ಸಾರಾಂಶ
ಧಾರವಾಡ:
ಕಷ್ಟದ ಸಮಯಗಳಿಗಾಗಿ ಕಾಯುವ ಬದಲು, ನಾವು ಸಂತೋಷ ಕಂಡುಕೊಳ್ಳಲು ಮತ್ತು ಸವಾಲುಗಳ ನಡುವೆಯೂ ಜೀವನ ಸ್ವೀಕರಿಸಲು ಕಲಿಯಬೇಕು ಎಂದು ವಕೀಲ ಅರುಣ ಜೋಶಿ ಹೇಳಿದರು.ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಟಾನದ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಭವನದಲ್ಲಿ ನಿವೃತ್ತರಿಗೆ ಹಮ್ಮಿಕೊಂಡ ಅಭಿನಂಧನೆಯಲ್ಲಿ ನಿವೃತ್ತ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಅಭಿನಂಧಿಸಿದ ಅವರು, ಪ್ರತಿಯೊಂದು ಸನ್ನಿವೇಶವನ್ನು ಹೆಚ್ಚು ಬಳಸಿಕೊಳ್ಳಬೇಕು. ಜೀವನದ ಏರಿಳಿತ ಆನಂದಿಸಲು ಕಲಿಯಬೇಕು ಮತ್ತು ವೃತ್ತಿ ಜತೆಗೆ ಪ್ರವೃತ್ತಿಯಿಂದ ಸಮಾಜಮುಖಿ ಬದುಕು ಕಲಿಯಬೇಕು ಎಂದರು.
ಪ್ರೀತಿಯು ಜೀವನದಲ್ಲಿ ಅತ್ಯಂತ ಸಂತೋಷದಾಯಕ ಮತ್ತು ಪೂರೈಸುವ ಅನುಭವಗಳಲ್ಲಿ ಒಂದಾಗಿದೆ. ಇದು ಅಪಾರ ಸಂತೋಷ ಮತ್ತು ತೃಪ್ತಿ ತರುತ್ತದೆ. ಆದ್ದರಿಂದ ಪ್ರೀತಿ ಮತ್ತು ಸಕಾರಾತ್ಮಕತೆ ಹರಡುತ್ತಲೇ ಇರಬೇಕು ಎಂದು ಹೇಳಿದರು.ಅಭಿನಂದನೆ ಸ್ವೀಕರಿಸಿದ ಅಂಕಿ-ಸಂಖ್ಯೆ ಇಲಾಖೆಯ ಜಿಲ್ಲಾಧಿಕಾರಿ ಸಾಯಿಕುಮಾರ ಹಿಳ್ಳಿ, ಧಾರವಾಡದ ಮಣ್ಣಿನ ಶಕ್ತಿಗೆ ಗೌರವ ಸಲ್ಲಿಸಿ ಪ್ರಾಮಾಣಿಕವಾದ ಸೇವೆ ಸಲ್ಲಿಸಿದ್ದೇನೆ. ಸೇವೆಯಲ್ಲಿರುವ ತನಕ ಧಾರವಾಡ ಜಿಲ್ಲೆಯ ಅಂಕಿ-ಸಂಖ್ಯೆಗಳನ್ನು ನಿಖರವಾಗಿ ನೀಡಿ ರಾಜ್ಯಕ್ಕೆ ಮಾದರಿ ಜಿಲ್ಲೆಯನ್ನಾಗಿ ಮಾಡಿದ ಹೆಮ್ಮೆ ನನಗೆ ಇದೆ. ಅಲ್ಲದೆ ಪ್ರತಿಷ್ಠಾನದ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿ ನಿಲ್ಲುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ವೃತ್ತಿಯ ಕಾರ್ಯಗಳು ನಮ್ಮ ಬದುಕಿನ ನಿರ್ಮಾಣಕ್ಕೆ ಪೂರಕವಾದರೆ ಪ್ರವೃತ್ತಿಗಳು ಸಮಾಜಮುಖಿಯ ಬದುಕನ್ನು ಎತ್ತಿ ತೋರಿಸಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.ಇಎಸ್‌ಐ ಆಸ್ಪತ್ರೆಯ ನಿವೃತ್ತ ಪ್ರಥಮ ದರ್ಜೆ ಸಹಾಯಕರಾದ ಗಾಯತ್ರಿ ಕಮತಗಿ ಸನ್ಮಾನ ಸ್ವೀಕರಿಸಿದರು. ವೇದಿಕೆಯಲ್ಲಿ ನಿವೃತ್ತ ಶಿಕ್ಷಕರಾದ ಬಿ.ಜಿ. ಬಾರ್ಕಿ, ಶಂಕರ ಗಂಗಣ್ಣವರ ಇದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ ಪ್ರಾಸ್ತಾವಿಕ ಮಾತನಾಡಿದರು. ಗಾಯಕಿ ಪ್ರಮೀಳಾ ಜಕ್ಕಣ್ಣವರ ಪ್ರಾರ್ಥಿಸಿದರು. ಕಸಾಪ ತಾಲೂಕಾಧ್ಯಕ್ಷ ಮಹಾಂತೇಶ ನರೇಗಲ್ ಸ್ವಾಗತಿಸಿದರು. ಸುನಂದಾ ಯಡಾಲ ವಂದಿಸಿದರು.