ಚನ್ನಪಟ್ಟಣ: ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಹುಟ್ಟೂರನ್ನೇ ಅಭಿವೃದ್ಧಿ ಮಾಡಿಲ್ಲ: ಎಚ್ಡಿಕೆ

| Published : Nov 04 2024, 12:34 AM IST / Updated: Nov 04 2024, 12:49 PM IST

ಚನ್ನಪಟ್ಟಣ: ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಹುಟ್ಟೂರನ್ನೇ ಅಭಿವೃದ್ಧಿ ಮಾಡಿಲ್ಲ: ಎಚ್ಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ: ಕಾಂಗ್ರೆಸ್ ಅಭ್ಯರ್ಥಿ ತಮ್ಮ ಹುಟ್ಟೂರು ಚೆಕ್ಕೆರೆ ಗ್ರಾಮವನ್ನೇ ಅಭಿವೃದ್ಧಿ ಮಾಡಿಲ್ಲ, ಇನ್ನು ಅವರು ಇಡೀ ಕ್ಷೇತ್ರವನ್ನು ಹೇಗೆ ಅಭಿವೃದ್ಧಿ ಮಾಡುತ್ತಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿದರು.

ಚನ್ನಪಟ್ಟಣ: ಕಾಂಗ್ರೆಸ್ ಅಭ್ಯರ್ಥಿ ತಮ್ಮ ಹುಟ್ಟೂರು ಚೆಕ್ಕೆರೆ ಗ್ರಾಮವನ್ನೇ ಅಭಿವೃದ್ಧಿ ಮಾಡಿಲ್ಲ, ಇನ್ನು ಅವರು ಇಡೀ ಕ್ಷೇತ್ರವನ್ನು ಹೇಗೆ ಅಭಿವೃದ್ಧಿ ಮಾಡುತ್ತಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಹುಟ್ಟೂರು ಚೆಕ್ಕೆರೆ ಗ್ರಾಮದಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಪರ ಪ್ರಚಾರ ಭಾಷಣ ಮಾಡಿದ ಅವರು, ಆ ವ್ಯಕ್ತಿ ಹುಟ್ಟಿದ ಊರನ್ನೇ ಯಾವ ರೀತಿ ಇಟ್ಟುಕೊಂಡಿದ್ದರು ಎಂಬುದನ್ನು ನೋಡಿದ್ದೀರಿ. ನಾವು ಎಷ್ಟು ಅಭಿವೃದ್ಧಿ ಮಾಡಿದ್ದೇವೆ ನೋಡಲಿ. ಎಲ್ಲವೂ ಜನರ ಕಣ್ಣು ಮುಂದೆಯೇ ಇದೆ. ಹಿಂದೆ ಇದೇ ವ್ಯಕ್ತಿ ಡಿಕೆ ಸಹೋದರರನ್ನು ವಾಚಾಮಗೋಚರವಾಗಿ ಬೈದುಕೊಂಡು ಓಡಾಡಿದ್ದರು. ಈಗ ಅವರನ್ನೇ ತಬ್ಬಿಕೊಂಡಿದ್ದಾರೆ. ನನ್ನನ್ನು ರಾಮನಗರಕ್ಕೆ ಹೊರಗಿನವನು ಎನ್ನುತ್ತಿದ್ದಾರೆ. ನಾನು ಹುಟ್ಟಿದ್ದು ಹಾಸನದಲ್ಲಿ, ಬೆಳೆಸಿದ್ದು ರಾಮನಗರ ಜಿಲ್ಲೆಯ ಜನ. ನಾನು ಕೊನೆಗೆ ಭೂಮಿಗೆ ಹೋಗೊದು ಈ ಮಣ್ಣಿನಲ್ಲೇ ಎಂದು ಭಾವುಕರಾದರು.

ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ ಕೇಳುತ್ತಿರುವ ಆ ವ್ಯಕ್ತಿ ಈ ತಾಲೂಕಿಗೆ 20 ವರ್ಷ ಶಾಸಕರಾಗಿ ಏನು ಮಾಡಿದ್ದಾರೆ? ದಾಖಲೆಗಳಿವೆ, ಪರಿಶೀಲನೆ ಮಾಡಿ. ನಾನು ಐದು ವರ್ಷದಲ್ಲಿ ಏನು ಮಾಡಿದ್ದೇನೆ ಎಂಬುದು ನಿಮ್ಮ ಕಣ್ಣ ಮುಂದೆಯೇ ಇದೆ. ನೀವು ಯಾರಿಗೂ ಹೆದರದೇ ಚುನಾವಣೆ ಮಾಡಿ. ಈಗ ಕಾಂಗ್ರೆಸ್‌ನಲ್ಲಿರುವ ಅಭ್ಯರ್ಥಿ ಚುನಾವಣೆ ಬಳಿಕ ಎಲ್ಲಿ ಹೋಗುತ್ತಾರೋ ಗೊತ್ತಿಲ್ಲ? ರಾಮನಗರಲ್ಲಿ ಕೂಪನ್ ಹಂಚಿಕೊಂಡು ಚುನಾವಣೆ ಮಾಡಿದರು. ಚನ್ನಪಟ್ಟಣದಲ್ಲೂ ಆ ಕೆಲಸ ಆಗುತ್ತದೆ. ಎಲ್ಲರೂ ಎಚ್ಚರಿಕೆಯಿಂದ ಮತ ನೀಡಿ ಎಂದು ಮನವಿ ಮಾಡಿದರು.

ಚಕ್ಕರೆ ಗ್ರಾಮದ ಯುವಕರು ತಂಡ ಕಟ್ಟಿಕೊಂಡು ನಿಖಿಲ್ ಗೆಲ್ಲಿಸಲು ಶ್ರಮಿಸುತ್ತಿದ್ದಾರೆ. ಈ ಚುನಾವಣೆ ಸಂದರ್ಭದಲ್ಲಿಯೇ ನಾಟಕೀಯ ಬೆಳವಣಿಗೆ ಆಗಿದೆ. ನಿಮ್ಮ ಗ್ರಾಮದ ಕಾಂಗ್ರೆಸ್ ಅಭ್ಯರ್ಥಿ ಪಕ್ಷಾಂತರ ಮಾಡಿದ್ದಾರೆ. ಅವರಿಗಿಂತ ಹೆಚ್ಚು ಈ ಗ್ರಾಮವನ್ನು ನಾವು ಅಭಿವೃದ್ಧಿ ಮಾಡಿದ್ದೇವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಜನತೆ ಒತ್ತಡಕ್ಕೆ ಮಣಿದು ಅಭ್ಯರ್ಥಿಯಾದೆ. ಮಂಡ್ಯ ಜಿಲ್ಲೆಯ ಜನತೆ ಆಶೀರ್ವಾದ ಮಾಡಿ ಗೆಲ್ಲಿಸಿದರು. ಹಾಗಾಗಿ ಚನ್ನಪಟ್ಟಣಕ್ಕೆ ರಾಜೀನಾಮೆ ಕೊಡುವ ಅನಿವಾರ್ಯ ಬಂತು. ನಿಮ್ಮ ಗ್ರಾಮದ ನಾಯಕರನ್ನು ಅಭ್ಯರ್ಥಿ ಆಗಿ ಎಂದು ಕೇಳಿದೆವು. ನಮ್ಮ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ ಅಂದಿದ್ದೆ. ಆದರೆ ಸುಳ್ಳು ಹೇಳಿಕೊಂಡು ಯಾವ ರೀತಿ ನಡೆದುಕೊಂಡರು ಎಂದು ನೋಡಿದ್ದೀರಿ. ಅವರಿಗೆ ಜೆಡಿಎಸ್ ನಿಂದ ಸ್ಪರ್ಧೆ ಮಾಡಿ ಅಂತ ಹೇಳಿದ್ದೆವು. ಆದಾದ ಬಳಿಕವೂ ಅವರು ಬಿಜೆಪಿಯಲ್ಲಿ ನಿಲ್ಲಬೇಕು ಎಂದು ಹಠ ಮಾಡಿದರು. ಅದಕ್ಕೂ ನಾನು ಒಪ್ಪಿಗೆ ಕೊಟ್ಟೆ. ಆದರೆ, ಹೇಳದೆ ಕೇಳದೆ ಬಿಜೆಪಿ ನಾಯಕರಿಗೂ ಟೋಪಿ ಹಾಕಿ ಕಾಂಗ್ರೆಸ್ ಸೇರಿದ್ದಾರೆ. ಈಗ ಚುನಾವಣೆಯಲ್ಲಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಕುಮಾರಸ್ವಾಮಿ ಪ್ರಚಾರಕ್ಕೆ ಬಿಜೆಪಿ ರಾಜ್ಯ ನಾಯಕರು ಸಾಥ್ ನೀಡಿದರು. ವಿಪಕ್ಷ ನಾಯಕ ಅಶೋಕ್, ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ, ಮಾಜಿ ಸಚಿವ ಸಿ.ಟಿ.ರವಿ, ಸಂಸದ ಡಾ.ಮಂಜುನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ರಮೇಶ್ ಇತರರಿದ್ದರು.

