ಸಾರಾಂಶ
ಯೋಗವು ಧನಾತ್ಮಕ ಭಾವನೆ ಬಿತ್ತುವ ಜತೆಗೆ ಮಧುಮೇಹ ಮತ್ತು ರಕ್ತದೊತ್ತಡ ನಿವಾರಣೆಗೆ ಉತ್ತಮ ಮದ್ದಾಗಿದ್ದು, ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮತೋಲನದಲ್ಲಿರಿಸಲು ನಿತ್ಯ ಯೋಗ ಅಳವಡಿಸಿಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಕುರುಗೋಡು
ಯೋಗವು ಧನಾತ್ಮಕ ಭಾವನೆ ಬಿತ್ತುವ ಜತೆಗೆ ಮಧುಮೇಹ ಮತ್ತು ರಕ್ತದೊತ್ತಡ ನಿವಾರಣೆಗೆ ಉತ್ತಮ ಮದ್ದಾಗಿದ್ದು, ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮತೋಲನದಲ್ಲಿರಿಸಲು ನಿತ್ಯ ಯೋಗ ಅಳವಡಿಸಿಕೊಳ್ಳಬೇಕು ಎಂದು ಕೊಟ್ಟೂರು ಸ್ವಾಮಿ ಸಂಸ್ಥಾನ ಶಾಖಾ ವಿರಕ್ತ ಮಠದ ನಿರಂಜನ ಪ್ರಭು ಶ್ರೀಗಳು ಹೇಳಿದರು.ಪಟ್ಟಣದ ಕೊಟ್ಟೂರು ಸ್ವಾಮಿ ಸಂಸ್ಥಾನ ಶಾಖಾ ವಿರಕ್ತ ಮಠದಲ್ಲಿ ಆಯೋಜಿಸಿದ್ದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದರು.
ತಿಳಿದವರೊಂದಿಗೆ ಅರ್ಧಗಂಟೆ ಕಳೆದರೆ ನಾಲ್ಕು ಪುಸ್ತಕಗಳನ್ನು ಓದಿದಂತೆ. ಯೋಗಿಗಳೊಂದಿಗೆ ಅರ್ಧಗಂಟೆ ಕಳೆದರೆ ಅರ್ಧ ಬದುಕನ್ನೇ ದಾಟಿದಂತೆ ಎನ್ನುವ ಪೂಜ್ಯ ಸಿದ್ದೇಶ್ವರ ಸ್ವಾಮಿಗಳ ಮಾತಿನಂತೆ ಎಲ್ಲರೂ ನಿತ್ಯ ಅರ್ಧಗಂಟೆ ಯೋಗ ಅಳವಡಿಸಿಕೊಂಡು ಆರೋಗ್ಯಕರ ಜೀವನ ನಡೆಸಬೇಕು ಎಂದರು.ತಹಶೀಲ್ದಾರ್ ನರಸಪ್ಪ ಮಾತನಾಡಿ, ಭಾರತೀಯ ಪುರಾತನ ಯೋಗ ಕಲೆಯನ್ನು ಭಾರತೀಯರು ಕೀಳಾಗಿ ಕಾಣುತ್ತಿದ್ದಾರೆ. ಆದರೆ ವಿದೇಶಿಯರು ಪೂಜ್ಯನೀಯವಾಗಿ ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯಕರ ಜೀವನ ಸಾಗಿಸುತ್ತಿದ್ದಾರೆ. ಅರ್ಧಗಂಟೆ ಯೋಗ ಸಾಧನೆಯಿಂದ ದಿನಪೂರ್ತಿ ಲವಲವಿಕೆಯಿಂದ ಇರಬಹುದು. ಮನಸ್ಸಿಗೆ ಶಾಂತಿ, ದೇಹಕ್ಕೆ ಶಕ್ತಿ ನೀಡುವ ಯೋಗವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಿಪಿಐ ವಿಶ್ವನಾಥ ಹಿರೇಗೌಡರ್ ಮಾತನಾಡಿ, ಎಲ್ಲರೂ ನಿತ್ಯ ಜೀವನದಲ್ಲಿ ಯೋಗ ಅಳವಡಿಸಿಕೊಂಡು ಆರೋಗ್ಯಕರ ಜೀವನ ಸಾಗಿಸಬೇಕು. ದೈಹಿಕ ಮತ್ತು ಮಾನಸಿಕ ಆರೋಗ್ಯ ಸರಿ ಇದ್ದರೆ ಮಾತ್ರ ಉತ್ಸಾಹದಿಂದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯ ಎಂದರುಪಿಎಸ್ಐ ಸುಪ್ರಿತ್ ವಿರುಪಾಕ್ಷಪ್ಪ, ಪುರಸಭೆ ಮುಖ್ಯಾಧಿಕಾರಿ ಹರ್ಷವರ್ಧನ ರೆಡ್ಡಿ, ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ, ಚಾನಾಳು ಅಮರೀಷ್, ಬಿಜೆಪಿ ಮಂಡಲ ಅಧ್ಯಕ್ಷ ಮದಿರೆ ಕುಮಾರಸ್ವಾಮಿ, ಮೇಲಗಿರಿ ಬಸವರಾಜ, ನಟರಾಜ, ಟಿ.ಮಂಜುನಾಥ, ಹೂಗಾರ್ ಯೋಗೇಶ್, ಓಬಳೇಶ್ ಮತ್ತು ಸದಾಶಿವ ಸ್ವಾಮಿ ಇದ್ದರು.