ಸಾರಾಂಶ
ಡಿಸಿಎಂಸಿ ಪ್ರೌಢ ಶಾಲಾ ಆವರಣದಲ್ಲಿ ಅಂತಾರಾಷ್ಟೀಯ ಯೋಗ ದಿನಾಚರಣೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರವೈದ್ಯರು ಗುಣಪಡಿಸಲಾಗದ ಅನೇಕ ಕಾಯಿಲೆಗಳು ಯೋಗಾಸನದಿಂದ ಗುಣವಾಗಿದೆ ಎಂದು ತಾಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಸ್.ಎಸ್.ಶಾಂತಕುಮಾರ್ ತಿಳಿಸಿದರು.
ಭಾನುವಾರ ತಾಲೂಕು ಕಸಾಪ ಮಹಿಳಾ ಘಟಕ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಹಾಗೂ ಡಿಸಿಎಂಸಿ ವಿದ್ಯಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಡಿಸಿಎಂಸಿ ಪ್ರೌಢ ಶಾಲೆ ಆವರಣದಲ್ಲಿ ನಡೆದ ಯೋಗೋತ್ಸವ - ಅಂತಾರಾಷ್ಟೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಸತತ ಯೋಗಾಸನ ಮಾಡುವುದರಿಂದ ಜೀವನದಲ್ಲಿ ಶಿಸ್ತು, ಪ್ರಾಮಾಣಿಕತೆ ಬರಲಿದೆ. ಯೋಗ ಬಲ್ಲವನಿಗೆ ರೋಗವಿಲ್ಲ. ಪ್ರತಿ ದಿನ ಯೋಗ, ಪ್ರಾಣಾಯಾಮ, ಧ್ಯಾನವನ್ನು ನಿಯಮಿತವಾಗಿ ಮಾಡುತ್ತಾ ಬಂದರೆ ಕೋಪ ನಿಗ್ರಹಿಸುವ ಶಕ್ತಿ ಬರಲಿದೆ. ಮನಸ್ಸಿನಲ್ಲಿ ಶಾಂತತೆ ಕಾಪಾಡಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಗ್ರಹಣ ಶಕ್ತಿ ಹೆಚ್ಚಾಗಲಿದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪೂರ್ಣೇಶ್ ಆಶಯ ಭಾಷಣ ಮಾಡಿ, ಮನಷ್ಯನ ಮನಸ್ಸು ಸದಾ ಚಂಚಲ ವಾಗಿರುತ್ತದೆ. ಯೋಗದಿಂದ ಮನಸ್ಸು ಹತೋಟಿಗೆ ಬರುತ್ತದೆ. ರೋಗ ಬಂದ ಮೇಲೆ ವೈದ್ಯರ ಬಳಿ ಹೋಗು ವುದಕ್ಕಿಂತ ರೋಗ ಬಾರದಂತೆ ಯೋಗಾಸನ ಮಾಡಿದರೆ ಒಳ್ಳೆಯದು. ವಿದ್ಯಾರ್ಥಿಗಳು ಬಾಲ್ಯದಿಂದಲೇ ಯೋಗಾಸನ ಮಾಡಬೇಕು ಎಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ಮಾತನಾಡಿ, 5 ಸಾವಿರ ವರ್ಷಗಳ ಹಿಂದೆ ಇತಿಹಾಸ ಇರುವ ಯೋಗವನ್ನು ಪತಂಜಲಿ ಮಹರ್ಷಿಗಳು ಜಗತ್ತಿಗೆ ಪರಿಚಯಿಸಿದರು. ಪ್ರತಿ ವರ್ಷ ಜೂನ್ 21 ರಂದು ಅಂತಾರಾಷ್ಟೀಯ ಯೋಗ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಸಾಹಿತ್ಯಕ್ಕೂ , ಯೋಗಕ್ಕೂ ಅವಿನಾಭಾವ ಸಂಬಂಧವಿದೆ. ಉತ್ತಮ ಸಾಹಿತ್ಯ ರಚನೆಗೆ ಉಲ್ಲಾಸಮಯ ಮನಸ್ಸು, ಅವಶ್ಯಕವಾಗಿದೆ. ಆದ್ದರಿಂದ ಕಸಾಪ ಸಾಹಿತ್ಯದ ಜೊತೆ ಯೋಗಕ್ಕೂ ಮಹತ್ವ ನೀಡಿದೆ. ಸದಾ ಗೊಂದಲದ ಗೂಡಾಗಿರುವ ಮನಸ್ಸನ್ನು ಹತೋಟಿಯಲ್ಲಿಡಲು, ಒತ್ತಡದ ನಿವಾರಣೆಗೆ ಯೋಗ ಅವಶ್ಯಕ ಎಂದರು.
