ಪಂ. ಶ್ರೀನಿವಾಸ ಜೋಶಿ ಅವರು ಹಿಂದುಸ್ತಾನಿ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಹೊಸ ಹಾಗೂ ಉದಯೋನ್ಮುಖ ಕಲಾವಿದರಿಗೆ ದೊಡ್ಡ ವೇದಿಕೆಗಳಲ್ಲಿ ಅವಕಾಶ ಕಲ್ಪಿಸುವ ಮೂಲಕ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಿದ್ದರು.

ಹುಬ್ಬಳ್ಳಿ: ಪ್ರತಿಭಾವಂತ ಯುವ ಸಂಗೀತ ಕಲಾವಿದರು ತಮ್ಮ ಸುಮಧುರ ಸಂಗೀತ ಪ್ರಸ್ತುತಿಗಳ ಮೂಲಕ ಹಿರಿಯ ಸಂಗೀತಗಾರ ಹಾಗೂ ಸಂಯೋಜಕ ಪಂ. ಶ್ರೀನಿವಾಸ ಜೋಶಿ ಅವರಿಗೆ ಸ್ವರ ಶ್ರದ್ಧಾಂಜಲಿ ಸಲ್ಲಿಸಿದರು.

ನಗರದ ಚೇಂಬರ್‌ ಆಫ್‌ ಕಾಮರ್ಸ್‌ ಸಭಾಂಗಣದಲ್ಲಿ ಕ್ಷಮತಾ ಸೇವಾ ಸಂಸ್ಥೆ, ಸಂಸ್ಕಾರ ಭಾರತಿ, ಮಂಗಲಾ ಭಾರತಿ ಹಾಗೂ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ‘ಸ್ವರ ಶ್ರದ್ಧಾಂಜಲಿ’ ಕಾರ್ಯಕ್ರಮದಲ್ಲಿ ಹಿಂದುಸ್ತಾನಿ ಸಂಗೀತದ ಸೀತಾರ್‌ ವಾದಕ ವಿಜಯ ಗೋನಹಾಳ, ಶಾಸ್ತ್ರೀಯ ಸಂಗೀತ ಕಲಾವಿದ ವಿನೋದ ಪಾಟೀಲ, ತಬಲಾ ವಾದಕ ಶಮಂತ ದೇಸಾಯಿ ಹಾಗೂ ಸಂಗೀತಾ ಹೆಗಡೆ ಅವರ ಸಂಗೀತ ಪ್ರಸ್ತುತಿ ಪ್ರೇಕ್ಷಕರ ಮನಸೂರೆಗೊಂಡಿತು.

ಮಧು ಕುಲಕರ್ಣಿ (ಕೊಳಲು) ಹಾಗೂ ಪ್ರಸಾದ್‌ ಮಡಿವಾಳರ (ತಬಲಾ) ಅವರ ಜುಗಲ್ಬಂದಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಕಲಾವಿದರ ಸ್ವರ-ತಾಳದ ಸಮನ್ವಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ಷಮತಾ ಸೇವಾ ಸಂಸ್ಥೆ ಸಂಚಾಲಕ ಗೋವಿಂದ ಜೋಶಿ, ಪಂ. ಶ್ರೀನಿವಾಸ ಜೋಶಿ ಅವರು ಹಿಂದುಸ್ತಾನಿ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಹೊಸ ಹಾಗೂ ಉದಯೋನ್ಮುಖ ಕಲಾವಿದರಿಗೆ ದೊಡ್ಡ ವೇದಿಕೆಗಳಲ್ಲಿ ಅವಕಾಶ ಕಲ್ಪಿಸುವ ಮೂಲಕ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಿದ್ದರು. ತಾವು ಮಾತ್ರ ಬೆಳೆಯುವುದಕ್ಕಿಂತ ಶಾಸ್ತ್ರೀಯ ಸಂಗೀತದ ಶ್ರೀಮಂತ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಉದ್ದೇಶದಿಂದ ಯುವ ಕಲಾವಿದರಿಗೆ ಮಾರ್ಗದರ್ಶನ ನೀಡುತ್ತಿದ್ದರು ಎಂದರು.

ಕಲೆಯ ಆರಾಧನೆಯ ಮೂಲಕ ಹಿರಿಯ ಚೇತನಕ್ಕೆ ನಮನ ಸಲ್ಲಿಸುವ ‘ಸ್ವರ ಶ್ರದ್ಧಾಂಜಲಿ’ ಕಾರ್ಯಕ್ರಮದ ಆಶಯ ವಿಶಿಷ್ಟ ಹಾಗೂ ಅರ್ಥಪೂರ್ಣವಾಗಿದೆ ಎಂದು ಹೇಳಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಆಪ್ತ ಕಾರ್ಯದರ್ಶಿ ಮುರಳೀಧರ ಮಳಗಿ ಮಾತನಾಡಿ, ಯುವ ಕಲಾವಿದರನ್ನು ಪ್ರೋತ್ಸಾಹಿಸುವಲ್ಲಿ ಶ್ರೀನಿವಾಸ ಜೋಶಿ ಅವರ ಕೊಡುಗೆ ಶ್ಲಾಘನೀಯ. ಯುವ ಕಲಾವಿದರ ಸಣ್ಣ ಸಾಧನೆಗಳನ್ನೂ ಗುರುತಿಸಿ, ಅವರಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದರು ಎಂದರು.

ಚೇಂಬರ್‌ ಆಫ್‌ ಕಾಮರ್ಸ್‌ ಅಧ್ಯಕ್ಷ ಜಿ.ಕೆ. ಅದಪ್ಪನವರ ಮಾತನಾಡಿದರು. ವಿದುಷಿ ವೈಷ್ಣವಿ ಹಾನಗಲ್‌, ಉದ್ಯಮಿ ವಿನಯ ಜವಳಿ, ವಿನಯ ನಾಯಕ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.