ಶಿಕ್ಷಣದಲ್ಲಿ ಯೋಗ ಕಡ್ಡಾಯವಾಗಲಿ: ಬಿ.ನಾಗನಗೌಡ

| Published : Jun 24 2024, 01:34 AM IST

ಸಾರಾಂಶ

೫೦೦೦ ಸಾವಿರ ವರ್ಷಗಳ ಹಿಂದೆಯೇ ನಮ್ಮ ಋಷಿಮುನಿಗಳು ಅನುಸರಿಸಿ, ನಮಗೆ ನೀಡಿದ್ದ ಯೋಗವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳದಿರುವುದು ದುರಂತ.

ಸಂಡೂರು: ಶಿಕ್ಷಣದಲ್ಲಿ ಯೋಗ ಕಡ್ಡಾವಾಗಬೇಕಿದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾದ ಯೋಗವನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಬಿ.ನಾಗನಗೌಡ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಶುಕ್ರವಾರ ಸ್ಕಂದಗಿರಿ ಯೋಗ ಕೇಂದ್ರ, ವೆಸ್ಕೊ ಕಂಪನಿ ಹಾಗೂ ಜೆಸಿಐ ಸಂಡೂರು ವ್ಯಾಲಿ ಸಹಯೋಗದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯೋಗ ದೇಶದ ಋಷಿ ಮುನಿಗಳ ಕೊಡುಗೆಯಾಗಿದೆ. ೫೦೦೦ ಸಾವಿರ ವರ್ಷಗಳ ಹಿಂದೆಯೇ ನಮ್ಮ ಋಷಿಮುನಿಗಳು ಅನುಸರಿಸಿ, ನಮಗೆ ನೀಡಿದ್ದ ಯೋಗವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳದಿರುವುದು ದುರಂತ. ಆಧುನಿಕ ಕಾಲದಲ್ಲಿ ಆರ್ಥಿಕವಾಗಿ ನಾವು ಸಬಲರಾಗುತ್ತಿದ್ದರೂ, ಆರೋಗ್ಯ ವಿಷಯದಲ್ಲಿ ಬಡವರಾಗುತ್ತಿದ್ದೇವೆ. ಪ್ರಾಣಿ ಪಕ್ಷಿಗಳು ತಮ್ಮ ಆಹಾರ ಕ್ರಮವನ್ನು ಬದಲಾಯಿಸಿಕೊಂಡಿಲ್ಲ. ಆದರೆ, ನಾವು ಬಾಯಿರುಚಿಗಾಗಿ ಆಹಾರ ಕ್ರಮವನ್ನು ಬದಲಾಯಿಸಿಕೊಂಡಿರುವುದು ಸಹ ನಮ್ಮಲ್ಲಿನ ಅನಾರೋಗ್ಯಕ್ಕೆ ಕಾರಣವಾಗಿದೆ. ಉತ್ತಮ ಆರೋಗ್ಯಕ್ಕಾಗಿ ನಾವು ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮತ್ತು ಉತ್ತಮ ಆಹಾರ ಕ್ರಮವನ್ನು ಅನುಸರಿಸುವುದು ಅಗತ್ಯವಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಯೋಗ ಶಿಕ್ಷಕ ತುಮಟಿ ಶ್ರೀನಿವಾಸ್, ಸಂಡೂರಿನಲ್ಲಿ ೨೦೧೪ರಿಂದ ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ಜನತೆಗೆ ಹಾಗೂ ವಿದ್ಯಾರ್ಥಿಗಳಿಗೂ ಯೋಗ ತರಬೇತಿ ನೀಡಲಾಗುತ್ತಿದೆ. ಪಟ್ಟಣದಲ್ಲಿ ೫೦-೬೦ ಜನರು ತಮ್ಮ ಸಂಸ್ಥೆಯಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ. ಯೋಗ ಶಿಕ್ಷಣದ ಜೊತೆಗೆ ತಮ್ಮ ಸಂಸ್ಥೆಯಿಂದ ಶ್ರಮದಾನ, ಸ್ವಚ್ಛತಾ ಕಾರ್ಯಕ್ರಮ, ಜಾತ್ರೆಗಳ ಸಂದರ್ಭದಲ್ಲಿ ಪಾದಯಾತ್ರಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸುವುದು ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿನ ಪಾರ್ಕ್‌ಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವ ಯೋಜನೆ ಇದೆ ಎಂದರು.

ಮುಖ್ಯ ಅತಿಥಿಯಾಗಿದ ಆಗಮಿಸಿದ್ದ ಎಸ್‌ಪಿಎಸ್ ಬ್ಯಾಂಕಿನ ಸಿಇಒ ಎಂ.ಎಸ್ ರೇಣುಕಾ ಯೋಗದ ಮಹತ್ವ ಕುರಿತು ಮಾತನಾಡಿದರು. ನಂತರ ಉಪಸ್ಥಿತರಿದ್ದವರು ವಿವಿಧ ಯೋಗಾಭ್ಯಾಸ ನಡೆಸಿದರು.

ಸಂಗೀತ ಶಿಕ್ಷಕರಾದ ಬಾಬುರಾವ್ ಪ್ರಾರ್ಥಿಸಿದರು. ಗಡಗಿ ಉಮಾ ಸಂಜಯ್ ಸ್ವಾಗತಿಸಿದರು. ಗೋನಾಳ್ ನಿರ್ಮಲಾ ಕಾರ್ಯಕ್ರಮ ನಿರೂಪಿಸಿದರು. ಲಿಂಗಪ್ಪ ವಂದಿಸಿದರು. ಯೋಗ ಕೇಂದ್ರದ ಸದಸ್ಯರಾದ ಆಶಾಲತಾ ಸೋಮಪ್ಪ, ಸಿ.ಎಂ. ನಾಗಭೂಷಣ, ಸುರೇಶ್ ಘೋರ್ಪಡೆ, ರುದ್ರೇಶ್, ನೀಲಾಂಬಿಕೆ, ಪಂಪನಗೌಡ, ಸ್ನೇಹಾ, ಶಾರದಾ ಉಪಸ್ಥಿತರಿದ್ದರು.