ಸಾರಾಂಶ
ಹೊಸಪೇಟೆ: ಮನೆ ಮನೆಗೂ ಯೋಗದ ಮಹತ್ವ ತಲುಪುವಂತಾಗಬೇಕು ಎಂಬುದೇ ಪತಂಜಲಿ ಯೋಗ ಸಮಿತಿಯ ಧ್ಯೇಯ. ಯೋಗದಿಂದ ಆರೋಗ್ಯ ನಿಶ್ಚಿತವಾಗಿರುವುದರಿಂದ ಪ್ರತಿಯೊಬ್ಬರೂ ಯೋಗವನ್ನು ಜೀವನದ ಕ್ರಮವಾಗಿಸಬೇಕು ಎಂದು ಸಮಿತಿಯ ರಾಜ್ಯ ಪ್ರಭಾರಿ ಭವರ್‌ಲಾಲ್ ಆರ್ಯ ಹೇಳಿದರು.
ಇಲ್ಲಿನ ಜ.ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಆವರಣದಲ್ಲಿ 25 ದಿನಗಳ ಕಾಲ ನಡೆದ ಸಹಯೋಗ ಶಿಕ್ಷಕರ ತರಬೇತಿ ಶಿಬಿರದ ಸಮಾರೋಪದಲ್ಲಿ ಶನಿವಾರ ಅವರು, 159 ಮಂದಿಗೆ ಪ್ರಮಾಣಪತ್ರ ನೀಡಿ ಮಾತನಾಡಿದರು.ಹೊಸಪೇಟೆಯ ಎಲ್ಲ 35 ವಾರ್ಡ್‌ಗಳು, ಅಲ್ಲಿರುವ ಗಲ್ಲಿ ಗಲ್ಲಿಗಳಿಗೂ ಯೋಗ ತೆರಳಬೇಕು. ಜನರಿಗೆ ಯೋಗದ ಮಹತ್ವ ತಿಳಿಸುವ ದೊಡ್ಡ ಹೊಣೆಯನ್ನು ಎಲ್ಲ ಯೋಗ ಸಾಧಕರು ಮತ್ತು ಸಹ ಶಿಕ್ಷಕರು ಹೊರಬೇಕು. ಆರೋಗ್ಯಪೂರ್ಣವಾದ ಸ್ವದೇಶಿ ಉತ್ಪನ್ನಗಳನ್ನು ಬಳಸುವ ರೂಢಿ ಮಾಡಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.
ರಾಜ್ಯ ಸಮಿತಿ ಸದಸ್ಯ ಡಾ.ಎಸ್.ಬಿ. ಹಂದ್ರಾಳ ಮಾತನಾಡಿ, ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಒಂದೇ ಕಡೆ ಸಹಯೋಗ ಶಿಕ್ಷಕ ತರಬೇತಿ ಪಡೆದ 159 ಮಂದಿಗೆ ಪ್ರಮಾಣಪತ್ರ ನೀಡಲಾಗುತ್ತಿದೆ ಎಂದರು.ಪತಂಜಲಿ ಯೋಗ ಸಮಿತಿಯ ವಿಜಯನಗರ ಜಿಲ್ಲಾ ಪ್ರಭಾರಿ ಡಾ.ಎಫ್.ಟಿ.ಹಳ್ಳಿಕೇರಿ ಅವರನ್ನು ರಾಜ್ಯ ಸಮಿತಿ ಸದಸ್ಯರನ್ನಾಗಿ ನಿಯೋಜಿಸಲಾಯಿತು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸತ್ಯನಾರಾಯಣ ಸಹಿತ ಹಲವು ಪತ್ರಕರ್ತರನ್ನು, ಕೊಟ್ಟೂರು ಮಠದ ವ್ಯವಸ್ಥಾಪಕ ಕುಮಾರಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಶಿಬಿರಾರ್ಥಿಗಳಾದ ಬಾಲಕೃಷ್ಣ, ಸುಜಾತಾ ಕರ್ಣಂ, ಡಾ.ಮಲ್ಲಿಕಾರ್ಜುನ ಅವರು ಶಿಬಿರದ ಅನುಭವ ಹಂಚಿಕೊಂಡರು.ಯೋಗ ಸಾಧಕರಾದ ಗೌರಮ್ಮ, ಮಂಗಳಮ್ಮ, ವೀರೇಶ್, ಅನಂತ ಜೋಶಿ, ಶ್ರೀ ರಾಮ, ಶಿವಮೂರ್ತಿ, ರಾಜಾಭಕ್ಷಿ, ನೂರ್ ಜಾನ್ ಸೇರಿದಂತೆ ವಿವಿಧ ಯೋಗ ಕೇಂದ್ರಗಳ ಸಂಚಾಲಕರು ಇದ್ದರು.