ಸಾರಾಂಶ
- ಜಿಲ್ಲಾ ಛಲವಾದಿ ಮಹಾಸಭಾದಿಂದ ಪ್ರತಿಭಾ ಪುರಸ್ಕಾರ ಸಮಾರಂಭ । ಒಳಮೀಸಲಾತಿ ಶೀಘ್ರ ಜಾರಿ: ಭರವಸೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಸಾಮಾಜಿಕವಾಗಿ ನೊಂದ, ಆರ್ಥಿಕ ಶಕ್ತಿ, ಧ್ವನಿ ಇಲ್ಲದ ಕೆಳಸ್ಥರದ, ಶೋಷಿತ ಸಮುದಾಯಗಳು ಬದಲಾವಣೆ ಕಾಣಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಬಲಿಸದಿದ್ದರೆ ನಾವೇ ಮೂರ್ಖರಾಗುತ್ತೇವೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.ನಗರದ ಬಿಐಇಟಿ ಕಾಲೇಜಿನ ಎಸ್.ಎಸ್. ಮಲ್ಲಿಕಾರ್ಜುನ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಜಿಲ್ಲಾ ಛಲವಾದಿ ಮಹಾಸಭಾದಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದೆಹಲಿಯಲ್ಲಿ ಮೊನ್ನೆ ನಡೆದ ಎಐಸಿಸಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೊಂಡಾಡಿದ್ದು, ಒಬ್ಬ ವ್ಯಕ್ತಿಯನ್ನು ಯಾವ ಕಾರಣಕ್ಕೆ ಅಷ್ಟೊಂದು ಕೊಂಡಾಡಿರಬಹುದೆಂಬ ಪ್ರಶ್ನೆ ಮೂಡುತ್ತದೆ ಎಂದರು.
ಮೆಹರ್‌ಗಳ ಶೌರ್ಯ ನೆನಪಿಸಿಕೊಳ್ಳಿ:ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ಮೀಸಲಾತಿ ಕೊಡದೇ ಇದ್ದಿದ್ದರೆ ನಾವು ಹೇಗೆ ಇರುತ್ತಿದ್ದೆವೋ ಗೊತ್ತಿಲ್ಲ. ಆದರೆ, ಸಂವಿಧಾನ ರಕ್ಷಣೆ ಮಾಡಲು ನಾವಿದ್ದೇವೆ. ಸಹಸ್ರಾರು ಪೇಶ್ವೆಗಳನ್ನು ಕೇವಲ 100 ಜನ ಮೆಹರ್‌ಗಳು ಮುಗಿಸಿದ ಶೌರ್ಯದ ದಿನಗಳಲ್ಲಿ ನೆನಪು ಮಾಡಿಕೊಳ್ಳಿ. ನಾವು ಯಾರಿಗೂ ಕಡಿಮೆ ಇಲ್ಲವೆಂಬ ಮನೋಭಾವ ಮೈಗೂಡಿಸಿಕೊಳ್ಳಿ. ಜಾತಿ ಸಂಘರ್ಷ ಇಡೀ ವಿಶ್ವವನ್ನೇ ಆವರಿಸಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ತೋಟದ ಮನೆಯೊಂದರಲ್ಲಿ ಎಡ-ಬಲ ನಾವಿಬ್ಬರೂ ಒಂದೇ ಅಂತಾ ಘೋಷಣೆ ಮಾಡಿದ್ದೇವೆ. ವಿಧಾನಸಭೆ ಚುನಾವಣೆ ಪೂರ್ವದಲ್ಲಿ ನಾವು ಹೇಳಿದ್ದಂತೆ ಒಳ ಮೀಸಲಾತಿ ಅನುಷ್ಠಾನಗೊಳಿಸುತ್ತೇವೆ. ಆದಷ್ಟು ಬೇಗನೆ ಒಳ ಮೀಸಲಾತಿ ಜಾರಿಗೊಳಿಸುತ್ತೇವೆ ಎಂದರು.
ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಮಾತನಾಡಿ, ವಿದ್ಯೆಯಿಂದಲೇ ಎಲ್ಲಾ ಸವಾಲು, ಸಂಕಷ್ಟಗಳನ್ನು ಮೆಟ್ಟಿ ನಿಂತವರು ಅಂಬೇಡ್ಕರ್. ದೇಶದಲ್ಲಿ ಅಂಬೇಡ್ಕರ್, ಪೆರಿಯಾರ್, ನಾರಾಯಣ ಗುರುಗಳು ತುಳಿತಕ್ಕೊಳಗಾದ ಜನರೇ ಇತಿಹಾಸ ನಿರ್ಮಿಸಿದ್ದಾರೆ. ಜೀವನದ ಮೌಲ್ಯ ಗೊತ್ತಿರುವುದೇ ಇಂತಹ ಸಮುದಾಯಕ್ಕೆ. ತಂತ್ರಜ್ಞಾನ ಬೆಳವಣಿಗೆ ಹೊಂದುಂತ್ತಿರುವ ಇಂದಿನ ದಿನಗಳಲ್ಲಿ ಶಿಕ್ಷಣದಿಂದ ಮಾತ್ರ ಅಧಿಕಾರಕ್ಕೆ ಬರಲು ಸಾಧ್ಯ. ಹಾಗಾಗಿ, ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಅಧಿಕಾರದ ನಿರ್ಣಾಯಕ ಸ್ಥಾನದಲ್ಲಿ ನಮ್ಮ ಮಕ್ಕಳು ಕುಳಿತುಕೊಳ್ಳುವಂತಹ ಅವಕಾಶ ಪಡೆಯಬೇಕು ಎಂದು ತಿಳಿಸಿದರು.ಮೈಸೂರಿನ ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಛಲವಾದಿ ಮಹಾಸಭಾ ಅಧ್ಯಕ್ಷ ಎನ್.ರುದ್ರಮುನಿ ಅಧ್ಯಕ್ಷತೆ ವಹಿಸಿದ್ದರು. ಸಮಾಜದ 82 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರ ಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಫ್.ಎಚ್. ಜಕ್ಕಪ್ಪ, ಬಿ.ಎಸ್. ವಿಜಯಕುಮಾರ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಸಮಾಜದ ಮುಖಂಡರಾದ ಎಚ್.ಬಿ. ಜಯಪ್ರಕಾಶ, ರಾಣೇಬೆನ್ನೂರು ಸಿಪಿಐ ಡಾ. ಎಸ್.ಕೆ. ಶಂಕರ, ಎಸ್.ಶೇಖರಪ್ಪ, ಕಾಂಗ್ರೆಸ್ ಮುಖಂಡ ಡಿ.ಬಸವರಾಜ್ ಇತರರು ಇದ್ದರು.
- - -(ಗಣ್ಯರ ಕೋಟ್ಸ್) ಒನಕೆ ಓಬವ್ವನ ಜಯಂತಿಗೆ ಬೇಡಿಕೆ ಇಟ್ಟಿದ್ದೀರಿ. ದೊಡ್ಡ ಪ್ರಮಾಣದಲ್ಲಿ ಮಾಡೋಣ ಅಂದಿದ್ದೆ. ಕಾರಣಾಂತರದಿಂದ ಮುಂದಕ್ಕೆ ಹೋಗಿತ್ತು. ನ.11 ಓಬವ್ವನ ಜಯಂತಿ ಅಧಿಕೃತವಾಗಿದ್ದರೆ, ನಾವು ದಾವಣಗೆರೆಯಲ್ಲೇ ನ.3 ಅಥವಾ 4ನೇ ವಾರದಲ್ಲಿ ಆಚರಿಸೋಣ. ಬೀದರ್‌ನಿಂದ ಚಾಮರಾಜ ನಗರ ಹೀಗೆ ನಾಡಿನ 4 ದಿಕ್ಕುಗಳಿಗೂ ಕೇಂದ್ರ ಬಿಂದುವಾದ ಮಧ್ಯ ಕರ್ನಾಟಕವಾದ ದಾವಣಗೆರೆಯಲ್ಲೇ ಆಚರಿಸೋಣ. ಈಗಿನಿಂದಲೇ ನೀವು ಸಿದ್ಧತೆ ಮಾಡಿಕೊಳ್ಳಿ. ನಾನು, ಮಹದೇವಪ್ಪ ಇತರರು ಜವಾಬ್ದಾರಿ ತೆಗೆದುಕೊಳ್ಳುತ್ತೇವೆ
- ಡಾ. ಜಿ.ಪರಮೇಶ್ವರ, ಗೃಹ ಸಚಿವ- - -
ಸಮಾನತೆ ಮತ್ತು ಆರ್ಥಿಕ ಸ್ವಾವಲಂಬನೆ ಆಗಬೇಕೆಂಬ ಕಾರಣಕ್ಕೆ ಸಿದ್ದರಾಮಯ್ಯ ಸರ್ಕಾರದಿಂದ ಜಾತಿ ಗಣತಿ ಮಾಡಲಾಗುತ್ತಿದೆ. ಇದರಿಂದ ಕೆಳಸ್ಥರದ ಜನರಿಗೆ ಅವಕಾಶ ಕಲ್ಪಿಸಲು ಅನುಕೂಲವಾಗಲಿದೆ. ಸಂವಿಧಾನ ವಿರೋಧಿ ಶಕ್ತಿಗಳ ಮಸಲತ್ತು ಸಾಕಾರಗೊಳ್ಳಬಾರದು. ಇದಕ್ಕಾಗಿ ಸರಿಯಾದ ಜ್ಞಾನ ಮತ್ತು ಸಂಘಟನೆ ಅಗತ್ಯವಿದೆ. ಸಿದ್ದರಾಮಯ್ಯ ದಲಿತರ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ಶೋಷಿತ ಸಮುದಾಯಗಳು ಒಗ್ಗಟ್ಟಾಗಬೇಕು.- ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ.
