ಯೋಗೀಶಗೌಡ ಹತ್ಯೆ ಪ್ರಕರಣ: ಧಾರವಾಡದಲ್ಲಿ ಸಿಬಿಐ ಸ್ಥಳ ಪರಿಶೀಲನೆ

| Published : Jul 09 2024, 12:55 AM IST

ಯೋಗೀಶಗೌಡ ಹತ್ಯೆ ಪ್ರಕರಣ: ಧಾರವಾಡದಲ್ಲಿ ಸಿಬಿಐ ಸ್ಥಳ ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಯೋಗೀಶಗೌಡ ಹತ್ಯೆ ಪ್ರಕರಣದ ಸಾಕ್ಷಿ ನಾಶ ಆರೋಪದ ಪ್ರಮುಖ ಆರೋಪಿಯಾಗಿರುವ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿನಯ್ ಕುಲಕರ್ಣಿ ಅವರ ವಿರುದ್ಧ ಈಗಾಗಲೇ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳಿಗೆ ಸಮನ್ಸ್ ನೀಡಲು ಸಿಬಿಐ ತಂಡ ಧಾರವಾಡಕ್ಕೆ ಬಂದಿದೆ ಎಂಬ ಮಾಹಿತಿಯೂ ಇದೆ.

ಧಾರವಾಡ:

ಇಲ್ಲಿಯ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶಗೌಡ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ತಂಡವು ಸೋಮವಾರ ಧಾರವಾಡಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಸೋಮವಾರ ಬೆಳಗ್ಗೆ ನಗರಕ್ಕೆ ಬಂದ ಸಿಬಿಐ ತನಿಖಾಧಿಕಾರಿ ರಾಕೇಶ್ ರಂಜನ್ ನೇತೃತ್ವದ ತಂಡವು, ಯೋಗೀಶಗೌಡ ಹತ್ಯೆಯಾದ ಸಪ್ತಾಪುರದ ಉದಯ ಜಿಮ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿರುವ ಸಿಬಿಐ ತಂಡವು ಮತ್ತಷ್ಟು ಸಾಕ್ಷ್ಯ ಕಲೆ ಹಾಕಲು ಹಾಗೂ ಪ್ರಕರಣದ ಕುರಿತು ಮಹಜರು ನಡೆಸಲು ತಯಾರಿ ನಡೆಸಿದೆ ಎಂದು ತಿಳಿದು ಬಂದಿದೆ. ಈ ಸಮಯದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯುಟರ್ ಗಂಗಾಧರ ಶೆಟ್ಟಿ ಅವರೊಂದಿಗೆ ಸಿಬಿಐ ತಂಡವು ಸಮಾಲೋಚನೆ ನಡೆಸಿತು.

ಯೋಗೀಶಗೌಡ ಹತ್ಯೆ ಪ್ರಕರಣದ ಸಾಕ್ಷಿ ನಾಶ ಆರೋಪದ ಪ್ರಮುಖ ಆರೋಪಿಯಾಗಿರುವ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿನಯ್ ಕುಲಕರ್ಣಿ ಅವರ ವಿರುದ್ಧ ಈಗಾಗಲೇ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳಿಗೆ ಸಮನ್ಸ್ ನೀಡಲು ಸಿಬಿಐ ತಂಡ ಧಾರವಾಡಕ್ಕೆ ಬಂದಿದೆ ಎಂಬ ಮಾಹಿತಿಯೂ ಇದೆ.

ಸಿಬಿಐ ತನಿಖೆ ಬಳಿಕ ಗಂಭೀರತೆ ಪಡೆದುಕೊಂಡಿದ್ದ ಈ ಪ್ರಕರಣವು ನ್ಯಾಯಾಲಯದಲ್ಲಿರುವ ಕಾರಣಕ್ಕೆ ಇಷ್ಟು ದಿನ ಸಿಬಿಐ ಧಾರವಾಡ ಕಡೆಗೆ ಮುಖ ಮಾಡಿರಲಿಲ್ಲ. ಆದರೆ, ಏಕಾಏಕಿ ಸೋಮವಾರ ಧಾರವಾಡಕ್ಕೆ ಬಂದಿರುವ ಸುದ್ದಿ ಕೇಳಿ ಆರೋಪಿಗಳ ಪೈಕಿ ಕೆಲವರ ಎದೆಯಲ್ಲಿ ಡವಡವ ಶುರುವಾಗಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಮುಗಿಸಬೇಕಿದೆ. ಇದೇ ವೇಳೆ ಸಾಕ್ಷಿಗಳಿಗೆ ನ್ಯಾಯಾಲಯಕ್ಕೆ ಆಗಮಿಸಿ ಸಾಕ್ಷಿ ಹೇಳಲು ಇದೀಗ ಸಿಬಿಐ ಅಧಿಕಾರಿಗಳು ಸಮನ್ಸ್ ನೀಡಿದ್ದು, ಮುಂದಿನ ಬೆಳವಣಿಗೆ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.