ಸಾರಾಂಶ
ಯಲ್ಲಾಪುರ: ವಿದ್ಯಾರ್ಥಿ ಜೀವನ ಬದುಕಿಗೆ ಶಕ್ತಿ ನೀಡುವ ಕಾರ್ಯ ಮಾಡುತ್ತದೆ. ಒಮ್ಮೆ ಇಂತಹ ಜೀವನದ ಸದವಕಾಶವನ್ನು ಕಳೆದುಕೊಂಡರೆ ಜೀವನದಲ್ಲಿ ಮತ್ತೆ ಸಿಗದು. ಶ್ರಮಪಟ್ಟು ಸಾಧನೆ ಮಾಡಿ. ಮುಂದೆ ಉತ್ತಮ ಜೀವನ ನಿಮಗೆ ಕಾದಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಸಲಹೆ ನೀಡಿದರು.ಸೆ. ೩೦ರಂದು ಪಟ್ಟಣದ ಸ.ಪ್ರ.ದ. ಕಾಲೇಜಿನಲ್ಲಿ ಸರಸ್ವತಿ ಮೂರ್ತಿಯನ್ನು ಅನಾವರಣಗೊಳಿಸಿ, ವಿದ್ಯಾರ್ಥಿ ಪರಿಷತ್ ಹಾಗೂ ವಿವಿಧ ವೇದಿಕೆಗಳನ್ನು ಉದ್ಘಾಟಿಸಿ, ಮಾತನಾಡಿದರು.ಯುವ ಸಮುದಾಯ ಪಾಲಕರನ್ನು ನಗಣ್ಯ ಮಾಡುತ್ತಿರುವುದು ವಿಪರ್ಯಾಸ. ಮುಂದೆ ಪಾಲಕರ ಸ್ಥಾನವನ್ನು ತಲುಪುವುದು ಅನಿವಾರ್ಯ ಎಂಬ ಸತ್ಯ ನಿಮಗೆ ತಿಳಿದಿರಲಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ ಶಾಸಕರು, ದಿನಕರ ದೇಸಾಯಿ ಶಿಕ್ಷಣಕ್ಕೆ ನೀಡಿದ ಕೊಡುಗೆಯ ಪರಿಣಾಮ ಜಿಲ್ಲೆಯಲ್ಲಿ ಶಿಕ್ಷಣ ಕ್ರಾಂತಿ ನಡೆಯಿತು. ಅಂಥವರ ಬದುಕು ಆದರ್ಶವಾಗಬೇಕು ಎಂದರು.ಸಾಗರದ ಇಂದಿರಾಗಾಂಧಿ ಸರ್ಕಾರಿ ಮಹಿಳಾ ಕಾಲೇಜಿನ ಸಹಪ್ರಾಧ್ಯಾಪಕ ಡಾ. ಮಹಾವೀರ ಮಾತನಾಡಿ, ಕನಸನ್ನು ಕನಸಾಗಿರಲು ಬಿಡದೇ ನನಸಾಗಿಸಿಕೊಳ್ಳುವ ಪ್ರಯತ್ನ ನಿಮ್ಮದಾಗಿರಬೇಕು. ಮನಸ್ಸಿನಲ್ಲಿರುವ ಬೇಡದ ವಿಚಾರಗಳನ್ನು ತೊರೆದರೆ ನನಸು ಸುಲಭ ಸಾಧ್ಯ. ನಾವು ನೋಡುವ ದೃಷ್ಟಿಯಲ್ಲಿ ಪ್ರಪಂಚವಿದೆ. ಸಾಧಿಸಬೇಕೆಂಬ ಕಿಚ್ಚು ನಿಮ್ಮೊಳಗಿನಿಂದ ಬಂದಾಗ ಸಾಧನೆ ನಿಶ್ಚಿತ. ಆಗುವುದಿಲ್ಲವೆಂಬ ಕೀಳರಿಮೆ ಬಿಟ್ಟು ಸಾಧನೆ ಮಾಡಿ ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಆರ್.ಡಿ. ಜನಾರ್ದನ ಮಾತನಾಡಿ, ಉತ್ತಮ ಮಾರ್ಗದರ್ಶಕರೇ ಉತ್ತಮ ಶಿಕ್ಷಕರು. ಬದಲಾವಣೆ ಜಗತ್ತಿನ ನಿಯಮ. ಜ್ಞಾನದಿಂದ ವಿಜ್ಞಾನ, ವಿಜ್ಞಾನದಿಂದ ತಂತ್ರಜ್ಞಾನಕ್ಕೆ ಬದಲಾಗದಿದ್ದರೆ, ಹಿಂದುಳಿಯುತ್ತೇವೆ. ಆದ್ದರಿಂದ ನಮ್ಮ ಮಕ್ಕಳನ್ನು ಭಾವನಾತ್ಮಕವಾಗಿ ಗಟ್ಟಿಗೊಳಿಸಬೇಕು ಎಂದರು.ವಿದ್ಯಾರ್ಥಿ ಪರಿಷತ್ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ ಯಲ್ಲಾಪುರಕರ್ ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ವಿಜಯ, ಮಿರಾಶಿ, ಗೋಪಾಲ ನೇತ್ರೇಕರ್, ಸುನಂದಾ ದಾಸ್, ವಿವಿಧ ವೇದಿಕೆಗಳ ಸಂಚಾಲಕರಾದ ಭವ್ಯ ಸಿ., ಡಾ. ರುಬಿನಾ, ಸುರೇಖಾ ತಡವಲ ವೇದಿಕೆಯಲ್ಲಿದ್ದರು.ವೈಷ್ಣವಿ ದುಂಡಿ ನೃತ್ಯದ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು. ವೇದಾ ಭಟ್ಟ ಪ್ರಾರ್ಥಿಸಿದರು. ಉಪನ್ಯಾಸಕರಾದ ಸವಿತಾ ನಾಯ್ಕ ಸ್ವಾಗತಿಸಿದರು. ಶರತಕುಮಾರ ವಿದ್ಯಾರ್ಥಿ ಪರಿಷತ್ ಪ್ರತಿನಿಧಿಗಳನ್ನು ಪರಿಚಯಿಸಿ, ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿಗಳಾದ ಆಶಾ ನಾಯ್ಕ ನಿರ್ವಹಿಸಿದರು. ಮೇಘಾ ವಂದಿಸಿದರು.