ಸಾರಾಂಶ
ಚನ್ನಪಟ್ಟಣ: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಈ ಹಿಂದೆ ಕಾಂಗ್ರೆಸ್‌ನಲ್ಲೇ ಇದ್ದವರು. ಅವರೀಗ ಮತ್ತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಅವರು ಚನ್ನಪಟ್ಟಣ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಘೋಷಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರನ್ನು ಸ್ವಾಗತಿಸಿ ಮಾತನಾಡಿದ ಬಾಲಕೃಷ್ಣ, ಈಗಾಗಲೇ ನಮ್ಮ ನಾಯಕರು ಯೋಗೇಶ್ವರ್‌ಗೆ ಗ್ರೀನ್ ಸಿಗ್ನಲ್ ನೀಡಿದ್ದು, ಅವರು ನಾಳೆ ನಾಮಪತ್ರ ಸಲ್ಲಿಸದ್ದಾರೆ. ಸಿಪಿವೈ ಕಾಂಗ್ರೆಸ್ ಸೇರಿದ ಹಿನ್ನೆಲೆಯಲ್ಲಿ ಅವರ ಮತ ಹಾಗೂ ಕಾಂಗ್ರೆಸ್ ಮತ ಸೇರಿ ಸುಲಭವಾಗಿ ಕ್ಷೇತ್ರದಲ್ಲಿ ಗೆಲ್ಲಬಹುದು ಎಂಬ ಭಾವಿಸಿ ನಾವು ಮೈಮರೆಯಬಾರದು. ಚುನಾವಣೆಯನ್ನು ಚುನಾವಣೆಯಂತೆಯೇ ಸ್ವೀಕರಿಸಿ ನಾವು ಶ್ರಮ ಹಾಕಬೇಕು ಎಂದು ಕಾರ್ಯಕರ್ತರು, ಮುಖಂಡರಿಗೆ ತಾಕೀತು ಮಾಡಿದರು.ಚನ್ನಪಟ್ಟಣ ಇಡೀ ದೇಶದಲ್ಲೇ ಪ್ರತಿಷ್ಠಿತ ಕ್ಷೇತ್ರವಾಗಿ ಬಿಂಬಿತವಾಗಿದೆ. ಕೇಂದ್ರ ಸಚಿವರು ಪ್ರತಿನಿಧಿಸುತ್ತಿದ್ದ ಕ್ಷೇತ್ರ ಇದಾಗಿದ್ದು, ದೇಶದ ಗಮನ ಸೆಳೆದಿದೆ. ನಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಕಾರ್ಯಕರ್ತರು ಒಗ್ಗೂಡಿ ಯೋಗೇಶ್ವರ್ ಅವರನ್ನು ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು.
ಸಿಪಿವೈ ಸೇರ್ಪಡೆಯಿಂದ ಏನು ವ್ಯತ್ಯಾಸವಾಗುವುದಿಲ್ಲ. ಈ ಕುರಿತು ಕಾಂಗ್ರೆಸ್ ಕಾರ್ಯಕರ್ತರು ಆತಂಕ ಪಡುವ ಅಗತ್ಯವಿಲ್ಲ. ಇಬ್ಬರ ಮೂಲವೂ ಕಾಂಗ್ರೆಸ್ ಆಗಿದೆ. ಅವರ ಜತೆ ಇರುವವವರು ಕೆಲವರು ಹಳೇ ಕಾಂಗ್ರೆಸ್‌ನವರು. ನಾವೆಲ್ಲ ಅಣ್ಣತಮ್ಮಂದಿರು ಇದ್ದ ಹಾಗೆ. ಒಂದಾಗಿ ಕೆಲಸ ಮಾಡೋಣ. ಯೋಗೇಶ್ವರ್ ಅವರ ಗೆಲುವಿಗೆ ಶ್ರಮಿಸೋಣ ಎಂದು ಹೇಳಿದರು.