ಸಾರಾಂಶ
ಹಾನಗಲ್ಲ: ಒತ್ತಡರಹಿತವಾಗಿ ಕಾರ್ಯ ನಿರ್ವಹಿಸಲು ಯೋಗ, ಧ್ಯಾನ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಮೊರೆ ಹೋಗಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.ಇಲ್ಲಿನ ಬಾಬು ಜಗಜೀವನರಾಂ ಭವನದಲ್ಲಿ ಕಂದಾಯ ಇಲಾಖೆ ಕಂದಾಯ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಜನಪ್ರತಿನಿಧಿಗಳು ಮತ್ತು ಸರ್ಕಾರಿ ನೌಕರರು ಒತ್ತಡದಲ್ಲಿ ಕಾರ್ಯ ನಿರ್ವಹಿಸುವಂಥ ಸಂದಿಗ್ಧ ಸನ್ನಿವೇಶ ಸೃಷ್ಟಿಯಾಗಿದೆ. ಆರೋಗ್ಯ ತಪಾಸಣೆಗೆ ಒಳಪಟ್ಟಾಗ ರಕ್ತದ ಒತ್ತಡ, ಸಕ್ಕರೆ ಕಾಯಿಲೆಯಂಥ ಸಮಸ್ಯೆಗಳು ಸಹಜವಾಗಿದೆ ಎಂದು ಹೇಳಿದರು.
ಕಂದಾಯ ಇಲಾಖೆ ಮಾತೃ ಇಲಾಖೆಯಂತೆ ಕೆಲಸ ಮಾಡುತ್ತಿದೆ. ಸಹಜವಾಗಿ ಕಾರ್ಯದ ಒತ್ತಡ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಮೇಲೆ ಹೆಚ್ಚಿದೆ. ಜನರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಸರ್ಕಾರ ಆಡಳಿತ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತರುತ್ತಿದೆ.ಬದಲಾವಣೆಗೆ ಅನುಗುಣವಾಗಿ ಕೆಲಸ ಮಾಡುವ ಅನಿವಾರ್ಯತೆ ಇದೆ ಎಂದು ಹೇಳಿದ ಅವರು, ಅಧಿಕಾರಿಗಳು ಮತ್ತು ನೌಕರರನ್ನು ಗುರುತಿಸಿ, ಗೌರವಿಸುವಂಥ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಹಾನಗಲ್ಲ ತಾಲೂಕಿನ ಕಂದಾಯ ಇಲಾಖೆಯ ಪ್ರಗತಿ ಜಿಲ್ಲೆಯಲ್ಲಿಯೇ ಮುಂಚೂಣಿಯಲ್ಲಿದೆ. ಹಕ್ಕುಪತ್ರ ವಿತರಣೆ, ಕಂದಾಯ ದಾಖಲೆಗಳ ಡಿಜಿಟಲೀಕರಣ, ಇ ಕಚೇರಿ, ಆಧಾರ್ ಸೀಡಿಂಗ್ ಇನ್ನಿತರ ಕಾರ್ಯಗಳಲ್ಲಿ ಜಿಲ್ಲೆಗೆ ಮೊದಲ ಸ್ಥಾನದಲ್ಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಮನುಷ್ಯನ ಜನನದಿಂದ ಹಿಡಿದು ಮರಣದವರೆಗೂ ಕಂದಾಯ ಇಲಾಖೆ ಮುಖ್ಯ ಪಾತ್ರ ವಹಿಸಲಿದೆ. ಅಭಿವೃದ್ಧಿಯನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ದ ಯಾವುದಾದರೂ ಇಲಾಖೆ ಇದ್ದರೆ ಅದು ಕಂದಾಯ ಇಲಾಖೆ. ಸಕಾಲದಡಿ ಈ ವರ್ಷ ರಾಜ್ಯದಲ್ಲಿ 3 ಕೋಟಿಗಿಂತ ಅಧಿಕ ಸೇವೆಗಳನ್ನು ಇಲಾಖೆ ನೀಡಿರುವುದು ಹಿರಿಮೆಯ ಸಂಗತಿಯಾಗಿದೆ ಎಂದರು.ತಹಸೀಲ್ದಾರ್ ರೇಣುಕಮ್ಮ ಎಸ್. ಮಾತನಾಡಿ, ಸರ್ಕಾರದ ನಾನಾ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಕಂದಾಯ ಇಲಾಖೆಯ ಪಾತ್ರ ಮಹತ್ವದ್ದಾಗಿದೆ. ತಂತ್ರಜ್ಞಾನ ಬದಲಾದಂತೆ ಕೆಲಸದ ಕಾರ್ಯವೈಖರಿ ಬದಲಾಗಿದೆ. ಬದಲಾವಣೆಗೆ ಅನುಗುಣವಾಗಿ ನೌಕರರು ಬದಲಾಗಬೇಕಾದ ಸವಾಲು ಇದೆ ಎಂದರು.ಶಿಗ್ಗಾಂವಿ ತಹಸೀಲ್ದಾರ್ ಯಲ್ಲಪ್ಪ ಗೊಣ್ಣೆಣ್ಣನವರ, ಸವಣೂರು ತಹಸೀಲ್ದಾರ್ ಭರತರಾಜ್, ಕಂದಾಯ ನೌಕರರ ಸಂಘದ ತಾಲೂಕಾಧ್ಯಕ್ಷ ಸೂರ್ಯವಂಶಿ, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕಾಧ್ಯಕ್ಷ ಎಂ.ಎಸ್. ಜಮಾದಾರ, ಭೂಮಾಪನಾ ಇಲಾಖೆಯ ನೌಕರರ ಸಂಘದ ತಾಲೂಕಾಧ್ಯಕ್ಷ ಅಶೋಕ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗಂಗಮ್ಮ ಹಿರೇಮಠ ಇದ್ದರು.