ಸಾರಾಂಶ
- ಜಗಳೂರಲ್ಲಿ ದಾವಣಗೆರೆ ರಸ್ತೆ ಬಂದ್‌ಗೊಳಿಸಿ ರೈತ ಮಹಿಳೆಯರ ಮನವಿ । - ರೈತ ಸಂಘ, ರೈತ ಸೇನೆ ನೇತೃತ್ವದಲ್ಲಿ ಪ್ರತಿಭಟನೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ರಸಗೊಬ್ಬರಕ್ಕಾಗಿ ಜಗಳೂರು ತಾಲೂಕಿನಲ್ಲಿ ರೈತರ ಹೋರಾಟ ಮತ್ತಷ್ಟು ತೀವ್ರತೆ ಪಡೆಯುತ್ತಿದೆ. ರಸಗೊಬ್ಬರ ನೀಡುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟುಹಿಡಿದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ನೂರಾರು ರೈತರು, ರೈತ ಮಹಿಳೆಯರು ತಮ್ಮ ಕುಟುಂಬ ಸಮೇತ ಹೋರಾಟ ಆರಂಭಿಸಿದರು.
ಜಗಳೂರು ಪಟ್ಟಣದ ಎಪಿಎಂಪಿ ಮುಂಭಾಗದ ದಾವಣಗೆರೆ ರಸ್ತೆಯಲ್ಲಿ ಸಂಘಟನೆ ಮುಖಂಡರ ನೇತೃತ್ವದಲ್ಲಿ ರೈತರು, ರೈತ ಮಹಿಳೆಯರು ಕುಟುಂಬ ಸಮೇತ ದಾವಣಗೆರೆ- ಜಗಳೂರು ರಸ್ತೆ ಬಂದ್ ಮಾಡುವ ಮೂಲಕ ತಕ್ಷಣವೇ ಗೊಬ್ಬರ ಪೂರೈಸುವಂತೆ ಪಟ್ಟುಹಿಡಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ, ಕೃಷಿ ಜಂಟಿ ನಿರ್ದೇಶಕರು ಭೇಟಿ ನೀಡಿ, ಇವತ್ತೇ ಗೊಬ್ಬರ ಪೂರೈಸುವ ಭರವಸೆ ನೀಡಿದರು.ಈ ಸಂದರ್ಭ ರೈತ ಮಹಿಳೆಯರು ಮಾತನಾಡಿ, ಬರಪೀಡಿತ ಜಗಳೂರು ತಾಲೂಕಿನ ನಮ್ಮಂತಹ ರೈತರಿಗೆ ನೀರು, ರಸಗೊಬ್ಬರ, ಬಿತ್ತನೆಬೀಜ ಕಾಲಕಾಲಕ್ಕೆ ಸರಿಯಾಗಿ ನೀಡ್ರಪ್ಪಾ. ಎಷ್ಟು ಹೊತ್ತಿದ್ದರೂ ಇಂದೇ ರಸಗೊಬ್ಬರ ಕಳಿಸುವುದಾಗಿ ಜಿಲ್ಲಾಡಳಿತ ಭರವಸೆ ನೀಡಿ ಹೋಗಿತ್ತು. ಆದರೆ, ಈಗ ಇನ್ನೂ 2 ದಿನವಾಗುತ್ತದೆ ಅಂತ ಅಧಿಕಾರಿಗಳು ಹೇಳುತ್ತಿದ್ದಾರೆ. ನಮಗೆ ರಸಗೊಬ್ಬರ ನೀಡುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದರು.
ಎಷ್ಟೇ ಹೊತ್ತಾದರೂ ಇವತ್ತೇ ರಸಗೊಬ್ಬರ ಬರಬೇಕು. ದಯವಿಟ್ಟು ನಮಗೆ ಗೊಬ್ಬರದ ಸಹಾಯ ಮಾಡ್ರಪ್ಪಾ. ಇದೊಂದು ಬೇಡಿಕೆ ನೀವು ಮೊದಲು ನೆರವೇರಿಸಿ ಕೊಡಿ. ಯಾವುದೇ ಕಾರಣಕ್ಕೂ ನಮ್ಮಂತಹ ಬಡ ರೈತರನ್ನು ಬೀದಿಗೆ ತಳ್ಳಬೇಡಿ. ರೈತರಿಗೆ ರಸಗೊಬ್ಬರ ಕೊಡಬೇಕೆಂದುಕೊಂಡಿದ್ದೀರಾ ಅಥವಾ ಇದೇ ರೀತಿ ಗೊಬ್ಬರ ಕೊಡದೇ ಸತಾಯಿಸುವುದನ್ನು ಮುಂದುವರಿಸಬೇಕೆಂದಿದ್ದಿರಾ ಎಂದು ಅವರು ಕಿಡಿಕಾರಿದರು.ಭೂಮಿ ತಾಯಿಯನ್ನೇ ನಂಬಿ ಬದುಕು ಕಟ್ಟಿಕೊಂಡವರು ನಾವು. ಇಂತಹ ಸಮಯದಲ್ಲಿ ನಮಗೆ ನೀರು, ಗೊಬ್ಬರ ಇಲ್ಲದಿದ್ದರೆ ಏನು ಬೆಳೆಯಬೇಕು? ಯಾವಾಗ ಬೆಳೆಯಬೇಕು? ನಾವು ರೈತರು ಬೆವರು ಸುರಿಸಿ ದುಡಿಯುತ್ತೇವೆ. ನಿಮ್ಮ ಬಳಿ ಬೇರೆ ಏನನ್ನೂ ನಾವು ಕೇಳುವುದಿಲ್ಲ. ಹೊಲಗಳಲ್ಲಿ ಬೆಳೆದ ಬೆಳೆಗಳಿಗೆ ಹಾಕಲು ರಸಗೊಬ್ಬರ ಕೊಡ್ರಪ್ಪ ಎಂದು ಕೈಮುಗಿದು ಬೇಡಿಕೊಳ್ಳುತ್ತಿದ್ದೇವೆ. ಯೂರಿಯಾ ಕೊಡಲು ತೊಂದರೆ ಮಾಡಬೇಡ್ರಪ್ಪಾ ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ರಾಜನಹಟ್ಟಿ ರಾಜು, ಚಿಕ್ಕಮಲ್ಲನಹೊಳೆ ಚಿರಂಜೀವಿ, ಕ್ಯಾಸೇನಹಳ್ಳಿ ನಾಗರಾಜ, ಗೌಡಗೊಂಡನಹಳ್ಳಿ ಸತೀಶ, ಕಾನನಕಟ್ಟೆ ಅನಿಲ, ಭರಮಸಮುದ್ರ ಗುರುಸಿದ್ದಪ್ಪ ಇತರರು ನೇತೃತ್ವ ವಹಿಸಿದ್ದರು. ಮಂಗಳವಾರ ಸಂಜೆಯೂ ರೈತರ ಹೋರಾಟ ಮುಂದುವರಿದಿದ್ದು, ಪೊಲೀಸರು ಎಷ್ಟೇ ಸಮಾಧಾನಪಡಿಸಲು ಪ್ರಯತ್ನಿಸಿದರೂ ರೈತರು ಮಾತ್ರ ಯೂರಿಯಾ ಕೊಡಿಸಿ, ನಾವು ಹೋರಾಟ ಕೈ ಬಿಡುತ್ತೇವೆ ಎಂದೇ ಹೇಳುತ್ತಿದ್ದುದು ಸರ್ಕಾರದ ಗಮನ ಸೆಳೆಯಿತು.- - -
(ಬಾಕ್ಸ್) * ರಸಗೊಬ್ಬರ ಕೊರತೆ ಆಗಿದ್ರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಸಂಘದ ಮುಖಂಡರು ಮಾತನಾಡಿ, ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಆಗಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ದಾವಣಗೆರೆ ಜಿಲ್ಲೆಗೆ ಪೂರೈಕೆಯಾಗಿದ್ದ ಸುಮಾರು 2500 ಮೆಟ್ರಿಕ್ ಟನ್ ಯೂರಿಯಾ ದಾಸ್ತಾನನ್ನು ಶಿವಮೊಗ್ಗ ಜಿಲ್ಲೆಗೆ ಸ್ಥಳೀಯ ವಿತರಕರು ಕಳುಹಿಸಿಕೊಟ್ಟಿದ್ದು ಇಲಾಖೆ ಗಮನಕ್ಕೆ ಬರಲಿಲ್ಲವೇ? ಮುಖ್ಯಮಂತ್ರಿ, ಕೃಷಿ ಸಚಿವರು ರಾಜ್ಯದ ರೈತರ ಹಿತವನ್ನೇ ಮರೆತಿದ್ದಾರೆ. ಕೃಷಿ ಸಚಿವರಂತೂ ಇಲಾಖೆಗೂ ತಮಗೂ ಸಂಬಂಧವೇ ಇಲ್ಲವಂಬಂತೆ ಯೂರಿಯಾ ಬಗ್ಗೆ ಬೇಜವಾಬ್ದಾರಿಯಾಗಿ ಮಾತನಾಡುತ್ತಿದ್ದಾರೆ ಎಂದು ದೂರಿದರು. ಕೃಷಿ ಅಧಿಕಾರಿಗಳು ಆಯಾ ಜಿಲ್ಲೆಗೆ ಅಗತ್ಯ ರಸಗೊಬ್ಬರದ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡುವಲ್ಲಿ ವಿಫರಾಗಿದ್ದಾರೆ. ಇದಕ್ಕೆಲ್ಲಾ ರಾಜ್ಯ ಸರ್ಕಾರದ ಬೇಜವಾಬ್ದಾರಿ ಕಾರಣ. ಜಿಲ್ಲೆಗೆ ಅಗತ್ಯ ಯೂರಿಯಾ ಸರಬರಾಜು ಆಗಿದೆಯೆನ್ನುವ ಇಲಾಖೆಯು ಡೀಲರ್‌ಗಳ ಮನೆ, ಗೋದಾಮುಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಲಿ. ಎಷ್ಟು ರೈತರಿಗೆ ನ್ಯಾಯ ಯುತವಾಗಿ ಗೊಬ್ಬರ ವಿತರಣೆಯಾಗಿದೆ ಎನ್ನುವುದನ್ನು ದಾಖಲೆ ಸಹಿತ ಪರಿಶೀಲಿಸಿ, ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿ. ನಮಗೆ ಮೊದಲು ಸಮರ್ಪಕವಾಗಿ ಯೂರಿಯಾ ನೀಡಲಿ ಎಂದು ಪಟ್ಟುಹಿಡಿದರು.- - -
-29ಕೆಡಿವಿಜಿ9.ಜೆಪಿಜಿ:ಜಗಳೂರು ಪಟ್ಟಣದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ರೈತರು ದಾವಣಗೆರೆ ಮುಖ್ಯ ರಸ್ತೆ ಬಂದ್ ಮಾಡಿ, ರಸಗೊಬ್ಬರ ನೀಡುವಂತೆ ರೈತರು, ರೈತ ಮಹಿಳೆಯರು ಪ್ರತಿಭಟಿಸಿದರು.