ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲುನಿಮ್ಮ ಭವಿಷ್ಯವನ್ನು ನೀವು ರೂಪಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್ ಪೊನ್ನಣ್ಣ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಇಲ್ಲಿನ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಆರೋಗ್ಯ ತಪಾಸಣೆ ಉದ್ಘಾಟಿಸಿ 51ನೇ ಹುಟ್ಟು ಹಬ್ಬದ ಕೇಕ್ ಕತ್ತರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಗ್ರಾಮೀಣ ಪ್ರದೇಶದಲ್ಲಿ ಓದುವ ಮಕ್ಕಳಿಗೆ ಹಸಿವು ಇದೆ. ಸಾಧಿಸಬೇಕಾದ ಛಲ ಇದೆ. ಅದನ್ನು ಯಶಸ್ವಿಯಾಗಿ ಪೂರೈಸಬೇಕಾದ ಜವಾಬ್ದಾರಿ ವಿದ್ಯಾರ್ಥಿಗಳದ್ದು. ನಿಮ್ಮ ಭವಿಷ್ಯವನ್ನು ನೀವು ರೂಪಿಸಿಕೊಳ್ಳಬೇಕು. ಆ ಮೂಲಕ ತಂದೆ-ತಾಯಿ ಸಮಾಜ ಎಲ್ಲರ ಬದುಕನ್ನು ಬದಲಾಯಿಸುವ ಶಕ್ತಿಯನ್ನು ಪಡೆದುಕೊಳ್ಳಲು ಸಾಧ್ಯ ಎಂದರು. ಜೀವನದಲ್ಲಿ ಉತ್ತಮವಾದ ಗುರಿಯಿರಿಸಿಕೊಂಡು ಅದನ್ನು ಸಾಧಿಸಲು ಈಗಿನಿಂದಲೇ ಶ್ರಮವಹಿಸಿ ಎಂದ ಅವರು ಯಾವುದು ಆಗುವುದಿಲ್ಲ ಎಂದೆನಿಸುತ್ತದೆಯೋ ಅದು ನಿಜವಾದ ಶಿಸ್ತು. ಶಿಕ್ಷಕರು, ಪೋಷಕರು ಎಷ್ಟೇ ಶ್ರಮಪಟ್ಟರೂ ನಿಶ್ಚಿತ ಗುರಿಯಿಲ್ಲದಿದ್ದರೆ ವಿದ್ಯಾರ್ಥಿಗಳಿಗೆ ಯಶಸ್ಸು ಲಭಿಸದು. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ಗುರಿ ಇರಬೇಕು. ದೃಢವಾದ ಹೆಜ್ಜೆ ಇಟ್ಟು ಏನನ್ನು ಸಾಧಿಸಬೇಕು ಎಂಬುದನ್ನು ಅರ್ಥೈಸಿಕೊಂಡಾಗ ಜೀವನವನ್ನು ಸುಗಮವಾಗಿ ನಡೆಸಲು ಸಾಧ್ಯವಾಗಲಿದೆ ಎಂದರು.ಈ ಸಂದರ್ಭ ಮಡಿಕೇರಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯ ವತಿಯಿಂದ ಮಕ್ಕಳ ಆರೋಗ್ಯ ತಪಾಸಣೆ ಮಾಡಿ ಔಷಧಿ ಮಾರ್ಗದರ್ಶನ ನೀಡಲಾಯಿತು.ಕಾರ್ಯಕ್ರಮದ ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಉಪಾಧ್ಯಕ್ಷೆ ಶಶಿ ಮಂದಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್, ಅಂಬೇಡ್ಕರ್ ವಸತಿ ಶಾಲೆಯ ಶಾಲೆಯ ಪ್ರಾಂಶುಪಾಲರಾದ ನಿತಾ ಕೆ ಡಿ, ಕಾಂತಿ ಫೋನ್ನಣ್ಣ ಉಪಸ್ಥಿತರಿದ್ದರು.