- - -ನಾವುಗಳು ಬಾಬಾ ಸಾಹೇಬ್ ಅಂಬೇಡ್ಕರ್‌ರನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಅಂಬೇಡ್ಕರ್ ಜಯಂತಿ, ಮೆರವಣಿಗೆಗೆ ಮಾತ್ರವೇ ಸೀಮಿತ ಆಗಬಾರದು. ಅಂಬೇಡ್ಕರ್ ಅಂದರೆ ಸ್ಫೂರ್ತಿಯ ಸೆಲೆ, ತ್ಯಾಗದ ಸಾಕಾರ ಮೂರ್ತಿ. ಸಮುದಾಯದ ವಿಮೋಚನೆಯ ಅಸ್ತ್ರ ಶಿಕ್ಷಣ. ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಆಗದವರು ದುಷ್ಟರು, ಭ್ರಷ್ಟರು ಆಗಿದ್ದಾರೆ.
- ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಉರಿಲಿಂಗ ಪೆದ್ದಿಮಠ, ಮೈಸೂರು- - -
ದಾವಣಗೆರೆಯಲ್ಲಿ ಅಂಬೇಡ್ಕರ್ ಸಮುದಾಯ ಭವನಕ್ಕೆ ಎಲ್ಲರನ್ನೂ ಒಗ್ಗೂಡಿಸಿ, ಒಂದು ಸ್ಥಳ ಆಯ್ಕೆ ಮಾಡಲಾಗಿದೆ. ಅದಕ್ಕಾಗಿ ₹5 ಕೋಟಿ ಅನುದಾನ ಬಂದಿದೆ. 2 ಅಂತಸ್ತಿನ ಭವನ ನಿರ್ಮಾಣಕ್ಕೆ ₹14 ಕೋಟಿಗೂ ಹೆಚ್ಚು ಅನುದಾನದ ಅಗತ್ಯವಿದೆ. ಸಮಾಜ ಕಲ್ಯಾಣ ಸಚಿವರು ಈ ಬಗ್ಗೆ ಗಮನಹರಿಸಬೇಕು. ನಮ್ಮ ಜಿಲ್ಲೆಯ ಅಪೂರ್ಣ ಸಮುದಾಯ ಭವನಗಳ ಪೂರ್ಣಗೊಳಿಸಲು ಕನಿಷ್ಠ ₹1 ಕೋಟಿ ಅನುದಾನವನ್ನೂ ಬಿಡುಗಡೆ ಮಾಡಬೇಕು.- ಎಸ್.ಎಸ್.ಮಲ್ಲಿಕಾರ್ಜುನ, ಜಿಲ್ಲಾ ಉಸ್ತುವಾರಿ ಸಚಿವ.
- - -ದಾವಣಗೆರೆ ಜಿಲ್ಲೆಯಲ್ಲಿ ಹಾಸ್ಟೆಲ್ ಸೌಲಭ್ಯ ಇಲ್ಲದೇ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಸಚಿವರು ಗಮನ ಹರಿಸುವ ಅಗತ್ಯವಿದೆ. ಅಂಬೇಡ್ಕರ್ ಭವನವನ್ನು ಬೆಂಗಳೂರು ಮಾದರಿಯಲ್ಲಿ ನಿರ್ಮಿಸಲು 25 ಕೋಟಿ ರು. ಅನುದಾನ ಬಿಡುಗಡೆ ಮಾಡಬೇಕು.
- ಕೆ.ಎಸ್.ಬಸವಂತಪ್ಪ, ಮಾಯಕೊಂಡ ಶಾಸಕ- - -
-27ಕೆಡಿವಿಜಿ7.ಜೆಪಿಜಿ:ದಾವಣಗೆರೆಯಲ್ಲಿ ಭಾನುವಾರ ಜಿಲ್ಲಾ ಛಲವಾದಿ ಮಹಾಸಭಾ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಉದ್ಘಾಟಿಸಿದರು. ಸಚಿವರಾದ ಡಾ. ಜಿ.ಪರಮೇಶ್ವರ, ಡಾ. ಎಚ್.ಸಿ.ಮಹದೇವಪ್ಪ, ಎಸ್.ಎಸ್. ಮಲ್ಲಿಕಾರ್ಜುನ ಇನ್ನಿತರರು ಇದ್ದರು.