ಬ್ರಹ್ಮ ಕುಮಾರಿ ಈಶ್ವರೀ ವಿಶ್ವ ವಿದ್ಯಾಲಯದ ಸಂಚಾಲಕಿ ಬಿ.ಕೆ.ಪ್ರಮಾಳಕ್ಕೆ ಉಪನ್ಯಾಸ ನೀಡಿ, ಯೋಗ ಎಂಬುದು ಸಂಸ್ಕೃತ ಪದವಾಗಿದೆ. ಯಜ್ ಎಂಬ ಶಬ್ದದಿಂದ ಬಂದಿದೆ. ಅಂದರೆ ಜೋಡಣೆ ಎಂದರ್ಥವಾಗುತ್ತದೆ. ಮನಸ್ಸು ಹಾಗೂ ದೇಹವನ್ನು ಜೋಡಿಸುವುದೇ ಯೋಗ. ರಾಜ ಯೋಗದಿಂದ ನಮ್ಮ ಸಂಪರ್ಕ ನೇರವಾಗಿ ಪರಮಾತ್ಮನೊಂದಿಗೆ ಜೋಡಣೆ ಯಾಗುತ್ತದೆ. ನಮಗೆ ಅರಿವಲ್ಲದಂತೆ ನಮ್ಮಲ್ಲಿ ಶಾಂತಿ, ಪ್ರೀತಿ, ಆನಂದ, ಶಕ್ತಿ, ಸತ್ಯತೆ ಮುಂತಾದ ದೈವಿ ಗುಣಗಳು ನಮ್ಮಲ್ಲಿ ಬೆಳೆಯುತ್ತದೆ. ಕೆಟ್ಟ ಆಲೋಚನೆಗಳು ದೂರವಾಗಿ ಏಕಾಗ್ರತೆಯಿಂದ ಮನೋಬಲ ವೃದ್ದಿಯಾಗುತ್ತದೆ ಎಂದರು.ಯೋಗಾಸನದಲ್ಲಿ 80 ಮಕ್ಕಳು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಚಿಕ್ಕಮಗಳೂರಿನ ಪತಂಜಲಿ ಯೋಗ ಶಿಕ್ಷಕ ದಿವಾಕರ ಭಟ್ ವಿದ್ಯಾರ್ಥಿಗಳಿಗೆ ಸರಳವಾಗಿ ಪ್ರಾಣಾಯಾಮ, ತಾಡಾಸನ, ವೀರಭದ್ರಾಸನ ಮುಂತಾದವುಗಳನ್ನು ಕಲಿಸಿಕೊಟ್ಟರು. ಅತಿಥಿಗಳಾಗಿ ತಾಲೂಕು ಒಕ್ಕಲಿಗರ ಸಂಘದ ಖಜಾಂಚಿ ಕಟಗಳಲೆ ಲೋಕೇಶ್, ಡಿಸಿಎಂಸಿ ಬಾಲಕಿಯರ ವಿದ್ಯಾರ್ಥಿನಿಲಯದ ಅಧ್ಯಕ್ಷೆ ಚೈತ್ರಾ ರಮೇಶ್, ತಾಲೂಕು ಕಸಾಪ ಮಹಿಳಾ ಘಟಕದ ಪದಾಧಿಕಾರಿ ವಾಸಂತಿ, ಜಯಂತಿ, ಪ್ರಾಪ್ತಿ, ಇಂಪನಾ, ನವಮಿ ಇದ್ದರು.