ನಾವೆಲ್ಲ ಒಂದೇ ಜಿಲ್ಲೆಯವರು: ನಾವೆಲ್ಲರೂ ಕೂಡ ರಾಮನಗರ ಜಿಲ್ಲೆಯವರು, ನಾವು ಅಣ್ಣತಮ್ಮಂದಿರಂತೆ, ನಾವು ಜಗಳ ಆಡುತ್ತೇವೆ, ಒಂದಾಗುತ್ತೇವೆ. ನಾವೆಲ್ಲ ಒಗ್ಗಟಾಗಿದ್ದರೆ, ಈ ಜಿಲ್ಲೆ ನಮ್ಮದು. ಇಲ್ಲಿ ಬೇರೆಯವರು ಬಂದು ಆಳಲಿಕ್ಕೆ ಅವಕಾಶ ಕೊಡುವುದಿಲ್ಲ ಎಂಬುದನ್ನು ತೋರಿಸಬಹುದು ಎಂದು ಕೇಂದ್ರ ಸಚಿವ ಕುಮಾರಸ್ವಾಮಿಗೆ ಪರೋಕ್ಷವಾಗಿ ಟಾಂಗ್ ನೀಡಿದ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ, ನಾವೆಲ್ಲ ಒಂದಾಗಿ ಬದುಕುವಂತ ಛಲವನ್ನು ತೋರಿಸಬೇಕು. ಆ ನಿಟ್ಟಿನಲ್ಲಿ ಈಗ ಒಂದು ಒಳ್ಳೆಯ ಅವಕಾಶ ಸಿಕ್ಕಿದೆ. ನಾವೆಲ್ಲ ಸೇರಿ ಜಿಲ್ಲೆಯನ್ನು ಅಭಿವೃದ್ಧಿಪಡಿಸುವುದು ಮುಖ್ಯ, ನಮ್ಮದೇ ಸರ್ಕಾರವಿದ್ದು, ಮೂರುವರೇ ವರ್ಷ ಅಭಿವೃದ್ಧಿ ಕೆಲಸದಲ್ಲಿ ತೊಡಗಿಕೊಳ್ಳೋಣ. ನಮ್ಮ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ಮಾಡೋಣ ಎಂದು ಹೇಳಿದರು.
ಯೋಗೇಶ್ವರ್ ಜೆಡಿಎಸ್-ಬಿಜೆಪಿ ಹಾಲು ಸಕ್ಕರೆಯಂತೆ ಬೆರೆತಿದೆ ಎನ್ನುತ್ತಿದ್ದರು. ಇದೀಗ ಅದು ಬೇರ್ಪಟ್ಟಿದ್ದು, ಇದೀಗ ಯೋಗೇಶ್ವರ್ ನಾವು ಹಾಲು ಸಕ್ಕರೆಯಂತೆ ಹಳೇ ಕಾಂಗ್ರೆಸ್- ಹೊಸ ಕಾಂಗ್ರೆಸ್ ಬೆರೆಯಬೇಕಿದೆ. ಲೋಕಸಭಾ ಸದಸ್ಯರನ್ನು ಗೆಲ್ಲಿಸಲು ಸಿಪಿವೈ ಏನೇನು ತಂತ್ರ ಹೂಡಿದರು. ಆದರೆ, ಅವರೇ ಪಕ್ಷ ಬಿಡುವಂತಾಯಿತು. ನಮ್ಮ ಎಲ್ಲರ ದೃಷ್ಟಿ ಜಿಲ್ಲೆಯ ಅಭಿವೃದ್ಧಿಯಾಗಿದೆ. ಸಿಪಿವೈ ಸ್ವಂತಕ್ಕಾಗಿ ಪಕ್ಷ ಬದಲಿಸಲಿಲ್ಲ, ಕ್ಷೇತ್ರದ ಅಭಿವೃದ್ಧಿಗಾಗಿ ಪಕ್ಷಾಂತರ ಮಾಡಿದ್ದಾರೆ. ಅವರು ಶಾಸಕರಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಮಾತನಾಡಿ, ನನ್ನ ರಾಜಕೀಯ ಜೀವನ ಆರಂಭಗೊಂಡಿದ್ದೇ ಯೂತ್ ಕಾಂಗ್ರೆಸ್‌ನಿಂದ, ಮಧ್ಯೆ ಕೆಲ ಸಣ್ಣಪುಟ್ಟ ವ್ಯತ್ಯಾಸ ಆಗಿತ್ತು. ಈಗ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ, ಮಾಜಿ ಸಂಸದ ಡಿ.ಕೆ.ಸುರೇಶ್ ಸಾರಥ್ಯದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದೇನೆ. ನಿಮ್ಮ ಪ್ರೀತಿ ಅಭಿಮಾನ ಹಿಂದಿನಂತೆಯೇ ಇರಲಿ. ಇಲ್ಲಿರುವ ಎಲ್ಲರೂ ನನ್ನ ಚಿರಪರಿಚಿತ ಮುಖಗಳೇ, ಹಿಂದೆ ನಾವೆಲ್ಲ ಒಂದೇ ಪಕ್ಷದಲ್ಲಿ ಕೆಲಸ ಮಾಡಿದ್ದೇವೆ. ನಾಳಿನ ನಾಮಪತ್ರ ಸಲ್ಲಿಕೆ ಕಾರ್ಯಕ್ರಮವನ್ನು ಎಲ್ಲರೂ ಒಗ್ಗೂಡಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ರಾಜು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್, ಕಾಂಗ್ರೆಸ್ ಮುಖಂಡರಾದ ದುಂತೂರು ವಿಶ್ವನಾಥ್, ಕರಿಯಪ್ಪ, ಬೋರ್‌ವೆಲ್ ರಂಗನಾಥ್, ಎ.ಸಿ.ವೀರೇಗೌಡ ಇತರರು ಉಪಸ್ಥಿತರಿದ್ದರು.ಬಾಕ್ಸ್.................
ಇಂದು ಸಿಪಿವೈ ನಾಮಪತ್ರ ಸಲ್ಲಿಕೆಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಗುರುವಾರ ಬೆಳಗ್ಗೆ ೧೧ಗಂಟೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ಜಮೀರ್ ಅಹ್ಮದ್ ಖಾನ್, ಮಾಜಿ ಸಂಸದ ಡಿ.ಕೆ.ಸುರೇಶ್, ಶಾಸಕರಾದ ಎಚ್.ಸಿ.ಬಾಲಕೃಷ್ಣ ಇತರರು ಭಾಗವಹಿಸಲಿದ್ದಾರೆ.ಬಾಕ್ಸ್....................
ಹಲವು ಮುಖಂಡರು ಗೈರುಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸ್ವಾಗತ ಕಾರ್ಯಕ್ರಮದಲ್ಲಿ ಹಲವು ಕಾಂಗ್ರೆಸ್ ಮುಖಂಡರ ಗೈರುಹಾಜರಿ ಎದ್ದು ಕಾಣುತ್ತಿತ್ತು. ಡಿ.ಕೆ.ಸಹೋದರರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಬಿಎಂಐಸಿಎಪಿಎ ಅಧ್ಯಕ್ಷ ರಘನಂದನ್ ರಾಮಣ್ಣ, ಬ್ಲಾಕ್ ಕಾಂಗ್ರೆಸ್ ಮುಖಂಡರಾದ ಎಸ್.ಆರ್.ಪ್ರಮೋದ್, ಸುನೀಲ್, ಮುಖಂಡರಾದ ಮಲುವೇಗೌಡ, ಹರೂರು ರಾಜಣ್ಣ ಸೇರಿದಂತೆ ಹಲವು ಮುಖಂಡರ ಗೈರುಹಾಜರಿ ಎದ್ದು ಕಾಣುತ್ತಿತ್ತು.
ಪೊಟೋ೨೩ಸಿಪಿಟಿ೭:ಚನ್ನಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿತಿಸಿದರು.