ಗಾಂಧೀಜಿಯವರ ಜೀವನ ಮತ್ತು ಆದರ್ಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದ್ದು, ಸತ್ಯ, ಅಹಿಂಸೆ ಹಾಗೂ ಸರಳತೆಯಂತಹ ತತ್ವಗಳನ್ನು ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ್.ಎಂ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಗಾಂಧೀಜಿಯವರ ಜೀವನ ಮತ್ತು ಆದರ್ಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದ್ದು, ಸತ್ಯ, ಅಹಿಂಸೆ ಹಾಗೂ ಸರಳತೆಯಂತಹ ತತ್ವಗಳನ್ನು ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ್.ಎಂ ಹೇಳಿದರು.

ಟಿಳಕವಾಡಿಯ ವೀರಸೌಧದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ಮಹಾತ್ಮ ಗಾಂಧೀಜಿಯವರ 157ನೇ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯವಾಗಿ ಹಲವು ಅವಕಾಶಗಳಿದ್ದರೂ ಗಾಂಧೀಜಿ ಸರಳ ಜೀವನ ಆಯ್ಕೆ ಮಾಡಿಕೊಂಡಿದ್ದರು. ಸತ್ಯ ಮತ್ತು ಅಹಿಂಸೆಯ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ಇಡೀ ಜಗತ್ತಿಗೆ ಮಾದರಿಯಾಗಿದ್ದಾರೆ. ಅವರ ಜೀವನ ಮತ್ತು ಸಂದೇಶವನ್ನು ಅರಿಯಲು ಪ್ರತಿಯೊಬ್ಬರೂ ಗಾಂಧೀಜಿ ಜೀವನಚರಿತ್ರೆ ಓದಬೇಕು ಎಂದು ಸಲಹೆ ನೀಡಿದರು.ಸ್ವಚ್ಛತೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಮನಸ್ಸಿನ ಜತೆಗೆ ನಗರ ಹಾಗೂ ಸುತ್ತ-ಮುತ್ತಲಿನ ಪರಿಸರವನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಸಮಾಜಕ್ಕೆ ಉಪಯುಕ್ತವಾದ ಕಾರ್ಯಗಳನ್ನು ಮಾಡುವುದರಿಂದ ನಿಜವಾದ ತೃಪ್ತಿ ದೊರೆಯುತ್ತದೆ. ಸಾರ್ವಜನಿಕ ಸೇವೆ ಸಲ್ಲಿಸುತ್ತಿರುವ ಮಹಾನಗರ ಪಾಲಿಕೆ ಸಿಬ್ಬಂದಿಯ ಕಾರ್ಯವನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.ಹಿರಿಯ ಸಾಹಿತಿ ಡಾ.ಪಿ.ಜಿ.ಕೆಂಪಣ್ಣವರ ವಿಶೇಷ ಉಪನ್ಯಾಸ ನೀಡಿ, ಮಹಾತ್ಮ ಗಾಂಧೀಜಿ ಭಾರತ ಮಾತ್ರವಲ್ಲದೆ ಇಡೀ ಜಗತ್ತಿಗೆ ಶಾಂತಿ ಮತ್ತು ಸತ್ಯದ ಸಂದೇಶ ಸಾರಿದ ಮಹಾನ್ ವ್ಯಕ್ತಿ. ಸತ್ಯ, ಸರಳತೆ, ತ್ಯಾಗ ಹಾಗೂ ಅಹಿಂಸೆಯ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ. ಗಾಂಧೀಜಿ ಅವರ ಬದುಕಿನ ಮೇಲೆ ತಾಯಿ ಪುತಳಿಬಾಯಿ ಅವರ ಸಂಸ್ಕಾರ ಹಾಗೂ ಮೌಲ್ಯಗಳು ಪ್ರಭಾವ ಬೀರಿದ್ದವು. ಇಂದಿನ ವಿದ್ಯಾರ್ಥಿಗಳು ತ್ಯಾಗದ ಮನೋಭಾವದ ಜತೆಗೆ ದೇಶಭಕ್ತಿಯನ್ನೂ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸರಳತೆ, ಪ್ರಾಮಾಣಿಕತೆ, ಶಿಸ್ತು ಹಾಗೂ ದೇಶಪ್ರೇಮ ಪ್ರತಿಯೊಬ್ಬರಿಗೂ ಆದರ್ಶವಾಗಿವೆ ಎಂದರು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಗುರುನಾಥ ಕಡಬೂರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ನಾಯಕ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕಿ ಕವಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ರಾಜೇಂದ್ರ ಕಲಘಟಗಿ, ಭಾರತ ಸೇವಾದಳದ ವಿಶ್ರಾಂತ ದಳಪತಿ ಬಸವರಾಜ ಹಟ್ಟಿಗೌಡರ, ಜಿಲ್ಲಾ ಸಂಘಟಕ ಅನಿಲ್ ಪತ್ತಾರ, ಶ್ರೀರಂಗ ಜೋಷಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ರಾಜೇಂದ್ರ ಕಲಘಟಗಿ ಹಾಗೂ ಭಾರತ ಸೇವಾದಳದ ವಿಶ್ರಾಂತ ದಳಪತಿ ಬಸವರಾಜ ಹಟ್ಟಿಗೌಡರ ಅವರನ್ನು ಸನ್ಮಾನಿಸಲಾಯಿತು.ಜನಪದ ಸಂಚಿಕೆ ಬಿಡುಗಡೆ:

ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗಾಂಧೀಜಿ ಜೀವನ ಸಾಧನೆ ಕುರಿತು ಪ್ರಕಟಿಸಲಾದ ಅಕ್ಟೋಬರ್ ತಿಂಗಳ ವಿಶೇಷ ಜನಪದ ಸಂಚಿಕೆಯನ್ನು ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಬಿಡುಗಡೆ ಮಾಡಿದರು.

ಗಾಂಧೀಜಿ ಜಯಂತಿ ಅಂಗವಾಗಿ ಪ್ರೌಢಶಾಲೆ, ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಬಾಪೂಜಿ’ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ವಿನಾಯಕ ಮೋರೆ ಹಾಗೂ ತಂಡ ಗಾಂಧೀಜಿಗೆ ಪ್ರಿಯವಾದ ಭಜನಾ ಗೀತೆಗಳನ್ನು ಪ್ರಸ್ತುತಪಡಿಸಿದರು.ಸತ್ಯ ಮತ್ತು ಅಹಿಂಸೆಯ ಮಾರ್ಗದ ಮೂಲಕ ಗಾಂಧೀಜಿ ನಡೆಸಿದ ಹೋರಾಟ ಇಡೀ ಜಗತ್ತಿಗೆ ಮಹತ್ವದ ಸಂದೇಶ ನೀಡಿದೆ. ದೇಶದ ರಕ್ಷಣೆಯಲ್ಲಿ ಸೈನಿಕರು ಹಾಗೂ ದೇಶಕ್ಕೆ ಅನ್ನ ನೀಡುವಲ್ಲಿ ರೈತರ ಕೊಡುಗೆ ಮಹತ್ವದ್ದು. ಇದನ್ನು ಮನಗಂಡು ಲಾಲ್ ಬಹದ್ದೂರ್ ಶಾಸ್ತ್ರಿ ಜೈ ಜವಾನ್, ಜೈ ಕಿಸಾನ್ ಘೋಷಣೆ ನೀಡಿದ್ದರು.

-ಗುರುನಾಥ ಕಡಬೂರ,

ಉಪನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೆಳಗಾವಿ.