ಅಧ್ಯಾತ್ಮ ಪ್ರಜ್ಞೆ ಬೆಳೆಸುವ ಯೋಗ

| Published : May 14 2024, 01:00 AM IST

ಸಾರಾಂಶ

ಚಂಚಲ ಮಾನವನ ಮನವನ್ನು ಪ್ರಸನ್ನವಾಗಿಸಲು ಮತ್ತು ಅನೇಕ‌ ಮನೋ ದೈಹಿಕ ಕಾಯಿಲೆಗಳಿಗೆ ಯೋಗವು ಸಹ ಒಂದು ಚಿಕಿತ್ಸೆಯಾಗಿ ಸಹಕಾರಿಯಾಗಿದೆ.

ಧಾರವಾಡ:

ಯೋಗವು ಮಾನವನ ಸರ್ವತೋಮುಖ ವಿಕಾಸ ಮತ್ತು ಅಧ್ಯಾತ್ಮ ಪ್ರಜ್ಞೆ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದು ಕವಿವಿ ತತ್ವಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎನ್.ಜಿ. ಮಹದೇವಪ್ಪ ಹೇಳಿದರು.

ಇಲ್ಲಿನ ಸಪ್ತಾಪುರ ಬಳಿಯ ಪವನ ನಗರಿಯಲ್ಲಿ ಬಸವ ಜಯಂತಿ ಪ್ರಯುಕ್ತ ನವದೆಹಲಿಯ ಅಪ್ಪಾ ಯೋಗ ಅಕಾಡೆಮಿಯ ಧಾರವಾಡ ಶಾಖೆ ಉದ್ಘಾಟಿಸಿದ ಅವರು, ಯೋಗಾಭ್ಯಾಸಿಯು ಯೋಗದ ಎಲ್ಲ ಅಂಗಗಳನ್ನು ಕ್ರಮೇಣ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಯೋಗದ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯ ಎಂದರು.

ಮನೋವೈದ್ಯ ಡಾ. ಆನಂದ ಪಾಂಡುರಂಗಿ ಮಾತನಾಡಿ, ಚಂಚಲ ಮಾನವನ ಮನವನ್ನು ಪ್ರಸನ್ನವಾಗಿಸಲು ಮತ್ತು ಅನೇಕ‌ ಮನೋ ದೈಹಿಕ ಕಾಯಿಲೆಗಳಿಗೆ ಯೋಗವು ಸಹ ಒಂದು ಚಿಕಿತ್ಸೆಯಾಗಿ ಸಹಕಾರಿಯಾಗಿದೆ. ನಿತ್ಯ ಯೋಗಾಭ್ಯಾಸವು ದೈಹಿಕ, ಮಾನಸಿಕ ಸ್ವಾಸ್ಥ್ಯಕ್ಕೆ ಅವಶ್ಯಕ ಎಂದು ಹೇಳಿದರು.

ಡಾ. ಎಸ್.ಆರ್. ಪಂಚಮುಖಿ ಮಾತನಾಡಿ, ಯೋಗ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಯೋಗ ವಿಜ್ಞಾನಿ ಡಾ. ಈಶ್ವರ ಬಸವರಡ್ಡಿ ಅವರ ಮಾರ್ಗದರ್ಶನದಲ್ಲಿ ಯೋಗ ಅಕಾಡೆಮಿ ಸ್ಥಾಪಿತವಾಗುತ್ತಿರುವುದು ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಯೋಗ ಮಾರ್ಗದರ್ಶಕ ಡಾ. ಈಶ್ವರ ಬಸವರಡ್ಡಿ, ಅಕಾಡೆಮಿ ವತಿಯಿಂದ ಪ್ರತಿ ತಿಂಗಳು ನಾಲ್ಕನೇ ಶನಿವಾರ, ಭಾನುವಾರ ಯೋಗ ಶಿಕ್ಷಕ ಮತ್ತು ಚಿಕಿತ್ಸಕರಿಗೆ ಉಚಿತ ಯೋಗ ಕಾರ್ಯಾಗಾರ, ನಿತ್ಯ ಯೋಗ ತರಬೇತಿ ಮತ್ತು ಚಿಕಿತ್ಸಾ ವರ್ಗ ನಡೆಸಲಾಗುವುದು ಎಂದರು.

ವಂದನಾ ಕುಲಕರ್ಣಿ ಪ್ರಾರ್ಥಿಸಿದರು. ಡಾ. ಕುಸಮಾ ಬಸವರಡ್ಡಿ ಸ್ವಾಗತಿಸಿದರು. ಶಶಿಕಲಾ ಬಸವರಡ್ಡಿ ನಿರೂಪಿಸಿದರು. ಪ್ರೊ. ನಂದಿಬೇವೂರ, ಡಾ. ವಿಶ್ವನಾಥ ಚಿಂತಾಮಣಿ, ಡಾ. ಎಂ.ಎನ್. ಚಲವಾದಿ, ಶಂಕರ ಬಸವರಡ್ಡಿ ಇದ್ದರು.