ಯೋಗೀಶಗೌಡ ಸಹೋದರ ಗುರುನಾಥಗೌಡಗೆ ಜೀವ ಬೆದರಿಕೆ

| Published : Feb 29 2024, 02:05 AM IST

ಯೋಗೀಶಗೌಡ ಸಹೋದರ ಗುರುನಾಥಗೌಡಗೆ ಜೀವ ಬೆದರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಸೋಮಾಪೂರದ ಮಂಜುನಾಥ ಸಂಗಪ್ಪ ಬೇಗೂರ ಎಂಬಾತ ಬೆದರಿಕೆ ಹಾಕಿದ್ದಾನೆ ಎಂದು ಗುರುನಾಥ ಗೌಡ ಗೌಡರ ದೂರು ದಾಖಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಧಾರವಾಡ

ಕೊಲೆಯಾದ ಜಿಪಂ ಸದಸ್ಯ ಯೋಗೀಶಗೌಡ ಗೌಡರ ಅವರ ಸಹೋದರ ಗುರುನಾಥ ಗೌಡ ಗೌಡರ ಅವರಿಗೆ ಕೊಲೆ ಬೆದರಿಕೆ ಬಂದಿದ್ದು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಬುಧವಾರ ಕೊಲೆ ಬೆದರಿಕೆ ಹಾಕಿದ ವ್ಯಕ್ತಿಯ ವಿರುದ್ಧ ಗುರುನಾಥ ಗೌಡರು ದೂರು ದಾಖಲು ಮಾಡಿದ್ದಾರೆ.

ಕಳೆದ ಫೆ. 23ರಂದು ಚಕ್ಕಡಿಯಲ್ಲಿ ಉಳವಿ ಜಾತ್ರೆಗೆ ಹೋದ ಸಂದರ್ಭದಲ್ಲಿ ತಡರಾತ್ರಿ ಹಲವು ಬಾರಿ ಅಪರಿಚಿತ ಮೊಬೈಲ್‌ ಸಂಖ್ಯೆಯಿಂದ ಮಿಸ್ಡ್‌ ಕಾಲ್‌ಗಳು ಬಂದಿದ್ದವು. ಪದೇ ಪದೇ ಕರೆ ಬರುತ್ತಿರುವ ಕಾರಣ ರಾತ್ರಿ 1.15ಕ್ಕೆ ಕರೆ ಸ್ವೀಕರಿಸಿದಾಗ ಸೋಮಾಪೂರದ ಮಂಜುನಾಥ ಸಂಗಪ್ಪ ಬೇಗೂರ ಎಂಬಾತ ತನ್ನ ಪರಿಚಯ ಮಾಡಿಕೊಳ್ಳುತ್ತಲೇ, ಅವಾಚ್ಯ ಶಬ್ದಗಳಿಂದ ಬೈಯ್ದು ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ತದ ನಂತರ ಜಾತ್ರೆ ಮುಗಿಸಿ ತಮ್ಮೂರು ಗೋವನಕೊಪ್ಪಕ್ಕೆ ಬಂದ ನಂತರ ಫೆ. 26ರಂದು ಮನೆ ಬಳಿ ಬಂದ ಅದೇ ವ್ಯಕ್ತಿ ಮತ್ತೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಮನೆಯಲ್ಲಿನ ಸಂಬಂಧಿಕರು ಆತನಿಗೆ ಬುದ್ಧಿ ಹೇಳಿ ಕಳುಹಿಸಿದ್ದಾರೆ. ಆದ್ದರಿಂದ ಆತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಗುರುನಾಥ ಗೌಡ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ದೂರು ಸ್ವೀಕರಿಸಿ ತನಿಖೆ ಕೈಗೊಳ್ಳುವುದಾಗಿ ಗ್ರಾಮೀಣ ಪೊಲೀಸರು ಭರವಸೆ ನೀಡಿದ್ದಾರೆ.

ಈ ಸಮಯದಲ್ಲಿ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ, ಕಾರ್ಯದರ್ಶಿ ನಾಗರಾಜ ಕಿರಣಗಿ ಇದ್ದರು.