ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಇಡೀ ವಿಶ್ವವೇ ನೆಮ್ಮದಿಯ ವಾತಾವರಣದಲ್ಲಿ ಜೀವಿಸುವ ನಿಟ್ಟಿನಲ್ಲಿ ಯೋಗಾಭ್ಯಾಸ ಬಳಕೆಗೆ ಬರಬೇಕು ಎಂದು ಭಾರತೀ ಯೋಗಧಾಮ ಸಂಸ್ಥಾಪಕ ಡಾ.ಕೆ.ಎಲ್.ಶಂಕರನಾರಾಯಣ ಜೋಯಿಸ್ ತಿಳಿಸಿದರು.ನಗರದ ಶ್ರೀ ನಟರಾಜ ಪ್ರತಿಷ್ಠಾನ, ಶ್ರೀ ಹೊಸ ಮಠ, ಬಸವಮಾರ್ಗ ಫೌಂಡೇಶನ್ ವತಿಯಿಂದ ಶ್ರೀ ನಟರಾಜ ಶಿಕ್ಷಣ ಸಂಸ್ಥೆಯ ಒಳಾಂಗಣದಲ್ಲಿ ಆಯೋಜಿಸಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಅವರು, ಬಹಳ ಮುಂದುವರಿದಿದ್ದೇವೆ ಎಂದು ಹೇಳಿಕೊಳ್ಳುವ ದೇಶದಲ್ಲಿ ಅಗಾಧವಾದ ಸಂಪತ್ತು ಇದೆ. ಆದರೆ, ಆ ದೇಶದ ಜನರಲ್ಲಿ ನೆಮ್ಮದಿಯೇ ಇಲ್ಲ. ನೆಮ್ಮದಿ ಹುಡುಕೊಂಡು ಆ ದೇಶದ ಜನರು ಭಾರತ ದೇಶದತ್ತ ಮುಖ ಮಾಡಿದ್ದಾರೆ. ಭಾರತ ಸಮಗ್ರ ಭೂ ಮಂಡಲಕ್ಕೆ ನೆಮ್ಮದಿಯ ಹಾದಿ ನೀಡಿದೆ ಎಂದು ಹೇಳಿದರು.
ಯೋಗ ಎಂದರೆ ಇಂದು ಕೇವಲ ಆಸನ ಅಥವಾ ಧ್ಯಾನ ಎನ್ನಲಾಗುತ್ತಿದೆ. ಆದರೆ, ಯೋಗ ಎಂದರೆ ಇಷ್ಟಕ್ಕೆ ಸೀಮಿತವಾಗಿಲ್ಲ. ಯೋಗ ಎಂದರೆ ಅಷ್ಟಾಂಗವನ್ನು ಚಾಚೂ ತಪ್ಪದೆ ಅಳವಡಿಸಿಕೊಳ್ಳುವುದು. ಇದೆ ನಿಜವಾದ ಯೋಗ. ಈ ನಿಟ್ಟಿನಲ್ಲಿ ಯುವ ಪೀಳಿಗೆ ಸಾಗಬೇಕು ಎಂದು ಅವರು ಸಲಹೆ ನೀಡಿದರು.ಆದರ್ಶ ವ್ಯಕ್ತಿತ್ವ ಅಳವಡಿಸಿಕೊಳ್ಳಿ:
ಬಸವಮಾರ್ಗ ಫೌಂಡೇಶನ್ ಸಂಸ್ಥಾಪಕ ಬಸವಣ್ಣ ಮಾತನಾಡಿ, ವಿದ್ಯಾರ್ಥಿಗಳು ಚಪ್ಪಾಳೆ ತಟ್ಟುವುದಕ್ಕೆ ಮಾತ್ರ ಸೀಮಿತರಾಗಬಾರದು. ನಮ್ಮ ಸಾಧನೆ ನೋಡಿ ಇತರರು ಚಪ್ಪಾಳೆ ತಟ್ಟುವ ರೀತಿಯಲ್ಲಿ ನಾವು ಬೆಳೆಯಬೇಕು. ಅಂತಹ ವ್ಯಕ್ತಿತ್ವವನ್ನು ನಾವು ಅಳವಡಿಸಿಕೊಳ್ಳಬೇಕು ಎಂದರು.ಮಕ್ಕಳು ಆದರ್ಶ ವ್ಯಕ್ತಿಗಳನ್ನು ಅನುಸರಿಸಬೇಕು. ಆದರ್ಶ ವ್ಯಕ್ತಿಗಳ ದಿನಚರಿ ಏನು, ಬಂದ ದಾರಿ ಹೇಗಿದೆ. ಕಷ್ಟದ ಸಮಯದಲ್ಲಿ ಅವರು ಯಾವ ರೀತಿ ಅದನ್ನು ಪರಿಹರಿಸಿಕೊಂಡು ಬಂದರು ಎಂಬುದನ್ನು ನಾವು ಒಮ್ಮೆ ಅವಲೋಕಿಸಬೇಕು. ಆ ಮೂಲಕ ಆ ದಾರಿಯಲ್ಲಿ ನಾವು ಸಾಗಿ, ನಾವೂ ಆದರ್ಶ ವ್ಯಕ್ತಿಯಾಗಿ ರೂಪುಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ನಾವು ಮನೆಯನ್ನು ಎಷ್ಟು ಪ್ರೀತಿ ಮಾಡುತ್ತೇವೋ ಅದೇ ರೀತಿ ಮಠಗಳನ್ನು ಪ್ರೀತಿ ಮಾಡಬೇಕು. ಮನೆಯಲ್ಲಿ ಮನೆಗೆ ಆಶ್ರಯ ಸಿಗದಿದ್ದರೆ ಅಂತಿಮವಾಗಿ ನಮಗೆ ಮಠದಲ್ಲಿ ಆಶ್ರಯ ಸಿಗುತ್ತದೆ. ಮನೆಗಾಗಿ ಸೀಮಿತವಾದವರು ಇಂದು ಅವರ ಮನೆಯ ಗೋಡೆಗೆ ಮಾತ್ರ ಸೀಮಿತವಾಗಿದ್ದಾರೆ. ಆದರೆ ಸಮಾಜಕ್ಕೆ ಮೀಸಲಾದವರು ಇಂದು ಪ್ರತಿಮೆಯಾಗಿ ರಾರಾಜಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ಪೀಳಿಗೆಗೆ ನಾವು ಆದರ್ಶ ವ್ಯಕ್ತಿಯಾಗಿ ನಿಲ್ಲಬೇಕು ಎಂದು ಅವರು ಕರೆ ನೀಡಿದರು.ಶ್ರೀನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಯೋಗಕ್ಕೆ ಮಹತ್ವದ ಸ್ಥಾನವಿದೆ. ಯೋಗ ಎಂದರೆ ಯೋಗವೇ, ಯೋಗ ಎಂದರೆ ಸಂಸ್ಕೃತಿ, ಯೋಗ ಎಂದರೆ ಸಂಪತ್ತು, ಯೋಗ ಎಂದರೆ ಅಧಿಕಾರ, ಯೋಗ ಎಂದರೆ ಯಶಸ್ಸು. ಸರ್ವಸ್ವವೂ ಯೋಗದಲ್ಲಿ ಅಡಕವಾಗಿದೆ. ಯಾರು ಅದನ್ನು ಅರ್ಥ ಮಾಡಿಕೊಳ್ಳುತ್ತಾರೋ ಅವರಿಗೆ ಅದು ಒಲಿಯುತ್ತದೆ ಎಂದು ಹೇಳಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಾಮೂಹಿಕ ಯೋಗಾಭ್ಯಾಸ ನಡೆಸಲಾಯಿತು. ಯೋಗ ಶಿಕ್ಷಕ ಕುವಲಾಶ್ವ ಅವರ ಮಾರ್ಗದರ್ಶನದಲ್ಲಿ 200 ಹೆಚ್ಚು ವಿದ್ಯಾರ್ಥಿಗಳು ಸಾಮೂಹಿಕವಾಗಿ ಯೋಗಾಸನ ಮಾಡಿದರು. ಶ್ರೀ ನಟರಾಜ ಪ್ರತಿಷ್ಠಾನ, ಶ್ರೀ ಹೊಸಮಠದ ವಿದ್ಯಾರ್ಥಿಗಳು ಯೋಗ ನೃತ್ಯ ರೂಪಕದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಪತ್ರಕರ್ತರಾದ ಎಂ.ಆರ್. ಸತ್ಯನಾರಾಯಣ, ಜೆ. ಶಿವಣ್ಣ ಮೊದಲಾದವರು ಇದ್ದರು.
