ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್‌) ನವರ ಎಡವಟ್ಟಿನಿಂದಾಗಿ ಪಟ್ಟಣದಲ್ಲಿ ಅಡುಗೆ ಅನಿಲ ಸಿಲಿಂಡರ್ ಸಿಗದೆ ಗ್ರಾಹಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

ಎಚ್‌ಪಿಸಿಎಲ್‌ ಎಡವಟ್ಟಿನಿಂದಾಗಿ ಸಿಲಿಂಡರ್ ಸಿಗದೆ ಸಾರ್ವಜನಿಕರ ಪರದಾಟ

ಸಂತೋಷ ದೈವಜ್ಞ

ಕನ್ನಡಪ್ರಭ ವಾರ್ತೆ ಮುಂಡಗೋಡ

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್‌) ನವರ ಎಡವಟ್ಟಿನಿಂದಾಗಿ ಪಟ್ಟಣದಲ್ಲಿ ಅಡುಗೆ ಅನಿಲ ಸಿಲಿಂಡರ್ ಸಿಗದೆ ಗ್ರಾಹಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಪಟ್ಟಣವನ್ನು ಗ್ರಾಮೀಣ ವ್ಯಾಪ್ತಿಗೆ ಸೇರಿಸಿರುವ ಪರಿಣಾಮ ಜನಸಾಮಾನ್ಯರು ಪರದಾಡುತ್ತಿದ್ದಾರೆ. ಮುಂಚೆ ೨೫ ದಿನಕ್ಕೊಮ್ಮೆ ಸಿಗುತ್ತಿದ್ದ ಸಿಲಿಂಡರ್‌ ಈಗ ೪೫ ದಿನ ಕಾಯಬೇಕಾಗಿದೆ.

ಹಿಂದೆ ಸುಮಾರು ೨೫ ದಿನಗಳಿಗೊಮ್ಮೆ ಸಿಲಿಂಡರ್ ಬುಕ್ಕಿಂಗ್‌ಗೆ ಅವಕಾಶವಿತ್ತು. ಇದೀಗ ಗ್ರಾಮೀಣ ವ್ಯಾಪ್ತಿಗೆ ಸೇರಿಸಿದ ಬಳಿಕ ಸಿಲಿಂಡರ್ ಬುಕಿಂಗ್ ಅವಧಿಯನ್ನು ೪೫ ದಿನಗಳಿಗೆ ನಿಗದಿಪಡಿಸಿರುವುದರಿಂದ ಗ್ರಾಹಕರು ಪರದಾಡುವಂತಾಗಿದೆ. ಮನೆಯಲ್ಲಿರುವ ಸಿಲಿಂಡರ್ ಖಾಲಿಯಾದರೂ ನಿಗದಿತ ಅವಧಿ ಪೂರ್ಣಗೊಳ್ಳುವವರೆಗೆ ಹೊಸ ಸಿಲಿಂಡರ್ ಬುಕಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಅನೇಕ ಕುಟುಂಬಗಳು ಅಡುಗೆಗೆ ಸಿಲಿಂಡರ್ ಇಲ್ಲದೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಿಸುತ್ತಿವೆ.

ಕಳೆದ ಸುಮಾರು ೬ ತಿಂಗಳಿನಿಂದ ಇಲ್ಲಿಯ ಜನ ಅಡುಗೆ ಅನಿಲಕ್ಕಾಗಿ ಅನುಭವಿಸುತ್ತಿರುವ ಪಾಡು ಅಷ್ಟಿಷ್ಟಲ್ಲ. ೨-೩ ತಿಂಗಳ ಕಾಲ ಇರಾನ್-ಅಮೆರಿಕಾ ನಡುವಿನ ಯುದ್ದದ ಪರಿಣಾಮ ಸಿಲಿಂಡರ್ ಕೊರತೆಯಿಂದ ಸಿಲಿಂಡರ್ ಸಿಗದೆ ಪರದಾಡಬೇಕಾಯಿತು. ಇದೀಗ ಪಟ್ಟಣಕ್ಕೆ ೨೫ ದಿನ ಹಾಗೂ ಗ್ರಾಮಿಣ ಪ್ರದೇಶಕ್ಕೆ ೪೫ ದಿನಕ್ಕೆ ಒಂದು ಸಿಲಿಂಡರ್ ನೀಡುವ ಹೊಸ ನಿಯಮ ಜಾರಿ ಮಾಡಲಾಗಿದ್ದು, ಅದರಂತೆ ೧೯೯೬ರ ಪೂರ್ವದ ಆದೇಶವನ್ನಾಧರಿಸಿ ಮುಂಡಗೋಡ ಪಟ್ಟಣವು ಗ್ರಾಮೀಣ ಪ್ರದೇಶಕ್ಕೆ ಸೇರ್ಪಡೆಯಾಗಿದ್ದರಿಂದ ಸಿಲಿಂಡರ್ ಬುಕಿಂಗ್ ಆಗಬೇಕಾದರೆ ಕನಿಷ್ಠ ೪೫ ದಿನ ಕಾಯಬೇಕಾಗಿದೆ.

