲಮಾನಕ್ಕನುಗುಣವಾಗಿ ಆಹಾರ ಸೇವನೆ, ತಾಜಾ ಮತ್ತು ಬಿಸಿಯಾದ ಸಾತ್ವಿಕ ಆಹಾರ, ಬೇರೆಡೆ ಮನಸ್ಸನ್ನು ಹರಿಯಬಿಡದೇ ಸಂತೋಷಚಿತ್ತದಿಂದ ಆಹಾರ ಸೇವನೆ ಮಾಡುವ ಮೂಲಕ ಅತ್ಯುತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದರು. ಕಾರ್ಯಕ್ರಮದ ಸಂಚಾಲಕ ಮತ್ತು ಶಿರಸಿ ರೋಟರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ರವಿ ಹೆಗಡೆ ಗಡಿಹಳ್ಳಿ ಪ್ರಾಸ್ತಾವಿಕ ಮಾತನಾಡಿ, ಯೋಗಾಚಾರ್ಯರನ್ನು ಮತ್ತು ಉಪನ್ಯಾಸಕರನ್ನು ಪರಿಚಯಿಸಿದರು. ಅಧ್ಯಕ್ಷತೆ ವಹಿಸಿದ್ದ ಅನಂತ ಪದ್ಮನಾಭ ಸ್ವಾಗತಿಸಿದರು. ನಿರ್ವಹಿಸಿದ ಕಾರ್ಯದರ್ಶಿ ಸರಸ್ವತಿ ಎನ್. ರವಿ ವಂದಿಸಿದರು. ಇನ್ನರ್‌ವ್ಹೀಲ್ ಅಧ್ಯಕ್ಷೆ ರೇಖಾ ಅನಂತ ವೇದಿಕೆಯಲ್ಲಿದ್ದರು. ಪ್ರಶ್ನೋತ್ತರದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.