ದಾವಣಗೆರೆಯಲ್ಲಿ ಬಟ್ಟೆ ವ್ಯಾಪಾರಿಯನ್ನು ಕಿಡ್ನ್ಯಾಪ್ ಮಾಡಿ ಸಿಕ್ಕಿಬಿದ್ದ 10 ಜನರ ಗ್ಯಾಂಗ್‌ನ ಐವರು ಆರೋಪಿಗಳು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಶ್ರೀಮಂತ ಯುವಕರನ್ನು ಗುರಿಯಾಗಿಸಿಕೊಂಡು ಅಪಹರಿಸಿ, ಹಣಕ್ಕೆ ಬೇಡಿಕೆ ಇಡುತ್ತಿದ್ದ 10 ಜನ ಅಪಹರಣಕಾರರ ತಂಡವನ್ನು ಇಲ್ಲಿನ ವಿದ್ಯಾನಗರ ಪೊಲೀಸರು ಬಂಧಿಸಿ, ಕಾರು ಮೊಬೈಲ್‌ಗಳನ್ನು ವಶಪಡಿಸಿಕೊಂಡ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.ಬೇರೆ ರಾಜ್ಯಗಳಿಂದ ಕಾಲೇಜು ವ್ಯಾಸಂಗಕ್ಕೆಂದು ಬಂದಿದ್ದ ಗಂಗಾರಾಮ್ ಪವಾರ್ ಅಲಿಯಾಸ್ ಬಬ್ಲು ಇಡೀ ಅಪಹರಣಕಾರರ ತಂಡದ ಪ್ರಮುಖ. ಈತನೂ ಸೇರಿದಂತೆ 10 ಮಂದಿ ಅಪಹರಣಕಾರರನ್ನು ಪೊಲೀಸರು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ, ಬಂಧಿತರು ಬೇರೆ ರಾಜ್ಯದ, ಊರಿನವರಾಗಿದ್ದು, ದಾವಣಗೆರೆಯ ವಿವಿಧ ಕಾಲೇಜುಗಳಲ್ಲಿ ಓದುತ್ತಿದ್ದವರಾಗಿದ್ದಾರೆ. ಶ್ರೀಮಂತ ಯುವಕರನ್ನೇ ಗುರಿಯಾಗಿಸಿಕೊಂಡು, ಅಪಹರಿಸುತ್ತಿದ್ದ ಈ ಗುಂಪು ನಂತರ ಹಣಕ್ಕೆ ಬೇಡಿಕೆ ಇಡುತ್ತಿದ್ದು ಎನ್ನಲಾಗಿದೆ.
ನಗರದ 26 ವರ್ಷದ ಬಟ್ಟೆ ವ್ಯಾಪಾರಿಯೊಬ್ಬನನ್ನು ಸೆ.9ರಂದು ಅಪಹರಿಸಿದ್ದ ಗಂಗಾರಾಂ ಅಲಿಯಾಸ್ ಬಬ್ಲು ಅಂಡ್ ಗ್ಯಾಂಗ್ ಹಣ ತರಿಸಿಕೊಡುವಂತೆ ಒತ್ತಾಯಿಸಿ ಮೈಮೇಲೆ ಬಾಸುಂಡೆ ಬರುವಂತೆ ದೈಹಿಕ ಹಲ್ಲೆ ನಡೆಸಿತ್ತು. ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ದಾಖಲಾಗಿದ್ದು, ಹತ್ತು ಜನರ ಗ್ಯಾಂಗನ್ನು ಬಂಧಿಸಿ, ಒಂದು ಕಾರು, ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.₹2000 ಮುಖ ಬೆಲೆಯ ಪಿಂಕ್ ನೋಟ್‌ಗಳನ್ನು ಬದಲಾಯಿಸುವುದಾಗಿ, ಹಣಕಾಸಿನ ವಿಚಾರ ಮಾತನಾಡುವುದಿದೆ ಎಂದು ಶ್ರೀಮಂತ ಕುಟುಂಬಗಳ ಯುವಕರನ್ನು ಅಪಹರಣಕಾರರು ತಮ್ಮಲ್ಲಿಗೆ ಕರೆಸಿಕೊಳ್ಳುತ್ತಿದ್ದರು. ಅದೇ ರೀತಿ ಪರಿಚಯಸ್ಥ ಅಬ್ಬಾಸ್ ಎಂಬ ವ್ಯಾಪಾರಿಗೆ ಪುಸಲಾಯಿಸಿ ಶಾಮನೂರು ಸಮುದಾಯ ಭವನದ ಬಳಿ ಕರೆದೊಯ್ದಿದ್ದರು. ಅಲ್ಲಿಗೆ ಕಾರಿನಲ್ಲಿ ಬಂದಿದ್ದ ನಾಲ್ವರು ಯುವಕರು ಬಲವಂತವಾಗಿ ಅಬ್ಬಾಸ್‌ಗೆ ಕಾರಿನಲ್ಲಿ ಕೂಡಿಸಿಕೊಂಡು, ಆಂಜನೇಯ ಬಡಾವಣೆಯ ಮನೆಯೊಂದರಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದರು. ನಿನ್ನ ತಂದೆಗೆ ಹೇಳಿ ₹10 ಲಕ್ಷ ತರಿಸಿಕೊಡುವಂತೆ, ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಬಿಯರ್ ಬಾಟಲು, ಮರದ ಪಟ್ಟಿಯಿಂದ ಬಟ್ಟೆ ವ್ಯಾಪಾರಿ ಮೇಲೆ ಹಲ್ಲೆ ನಡೆಸಿದ್ದ ಅಪಹರಣಕಾರರು ಕ್ರೌರ್ಯ ಮೆರೆದಿದ್ದರು. ಅಪಹರಣಕ್ಕೊಳಗಾದ ವ್ಯಾಪಾರಿ ಯುವಕನಿಗೆ ಒಂದು ಅಭ್ಯಾಸವಿತ್ತು. ನಿತ್ಯವೂ ತನ್ನ ಕುಟುಂಬದ ವಾಟ್ಸಪ್ ಗ್ರೂಪ್‌ನಲ್ಲಿ ಮೊಬೈಲ್ ಲೈವ್ ಲೊಕೇಷನ್ ಶೇರ್ ಮಾಡುತ್ತಿದ್ದ. ಅದರ ಆಧಾರದಲ್ಲಿ ಆಂಜನೇಯ ಬಡಾವಣೆಯಲ್ಲಿ ಆತನ ಕುಟುಂಬದವರು ಹುಡುಕಾಟ ಸಹ ನಡೆಸಿದ್ದರು. ಅಷ್ಟೊಂದು ಜನ ಸೇರಿದ್ದನ್ನು ಕಂಡ ಅಪಹರಣಕಾರರ ಗ್ಯಾಂಗ್ ಬಟ್ಟೆ ವ್ಯಾಪಾರಿಯನ್ನು ಬಿಟ್ಟು ಪರಾರಿಯಾಗಿತ್ತು. ಅನಂತರ ವಿದ್ಯಾನಗರ ಠಾಣೆಗೆ ದೂರು ನೀಡಿದ ನಂತರವಷ್ಟೇ ಕಿಡ್ನ್ಯಾಪರ್ಸ್ ಗ್ಯಾಂಗ್ ವಿಚಾರ ಬಯಲಾಗಿದೆ.ಪ್ರಕರಣ ದಾಖಲಿಸಿಕೊಂಡ ವಿದ್ಯಾನಗರ ಪೊಲೀಸರು ಬಿಎಎಂಎಸ್ ವಿದ್ಯಾರ್ಥಿ ಗಂಗಾರಾಮ್ ಪವಾರ್ ಅಲಿಯಾಸ್ ಬಬ್ಲು ಸೇರಿದಂತೆ 10 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಗಂಗೂರಾಮ್ ಪವಾರ್ ವಿರುದ್ಧ ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ. * ಇಡೀ ಅಪಹರಣಕಾರರ ಗ್ಯಾಂಗ್ ಬಂಧನ: ಎಸ್ಪಿ
ದಾವಣಗೆರೆ: ದಾವಣಗೆರೆ ವಿದ್ಯಾನಗರ ಠಾಣೆ ವ್ಯಾಪ್ತಿಯಲ್ಲಿ ಸೆ.9ರಂದು 26 ವರ್ಷದ ಬಟ್ಟೆ ವ್ಯಾಪಾರಿಯ ಅಪಹರಣವಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗೂರಾಮ್ ಪವಾರ್ ಅಲಿಯಾಸ್ ಬಬ್ಲು ಸೇರಿದಂತೆ 10 ಜನರ ಗ್ಯಾಂಗನ್ನು ಬಂಧಿಸಿದ್ದೇವೆ. ಬಂಧಿತರಲ್ಲಿ ಗಂಗಾರಾಮ್‌ನೇ ಪ್ರಮುಖನಾ ಗಿದ್ದು, ಈ ಬಗ್ಗೆ ಕೂಲಂಕುಷ ತನಿಖೆ ನಡೆಸಿದ್ದೇವೆ. ₹2000 ಮುಖಬೆಲೆಯ ಪಿಂಕ್ ನೋಟನ್ನು ಬದಲಾವಣೆ ಮಾಡಿಕೊಡುತ್ತೇವೆಂದು ಕರೆಸಿಕೊಂಡು ಹಲ್ಲೆ ಮಾಡಿ, ಅಪಹರಣ ಮಾಡಿದ್ದರು. ಬಂಧಿತರಿಂದ ಕಾರು, ಮೊಬೈಲ್‌ಗಳನ್ನು ಜಪ್ತಿ ಮಾಡಿ, ಆರೋಪಿಗಳ ಬಗ್ಗೆ ಮತ್ತಷ್ಟು ತನಿಖೆ ತೀವ್ರಗೊಳಿಸಿದ್ದೇವೆ ಎಂದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ.ಶೇಖರ ವಿವರಿಸಿದ್ದಾರೆ.