ಈ ಹಿಂದೆ ಬುಕ್ಕಿಂಗ್ ಮಾಡಿ ೨-೩ ದಿನದಲ್ಲಿ ಮನೆ ಮನೆಗೆ ವಾಹನವೇ ಬಂದು ಸಿಲಿಂಡರ್ ವಿತರಿಸಲಾಗುತ್ತಿತ್ತು. ಆದರೆ ಈಗ ತಿಂಗಳು ಕಳೆದರೂ ಸಿಲಿಂಡರ್‌ ಪೂರೈಸಲಾಗುತಿಲ್ಲ. ವಾಹನ ಬರುವುದು ಹೋಗಲಿ ಗೋದಾಮಿಗೆ ಹೋದರೂ ಸಿಲಿಂಡರ್ ಸಿಗುತ್ತಿಲ್ಲ. ಗ್ಯಾಸ್ ಏಜನ್ಸಿಯವರಿಗೆ ಕೇಳಿದರೆ ಓಟಿಪಿ ಕೊಡಿ ಸಿಲಿಂಡರ್ ಕೊಡುತ್ತೇವೆ ಎಂದು ಹೇಳುತ್ತಾರೆ. ಒಟಿಪಿ ಬರಬೇಕಾದರೆ ಸಿಲಿಂಡರ್ ಬುಕ್ ಆಗಬೇಕು ಬುಕ್ ಆಗಬೇಕಾದರೆ ಕನಿಷ್ಠ ೪೫ ದಿನ ಆಗಿರಲೇಬೇಕು ಇದರಿಂದ ಸಾರ್ವಜನಿಕರ ಪರದಾಟ ಹೇಳತೀರದಂತಾಗಿದೆ.ವಾಣಿಜ್ಯ ಸಿಲಿಂಡರ್ ಮೊರೆ:

ಗೃಹಬಳಕೆಯ ಸಿಲಿಂಡರ್ ದೊರೆಯದ ಹಿನ್ನೆಲೆ ಕೆಲವರು ಅನಿವಾರ್ಯವಾಗಿ ಸುಮಾರು ₹೩ ಸಾವಿರ ನೀಡಿ ಕಮರ್ಷಿಯಲ್ ಸಿಲಿಂಡರ್‌ ಖರೀದಿಸಿ ಅಡುಗೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಮರ್ಷಿಯಲ್ ಸಿಲಿಂಡರ್ ದರ ಹೆಚ್ಚಿರುವುದರಿಂದ ಸಾಮಾನ್ಯ ಕುಟುಂಬಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತೊಂದರೆ ಅನುಭವಿಸುತ್ತಿರುವ ಜನರಿಗೆ ಸಿಲಿಂಡರ್ ಸಮಸ್ಯೆ ಮತ್ತಷ್ಟು ಸಂಕಷ್ಟ ತಂದಿದೆ.

ದೇಶದಲ್ಲಿ ಮಹಿಳೆಯರು ಹೊಗೆ ಮುಕ್ತವಾಗಿ ಅಡುಗೆ ಮಾಡಲಿ ಎಂದು ಪ್ರತಿಯೊಬ್ಬ ಬಡ ಕುಟುಂಬದವರಿಗೆ ಉಜ್ವಲ ಯೋಜನೆಯಡಿಯಲ್ಲಿ ಉಚಿತ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಈಗ ಅದಕ್ಕೆ ತಕ್ಕಂತೆ ಅಡುಗೆ ಅನಿಲ ಸರಬರಾಜು ಆಗದೆ ಇರುವುದರಿಂದ ಇಲ್ಲಿಯ ಜನತೆ ನಿತ್ಯ ಸಿಲಿಂಡರ್‌ಗಾಗಿ ಅಂಗಲಾಚುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸುತ್ತಮುತ್ತ ಸಾಕಷ್ಟು ಅರಣ್ಯವಿದ್ದರೂ ಉರುವಲು ಕಟ್ಟಿಗೆ ತರುವಂತಿಲ್ಲ. ಪಡಿತರ ಅಂಗಡಿಯಲ್ಲಿ ಸೀಮೆ ಎಣ್ಣೆ ನೀಡುವುದನ್ನು ಕೂಡ ಸ್ಥಗಿತಗೊಳಿಸಿದ್ದರಿಂದ ಶೇ. ೯೯ರಷ್ಟು ಜನ ಅಡುಗೆ ಅನಿಲವನ್ನೇ ಅವಲಂಬಿಸಿದ್ದಾರೆ. ಹಾಗಾಗಿ ಈಗ ಅಡುಗೆ ಅನಿಲವಿಲ್ಲದೆ ಅಡುಗೆಯೇ ಆಗುವುದಿಲ್ಲ ಎಂಬ ಸ್ಥಿತಿಗೆ ಜನ ಬಂದಂತಾಗಿದೆ. ಇಂತಹ ಸಂದರ್ಭದಲ್ಲಿ ಸಿಲಿಂಡರ್ ಸಿಗದೆ ಇರುವುದರಿಂದ ಜನರಿಗೆ ದಿಕ್ಕೇ ತೋಚದಂತಾಗಿದೆ.೧೯೯೫-೯೬ ಪೂರ್ವದ ಜನಸಂಖ್ಯೆಯಂತೆ ಮುಂಡಗೋಡ ಗ್ರಾಮೀಣ ಪ್ರದೇಶವಾಗಿತ್ತು. ಅದೇ ಆದೇಶ ಮುಂದುವರೆದ ಪರಿಣಾಮ ಈ ಸಮಸ್ಯೆ ಎದುರಾಗಿದೆ. ಹಾಲಿ ಜನಸಂಖ್ಯೆ ಹಾಗೂ ಪಟ್ಟಣ ಪ್ರದೇಶವಾದ ಬಗ್ಗೆ ಪಪಂನಿಂದ ದಾಖಲೆ ಪಡೆದು ಮೊದಲಿನಂತೆ ೨೫ ದಿನಕ್ಕೊಂದು ಸಿಲಿಂಡರ್ ಪೂರೈಸುವ ಬಗ್ಗೆ ಎಚ್‌ಪಿಸಿಎಲ್‌ಗೆ ಮನವಿ ಸಲ್ಲಿಸಲಾಗಿದೆ ಎನ್ನುತ್ತಾರೆ ಅನಿಲ ವಿತರಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಓಶಿಮಠ.