ಸಾರಾಂಶ
ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪಿಇಟಿ ಕ್ರೀಡಾಂಗಣದಲ್ಲಿ 10ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಮಂಡ್ಯ
ರೋಗವನ್ನು ದೂರವಿಟ್ಟು ಆರೋಗ್ಯವನ್ನು ವೃದ್ಧಿಸುವ ಶಕ್ತಿ ಯೋಗಾಭ್ಯಾಸಕ್ಕೆ ಇದೆ. ಯೋಗ ಎಂಬುದು ದಿನನಿತ್ಯ ರೂಢಿಸಿಕೊಂದರೆ, ಅದು ಹಣ ಕಟ್ಟದೆ ಸ್ವಂತ ಶ್ರಮದಿಂದ ಪಡೆಯುವ ಆರೋಗ್ಯ ವಿಮೆಯಿದ್ದಂತೆ ಎಂದು ಜಿಲ್ಲಾಧಿಕಾರಿ ಡಾ। ಕುಮಾರ ಅವರು ತಿಳಿಸಿದರು.ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪಿಇಟಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 10ನೇ ಅಂತರಾಷ್ಟ್ರೀಯ ಯೋಗದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.ಯೋಗ ಮನಸ್ಸು ಹಾಗೂ ದೇಹದ ಆರೋಗ್ಯಕ್ಕೆ ಪೂರಕವಾಗಿದ್ದು, ಯೋಗ ಸಂಜೀವಿನ ಇದ್ದಂತೆ. ಪ್ರತಿಯೊಬ್ಬರೂ ದಿನದ ೨೪ ಗಂಟೆಯಲ್ಲಿ ಒಂದು ಗಂಟೆಯನ್ನು ಯೋಗಾಭ್ಯಾಸಕ್ಕೆ ಮೀಸಲಿಡುವಂತೆ ಸಲಹೆ ನೀಡಿದರು.ಯೋಗ ಬಲ್ಲವನಿಗೆ ರೋಗದ ಭಯವಿಲ್ಲ, ರೋಗ ಇರುವವನಿಗೆ ಯೋಗದ ಅರಿವಿಲ್ಲ. ರೋಗ ಬರುವ ಮುನ್ನವೇ ಯೋಗಾಭ್ಯಾಸ ಮಾಡುವ ಯೋಗ ನಮ್ಮದಾಗಲಿ ಎಂದರು.ಯೋಗದಿಂದ ಯಾವುದೇ ಪ್ರಾಣಹಾನಿ ಇಲ್ಲ:ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರದಾನ ಕಾರ್ಯದರ್ಶಿ ಶ್ರೀ ಪುರುಷೋತ್ತಮನಂದನಾಥ ಸ್ವಾಮೀಜಿ ಮಾತನಾಡಿ, ದೇಹ ದಂಡನೆ ಮಾಡಲು ಹೋಗಿ ಎಷ್ಟೋ ಜನರು ಪ್ರಾಣ ಕುತ್ತು ತಂದುಕೊಂಡಿರುವವರಿದ್ದಾರೆ. ಆದರೆ ಯೋಗ ಮಾಡುವುದರಿಂದ ಯಾವುದೇ ತರಹ ಪ್ರಾಣ ಹಾನಿ ಇಲ್ಲ, ಹಣ ಖರ್ಚು ಮಾಡುವ ಆಗಿಲ್ಲ. ಹೆಚ್ಚು ಶ್ರಮ ಕೂಡ ಹಾಕುವ ಆಗಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಯೋಗವನ್ನು ಮಾಡಿ ಮನಸ್ಸಿನ ನೆಮ್ಮದಿ ಪಡೆದುಕೊಳ್ಳಬೇಕು ಎಂದು ಹೇಳಿದರು.ಯೋಗಶಾಸ್ತ್ರವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿ:
ಶ್ರೀರಂಗಪಟ್ಟಣ ಬೇಬಿ ಮಠ ಮತ್ತು ಚಂದ್ರವನ ಆಶ್ರಮ ಪೀಠಧ್ಯಕ್ಷರಾದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿಗಳು ಮಾತನಾಡಿ, ಶಾಲಾ ಪಠ್ಯ ಪುಸ್ತಕದಲ್ಲಿ ಎಲ್ಲಾ ವಿಷಯದ ಬಗ್ಗೆ ಪಾಠಗಳನ್ನು ಅಳವಡಿಸಿದ್ದಾರೆ ಅದೇ ರೀತಿ ಪಠ್ಯಪುಸ್ತಕದಲ್ಲಿ ಯೋಗ ಶಾಸ್ತ್ರವನ್ನು ಅಳವಡಿಸಿದರೆ ಆರೋಗ್ಯದ ಬಗ್ಗೆ ಅರಿವು ಹೆಚ್ಚಾಗುತ್ತದೆ. ಯೋಗಾಭ್ಯಾಸದಿಂದ ಅಂಗಾಂಗಗಳು ಬಲವಾಗುತ್ತವೆ, ಕಣ್ಣುಗಳು ದೃಷ್ಟಿ ಚೆನ್ನಾಗಿರುತ್ತದೆ, ಯಾವುದೇ ಅನಾರೋಗ್ಯವು ಸಹ ನಮ್ಮ ಬಳಿ ಸುಳಿಯುವುದಿಲ್ಲ ಆದ್ದರಿಂದ ದಿನ ನಿತ್ಯ ಯೋಗಾಭ್ಯಾಸ ಮಾಡಿ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಶೇಕ್ ತನ್ವೀರ್ ಆಸೀಫ್, ಎಸ್ಪಿ ಎನ್.ಯತೀಶ್, ಎಡಿಸಿ ಡಾ.ಹೆಚ್.ಎಲ್ ನಾಗರಾಜು, ಆಯುಷ್ ಇಲಾಖೆ ವೈದ್ಯಾಧಿಕಾರಿ ಡಾ.ಸೀತಾಲಕ್ಷ್ಮೀ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಓಂ ಪ್ರಕಾಶ್, ನೆಹರು ಯುವ ಕೇಂದ್ರದ ಅಧಿಕಾರಿ ರಾಜೇಶ್ ಕಾರಂತ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಶಂಕರನಾರಾಯಣ ಶಾಸ್ತ್ರಿ, ರೆಡ್ ಕ್ರಾಸ್ ಸಂಸ್ಥೆಯ ಗೌರವಾಧ್ಯಕ್ಷೆ ಮೀರಾಶಿವಲಿಂಗಯ್ಯ, ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್‌ನ ಭಕ್ತವತ್ಸಲ ಹಾಗೂ ಮತ್ತಿತರರು ಹಾಜರಿದ್ದರು.