ಗ್ರಂಥಾಲಯದಿಂದ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು: ಚಂದ್ರಶೇಖರ್

| Published : Aug 15 2025, 01:00 AM IST

ಗ್ರಂಥಾಲಯದಿಂದ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು: ಚಂದ್ರಶೇಖರ್
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯೆಯು ಶಾಶ್ವತವಾಗಿ ಅಚ್ಚಳಿಯದೆ ಉಳಿಯುವ ವಸ್ತುವಾಗಿದೆ. ತೆಗೆದುಕೊಳ್ಳಲು ಅಥವಾ ಕಸಿದುಕೊಳ್ಳಲು ಆಗದೆ ಇರುವಂತದ್ದಾಗಿದೆ.

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ವಿದ್ಯೆಯು ಶಾಶ್ವತವಾಗಿ ಅಚ್ಚಳಿಯದೆ ಉಳಿಯುವ ವಸ್ತುವಾಗಿದೆ. ತೆಗೆದುಕೊಳ್ಳಲು ಅಥವಾ ಕಸಿದುಕೊಳ್ಳಲು ಆಗದೆ ಇರುವಂತದ್ದಾಗಿದೆ. ಅದನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡರೆ ವಿದ್ಯಾರ್ಥಿಗಳ ಭವಿಷ್ಯ ಉತ್ತಮ ಹಾದಿಯಲ್ಲಿ ಸಾಗುತ್ತದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಚ್. ಚಂದ್ರಶೇಖರ್ ತಿಳಿಸಿದರು.

ಪಟ್ಟಣದ ಶಾಖಾ ಗ್ರಂಥಾಲಯದಲ್ಲಿ ತಾಲೂಕು ಪಂಚಾಯಿತಿ ಹಾಗೂ ಶಾಖಾ ಗ್ರಂಥಾಲಯದ ಸಹಯೋಗದಲ್ಲಿ ನಡೆದ ಗ್ರಂಥ ಪಾಲಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ವತಿಯಿಂದ ಪುಸ್ತಕಗಳನ್ನು ಪ್ರತಿ ಗ್ರಾಪಂ ಗ್ರಂಥಾಲಯಗಳಿಗೆ ಒದಗಿಸಲಾಗಿದೆ. ರಾಗಿ ಮಸಲವಾಡ ಹಾಗೂ ಕಡತಿ ಗ್ರಂಥಾಲಯಗಳು ಶಿಥಿಲಾವಸ್ಥೆಯ ಹಂತಕ್ಕೆ ಬಂದಿದ್ದು, ಶಾಸಕರೊಂದಿಗೆ ಚರ್ಚಿಸಿ ದುರಸ್ತಿ ಮಾಡಿಸಲು ಪ್ರಯತ್ನಿಸುತ್ತೇನೆ ಎಂದರು.

ಗ್ರಂಥಾಲಯಗಳು ಸುಸಜ್ಜಿತ ವಾತಾವರಣ ಮತ್ತು ಸ್ವಚ್ಛತೆ ಹೊಂದಿರಬೇಕು. ಆಗ ಓದುಗರು ಶಾಂತ ಚಿತ್ತದಿಂದ ಪತ್ರಿಕೆ ಮತ್ತು ಪುಸ್ತಕಗಳನ್ನು ಆಸಕ್ತಿಯಿಂದ ಓದಲು ಅನುಕೂಲವಾಗುತ್ತದೆ. ತಾಲೂಕು ಪಂಚಾಯಿತಿ ವತಿಯಿಂದ ನೀಡುವ ಉಪಕರಣಗಳನ್ನು ಈಗಾಗಲೇ ಒದಗಿಸಲಾಗಿದೆ ಎಂದರು.

ಗ್ರಾಮೀಣ ಭಾಗದಲ್ಲಿ ಗ್ರಂಥ ಪಾಲಕರು ಬೇಗನೆ ಸಮಯಕ್ಕೆ ಸರಿಯಾಗಿ ತೆರೆಯ ಬೇಕು, ನಿಮ್ಮ ವೈಯಕ್ತಿಕ ಕೆಲಸ ಬದಿಗೊತ್ತಿ ಇರುವ ಸಾರ್ವಜನಿಕರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದರು.

ತಾಲೂಕು ಶಾಖಾ ಗ್ರಂಥಾಲಯ ಅಧಿಕಾರಿ ಮಂಜುನಾಥ ಭೋವಿ ಮಾತನಾಡಿ, ದೇಶದಲ್ಲಿ ಎಸ್.ಆರ್. ರಂಗನಾಥ ಅವರ ಕೊಡುಗೆ ಅಪಾರವಾದದ್ದು, ಅವರ ಪಂಚಸೂತ್ರಗಳ ಯೋಜನೆಯಿಂದ ಇಂದು ಗ್ರಂಥಾಲಯಗಳ ಸುಧಾರಣೆ ಸಾಧ್ಯವಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚು ಸಮಯ ಗ್ರಂಥಾಲಯದಲ್ಲಿ ಕಳೆದರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಈ ವೇಳೆ ತಾಪಂ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ್, ಬುಳ್ಳನಗೌಡ್ರು, ರೇಣುಕಮ್ಮ, ಮಹೇಶ್ವರ ಸ್ವಾಮಿ, ತಾಲೂಕಿನ ಎಲ್ಲಾ ಗ್ರಂಥಾಲಯಗಳ ಪಾಲಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.