ಚನ್ನಪಟ್ಟಣಕ್ಕೂ ಚಾಚಿದ ವಕ್ಫ್ ಕಬಂಧ ಬಾಹುಗಳು: ಅಶೋಕ್ ಕಿಡಿ

- ತಾಲೂಕು ಕಚೇರಿಯಲ್ಲಿ ಭೂ ದಾಖಲೆ ಪರಿಶೀಲನೆ ಮಾಡಿಕೊಳ್ಳುವಂತೆ ರೈತರಿಗೆ ಸಲಹೆ

ಚನ್ನಪಟ್ಟಣ: ವಕ್ಫ್ ಕಬಂಧ ಬಾಹುಗಳು ಎಲ್ಲೆಡೆ ಚಾಚಿಕೊಳ್ಳುತ್ತಿದ್ದು, ರೈತರು ಕೂಡಲೇ ತಾಲೂಕು ಕಚೇರಿಗೆ ಹೋಗಿ ತಮ್ಮ ಭೂ ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಸಲಹೆ ಮಾಡಿದರು.

ಚಕ್ಕೆರೆ ಗ್ರಾಮದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಪರ ಪ್ರಚಾರ ಮಾಡಿದ ಅವರು, ಇವತ್ತು ವಕ್ಫ್ ಮಾರಿ ಚನ್ನಪಟ್ಟಣಕ್ಕೂ ವಕ್ಕರಿಸಿದ್ದು, ಯಲಿಯೂರು ಬಳಿ ಹಿಂದೂಗಳ ಸ್ಮಶಾನಕ್ಕೂ ಅದರ ಕಣ್ಣು ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೂರಾರು ವರ್ಷಗಳಿಂದ ರೈತರು ಭೂಮಿಯಲ್ಲಿ ಬಾಳಿ ಬದುಕುತ್ತಿದ್ದಾರೆ. ಆದರೆ, ಇವರು ಖೊಟ್ಟಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಅದಕ್ಕೂ ಹಿಂದಿನಿಂದಲೂ ಈ ಭೂಮಿ ನಮ್ಮ ವಶದಲ್ಲಿತ್ತು ಎಂದು ತಗಾದೆ ತೆಗೆಯುತ್ತಿದ್ದಾರೆ. ವಕ್ಫ್ ಎಷ್ಟರ ಮಟ್ಟಿಗೆ ಭೂಮಿ ಹೊಂದಿದೆ ಎಂದರೆ ಭಾರತೀಯ ಸೇನೆಗಿಂತ ಜಾಸ್ತಿ ಭೂಮಿ ವಕ್ಫ್ ಮಂಡಳಿ ವಶದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

17 ಕೆರೆ ತುಂಬಿಸಲು ಹಣ ನೀಡಿದ್ದು ಅಂದಿನ ಸಿಎಂ ಸದಾನಂದಗೌಡರು, ಹಣ ಬಿಡುಗಡೆಗೆ ಆದೇಶ ಮಾಡಿದ್ದು ಬಸವರಾಜ್ ಬೊಮ್ಮಾಯಿ ಹಾಗೂ ಯೋಜನೆಗೆ ಚಾಲನೆ ನೀಡಿದ್ದು ನೀರಾವರಿ ಎಂಜಿನಿಯರ್ ವೆಂಕಟೇಗೌಡ. ಈ ವೆಂಕಟೇಗೌಡ ಹಲವು ಸಲ ನಮ್ಮ ಮೇಲೆ ಒತ್ತಡ ಹಾಕಿ ಈ ಯೋಜನೆ ಜಾರಿಗೆ ಬರುವಂತೆ ನೋಡಿಕೊಂಡು, ಅದನ್ನು ಅನುಷ್ಠಾನ ಮಾಡಿದರು. ಇದಕ್ಕೂ ಯೋಗೇಶ್ವರ್ ಅವರಿಗೂ ಸಂಬಂಧವೇ ಇಲ್ಲ ಎಂದು ಅಶೋಕ್ ಹೇಳಿದರು.

ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಮಾತನಾಡಿ, ರಾಮನಗರ ಜಿಲ್ಲೆಯನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ಚನ್ನಪಟ್ಟಣಕ್ಕೆ 18 ಸಲ ಸುತ್ತು ಹಾಕಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗದೆ ಬೆಂಗಳೂರು ನಗರ ಜಿಲ್ಲೆ ಉಸ್ತುವಾರಿ ಸಚಿವರಾಗಿದ್ದು ಯಾಕೆ? ಎಂದು ಪ್ರಶ್ನಿಸಿದರು.

ರಾಮನಗರ ಜಿಲ್ಲೆಯನ್ನು ಅಭಿವೃದ್ಧಿ ಮಾಡಿದರೆ ಅವರಿಗೆ ಏನೂ ಸಿಗುವುದಿಲ್ಲ. ಬೆಂಗಳೂರಿನಲ್ಲಿ ಅಭಿವೃದ್ಧಿ ಎಂದು ಡ್ರಾಮಾ ನಡೆಸಿದರೆ ಲೂಟಿ ಹೊಡೆಯಬಹುದು ಎಂದು ಅರೋಪಿಸಿದರು.