ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ತನ್ನ ಪತಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಸಂಶಯ ವ್ಯಕ್ತಪಡಿಸಿ ಯೋಗ ಶಿಕ್ಷಕಿಯನ್ನು ಅಪಹರಿಸಿ, ಕೊಲೆ ಮಾಡಲು ಸುಪಾರಿ ನೀಡಿದ್ದ ಮಹಿಳೆ ಸೇರಿದಂತೆ 6 ಮಂದಿ ಅಪಹರಣಕಾರರನ್ನು ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸರು ಬಂಧಿಸಿದ್ದಾರೆ.ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯವರಾದ ಯೋಗ ಶಿಕ್ಷಕಿ ಸುಲೋಚನಾ ಅಪಹರಣವಾಗಿದ್ದ ಮಹಿಳೆ. ಮದುವೆಯಾಗಿ ಪತಿಯಿಂದ ಪ್ರತ್ಯೇಕವಾಗಿ ವಾಸವಿದ್ದರು. ಇನ್ನೂ ಅಪಹರಣಕ್ಕೆ ಸುಪಾರಿ ನೀಡಿದ್ದು ಬಿಂದು ಎಂಬ ಮಹಿಳೆ.
ಬಿಂದು ಎಂಬ ಮಹಿಳೆಯು ತಮ್ಮ ಪತಿ ಸಂತೋಷ್ ಕುಮಾರ್ ಜೊತೆ ಯೋಗ ಶಿಕ್ಷಕಿ ಸುಲೋಚನಾ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಶಂಕೆ ವ್ಯಕ್ತಪಡಿಸಿ ಖಾಸಗಿ ಡಿಟೆಕ್ಟಿವ್ ಏಜೆನ್ಸಿ ಮಾಲೀಕ ಸತೀಶ್‌ರೆಡ್ಡಿ ಎಂಬಾತನಿಗೆ ಕೊಲೆ ಮಾಡಲು ಸುಪಾರಿ ನೀಡಿದ್ದಳು.ಸುಪಾರಿ ಮೇರೆಗೆ ಸತೀಶ್ ರೆಡ್ಡಿ, ಯೋಗ ಶಿಕ್ಷಕಿ ಸುಲೋಚನಾ ಬಳಿ ಯೋಗ ಕಲಿಯುವ ನೆಪದಲ್ಲಿ ಆಕೆಯ ಪರಿಚಯ ಮಾಡಿಕೊಂಡು ಸಲುಗೆ ಬೆಳೆಸಿಕೊಂಡಿದ್ದ. ನಂತರ ಗನ್ ಶ್ಯೂಟಿಂಗ್ ತರಬೇತಿ ನೀಡುವುದಾಗಿ ಶಿಕ್ಷಕಿ ಸುಲೋಚನಾಳ ಮನೆಗೆ ಬಂದಿದ್ದ ಸತೀಶ್‌ರೆಡ್ಡಿ ಮಾಜಿ ಸೈನಿಕ ಎನ್ನಲಾಗಿದೆ. ಕಳೆದ ಆಕ್ಟೋಬರ್ 23 ರಂದು ಯೋಗ ಶಿಕ್ಷಕಿ ಸುಲೋಚನಾಗೆ ಗನ್ ಶ್ಯೂಟಿಂಗ್ ಟ್ರೈನಿಂಗ್ ಹೇಳಿ ಕೊಡುವುದಾಗಿ ನಂಬಿಸಿ, ಸತೀಶ್ ರೆಡ್ಡಿ ಡಿಎಸ್ ಮ್ಯಾಕ್ಸ್ ಸನ್ವರ್ತ್ ಅಪಾರ್ಟ್ಮೆಂಟ್ನಿಂದ ಕರೆದುಕೊಂಡು ಹೋಗಿದ್ದಾನೆ. ಸತೀಶ್ ರೆಡ್ಡಿ ತನ್ನ ಸಹಚರರಾದ ನಾಗೇಂದ್ರ ರೆಡ್ಡಿ, ರಮಣಾರೆಡ್ಡಿ, ರವಿಚಂದ್ರನ ಜೊತೆ ಸೇರಿ ಸುಲೋಚನಾ ಕಾರಿನಲ್ಲಿ ಹೊರಟಿದ್ದು, ಇಡೀ ದಿನ ಬೆಂಗಳೂರಿನ ಹಲವು ಕಡೆ ಸುತ್ತಾಡಿ ಕೊನೆಗೆ ರಾತ್ರಿ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಧನಮಿಟ್ಟೇನಹಳ್ಳಿ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಯೋಗ ಶಿಕ್ಷಕಿ ಸುಲೋಚನಾಳನ್ನು ಕಾರಿನಿಂದ ಕೆಳಗೆ ಇಳಿಸಿ ಆಕೆಯ ಮೇಲೆ ಹಲ್ಲೆ ನಡೆಸಿ, ಅರೆಬೆತ್ತಲೆಗೊಳಿಸಿ ಲೈಂಗಿಕ ದೌರ್ಜನ್ಯ ನಡೆಸಿ, ಅತ್ಯಾಚಾರಕ್ಕೆ ಯತ್ನಿಸಲಾಗಿದೆ. ಶಿಕ್ಷಕಿ ಪ್ರತಿರೋಧ ತೋರಿದಾಗ ಕೊನೆಗೆ ಕಾರಿನಲ್ಲಿದ್ದ ಚಾರ್ಜರ್ ವೈರ್ ನಿಂದ ಕುತ್ತಿಗೆಗೆ ಬಲವಾಗಿ ಬಿಗಿದು ಕೊಲೆ ಮಾಡಲು ಯತ್ನಿಸಿದ್ದಾರೆ. ಆದರೆ ಯೋಗ ಶಿಕ್ಷಕಿಯಾಗಿದ್ದ ಸುಲೋಚನಾ ಕುತ್ತಿಗೆ ಬಿಗಿದಾಗ ನಾಲಿಗೆ ಹೊರ ಚಾಚಿ ಸತ್ತಂತೆ ನಾಟಕ ಮಾಡಿ ಉಸಿರು ಬಿಗಿದು ಹಿಡಿದು ಕೊಂಡಿದ್ದಳು. ಶಿಕ್ಷಕಿ ಸತ್ತು ಹೋಗಿದ್ದಾಳೆಂದು ಭಾವಿಸಿ ಗುಂಡಿ ತೋಡಿ ಆಕೆಯ ಮೇಲೆ ಮರದ ಕೊಂಬೆಗಳನ್ನು ಹಾಕಿ ಹೋಗಿದ್ದರು. ದುಷ್ಕರ್ಮಿಗಳು ಹೋದ ಬಳಿಕ ಗುಂಡಿಯಿಂದ ಎದ್ದು ಹೊರಬಂದಿದ್ದ ಸುಲೋಚನಾ, ಬೆಳಗ್ಗೆ ಧನಮಿಟ್ಟೇನ ಹಳ್ಳಿಯಲ್ಲಿ ಸ್ಥಳೀಯರ ಮನೆಗೆ ಹೋಗಿ ಘಟನೆ ವಿವರಿಸಿ, ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿ ಆಸ್ಪತ್ರೆಗೆ ದಾಖಲಾಗಿದ್ದಳು.
ಯೋಗಶಿಕ್ಷಕಿ ಸುಲೋಚನಾ ದೂರಿನನ್ವಯ ದಿಬ್ಬೂರಹಳ್ಳಿ ಪೊಲೀಸರು ಸುಪಾರಿ ನೀಡಿದ್ದ ಬಿಂದು ಹಾಗೂ ಅಪಹರಿಸಿದ್ದ ಸತೀಶ್ ರೆಡ್ಡಿ, ನಾಗೇಂದ್ರ ರೆಡ್ಡಿ, ರಮಣಾರೆಡ್ಡಿ, ರವಿಚಂದ್ರ ಸೇರಿದಂತೆ ಶಿಕ್ಷಕಿಯನ್ನು ಅಪಹರಿಸಿ ಕೊಲೆ ಮಾಡಲು ಕೊಪ್ಪಳದಿಂದ ಕಾರು ಕಳವು ಮಾಡಿಕೊಟ್ಟಿದ್ದ ಅಪ್ರಾಪ್ತ ಬಾಲಕನನ್ನೂ ಬಂಧಿಸಿದ್ದಾರೆ.ಆರೋಪಿಗಳ ಪತ್ತೆಗೆ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸೆ ವಿಶೇಷ ತನಿಖಾ ತಂಡ ರಚಿಸಿದ್ದರು.