ಯೋಗ, ಸೌಂದರ್ಯಲಹರಿ ಕಾರ್ಯಕ್ರಮ

| Published : Jul 11 2025, 12:32 AM IST

ಸಾರಾಂಶ

ಯೋಗ ಮಾಡಲು ಯೋಗ, ಯೋಗ್ಯತೆ ಎರಡೂ ಇರಬೇಕು.

ಯಲ್ಲಾಪುರ: ಯೋಗ ಮಾಡಲು ಯೋಗ, ಯೋಗ್ಯತೆ ಎರಡೂ ಇರಬೇಕು. ಯೋಗದ ಮೊದಲ ಸೂತ್ರ ಯೋಗಃ ಚಿತ್ತವೃತ್ತಿ ನಿರೋಧಃ ಚಂಚಲವಾದ ಮನವನ್ನು ಯೋಗದ ಮೂಲಕ ಏಕಾಗ್ರಗೊಳಿಸಿ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಬೆಂಗಳೂರಿನ ಎಂಎಲ್ಎ ಪಿಯು ಕಾಲೇಜಿನ ಪ್ರಾಂಶುಪಾಲ ಡಾ. ಗಣಪತಿ ಹೆಗಡೆ ಹೇಳಿದರು.

ಅವರು ಮಹಿಳಾ ಪತಂಜಲಿ ಯೋಗಸಮಿತಿ, ಓಂಕಾರ ಯೋಗ ಕೇಂದ್ರ, ಮೈತ್ರಿ ಸಂಸ್ಕೃತ-ಸಂಸ್ಕೃತಿ ಪ್ರತಿಷ್ಠಾನಮ್ ಗಳ ಸಂಯುಕ್ತ ಆಶ್ರಯದಲ್ಲಿ "ಧ್ಯಾನ ಲಹರಿ " ಮುದ್ರೆ ಮತ್ತು ಪ್ರಾಣಾಯಾಮದೊಂದಿಗೆ ಸೌಂದರ್ಯಲಹರಿ ಉಪಾಸನೆಯ ಪ್ರಾಯೋಗಿಕ ಕಾರ್ಯಕ್ರಮವನ್ನು ಪಟ್ಟಣದ ನಾಯಕನಕೆರೆಯ ಸುಮಾ ಹಾಗೂ ಉಮೇಶ್ ಭಟ್ಟ ಏಕಾನರವರ ನಿವಾಸ ''''''''ಉಪಾಸನಾ''''''''ದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ಪತಂಜಲಿಗಳ ಸಂದೇಶ ಮುದ್ರೆಗಳು ಆರೋಗ್ಯ ವರ್ಧಿಸುವುದರ ಜೊತೆಗೆ ಮಾನಸಿಕ, ಆಧ್ಯಾತ್ಮಿಕವಾಗಿ ಉನ್ನತ ಮಟ್ಟಕ್ಕೆ ಒಯ್ಯುವ ಸಾಧನವಾಗಿದೆ. ಈ ನಿಟ್ಟಿನಲ್ಲಿ ಸೌಂದರ್ಯಲಹರಿಯಲ್ಲಿ ಸಪ್ತಚಕ್ರಗಳ ಕುರಿತು ವರ್ಣಿಸಲಾದ ಪ್ರಮುಖ ಶ್ಲೋಕಗಳನ್ನು ಆರಿಸಿ ಅದಕ್ಕೆ ತಕ್ಕ ಮುದ್ರೆಗಳೊಂದಿಗೆ ಧ್ಯಾನವನ್ನು ಮಾಡುವ ವಿನೂತನ ಸಂಯೋಜನೆಯನ್ನು ಯೋಗಸಾಧಕ ಸುಬ್ರಾಯ ಭಟ್ಟ ಜನತೆಗೆ ನೀಡಿದ್ದಾರೆ. ಇದು ಒಂದು ವಿನೂತನ ಕಾರ್ಯಕ್ರಮವಾಗಿದೆ ಎಂದರು.

ವಿ.ಎನ್. ಭಟ್ಟ ಏಕಾನ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ಯೋಗ ಮಾಡುವುದರಿಂದ ಕುಟುಂಬದಲ್ಲಿ ಆರೋಗ್ಯಪೂರ್ಣ ವಾತಾವರಣ ನಿರ್ಮಾಣವಾಗುತ್ತದೆ ಎಂದರು.

ಅತಿಥಿಗಳಾಗಿ ಆಕ್ಯುಪ್ರೆಷರ್ ಚಿಕಿತ್ಸಕಿ ಗೀತಾ ವೈದ್ಯ ಹಾಗೂ ಮಹಿಳಾ ಪ್ರಭಾರಿ ಶೈಲಶ್ರೀ ಭಟ್ಟ ಇದ್ದರು. ಮೈತ್ರಿ ಪ್ರತಿಷ್ಠಾನದಿಂದ ಕಾರ್ಯಕ್ರಮಕ್ಕೆ ಸ್ಥಳಾವಕಾಶ ನೀಡಿದ ನಾರಾಯಣ ಭಟ್ಟ ಏಕಾನ್ ದಂಪತಿಗಳನ್ನು ಹಾಗೂ ಕಾರ್ಯಕ್ರಮದ ಸಂಯೋಜಕ ಹಾಗೂ ಯೋಗ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಸುಬ್ರಾಯ ಭಟ್ಟ ಆನೆಜಡ್ಡಿ ಅವರನ್ನು ಸನ್ಮಾನಿಸಲಾಯಿತು.

ಆಶಾ ಬಗನಗದ್ದೆ, ಸಂಧ್ಯಾ ಹೆಗಡೆ, ಸರೋಜಾ ಹೆಗಡೆ, ಗಂಗಾ ಭಟ್ಟ, ಸುಮಾ ಭಟ್ಟ ಸೌಂದರ್ಯಲಹರಿ ಹಾಡಿದರು. ಸುಬ್ರಾಯ ಭಟ್ಟ ಶ್ಲೋಕಗಳಿಗೆ ಅರ್ಥ ಹೇಳಿ ಚಕ್ರಗಳಿಗೆ ಮುದ್ರೆ ಸಂಯೋಜಿಸಿದರು. ಸಿಂಚನಾ ಏಕಾನ್ ಸ್ವಾಗತಿಸಿ, ನಿರ್ವಹಿಸಿದರು. ಧನ್ಯಶ್ರೀ ಭಟ್ಟ ವಂದಿಸಿದರು.