ಯೋಗ ನಿರಂತರವಾಗಿರಬೇಕು- ಡಾ.ಎಸ್. ಗಾಂಧಿ ದಾಸ್ಕನ್ನಡಪ್ರಭ ವಾರ್ತೆ ಮೈಸೂರುನಾವು ಪ್ರತಿಯೊಬ್ಬರು ಸ್ವಯಂ ಇಚ್ಛೆಯಿಂದ ನಮ್ಮ ಆರೋಗ್ಯದ ದೃಷ್ಟಿಯಿಂದ ಪ್ರತಿದಿನ ಯೋಗ ಮಾಡಬೇಕು. ಯೋಗ ನಿರಂತರವಾಗಿರಬೇಕು ಎಂದು ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ನಿರ್ದೇಶಕ ಡಾ.ಎಸ್.ಗಾಂಧಿ ದಾಸ್ ಸಲಹೆ ನೀಡಿದರು.ನಗರದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ಆಯೋಜಿಸಿದ್ದ ಅಂತಾರಾಷ್ಟೀಯ ಯೋಗ ದಿನಾಚರಣೆಯ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ದೇಶವು ಇಡಿ ಪ್ರಪಂಚಕ್ಕೆ ಯೋಗವನ್ನು ಕೊಡುಗೆಯಾಗಿ ನೀಡಿದೆ. ಯೋಗವನ್ನು ನಿರಂತರವಾಗಿ ಅಭ್ಯಾಸ ಮಾಡಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಸಾಮರಸ್ಯ ಮತ್ತು ಶಾಂತಿಗಾಗಿ ಯೋಗ ಅವಶ್ಯಕ ಎಂದು ಹೇಳಿದರು.ಮೈಸೂರು ಅಕ್ಯಾಡೆಮಿ ಆಪ್ ಯೋಗದ ರಮೇಶ್ ಕುಮಾರ್, ಸೂರ್ಯ ಸಂತೋಷ, ಜಿಎಸ್ಎಸ್ ಯೋಗ ಪೌಂಡೇಷನ್ ಪಿ. ಶ್ರೀಹರಿ ದ್ವಾರಕನಾಥ ಅವರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸವನ್ನು ಮಾಡಲಾಯಿತು. ಈ ಸಮಯದಲ್ಲಿ ಭದ್ರಾಸಾನ, ವಕ್ರಾಸನ, ವೃಕ್ಷಾಸನ, ಮಕರಾಸನ, ಭುಜಂಗಾಸನ, ಸೇತುಬಂಧು, ಪ್ರಾಣಯಾಮ ನಾಡಿಶೋಧನಾಸನ ಮುಂತಾದ ಯೋಗಾಸನಗಳನ್ನು ಅಭ್ಯಾಸಿಸಲಾಯಿತು.ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ವಿಜ್ಞಾನಿಗಳಾದ ಡಾ.ಕೆ.ಬಿ. ಚಂದ್ರಶೇಖರ್, ಡಾ.ಎಸ್. ಬಾಲಸರಸ್ವತಿ, ಡಾ.ಆರ್. ಮೀನಾಲ್, ಡಾ.ಸಿ.ಎಂ. ಬಾಬು, ಕೆ. ಗಾಯಿತ್ರಿ, ಡಾ.ಆರ್. ಭಾಗ್ಯ ಮೊದಲಾದವರು ಇದ್ದರು.