ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಮೈಸೂರಿನ ವಿಜಯನಗರದಲ್ಲಿ ನಾವು ಮಾಡಬಹುದು, ನಾವು ಮಾಡುತ್ತೇವೆ ಎಂಬ ಧ್ಯೇಯವಾಕ್ಯದೊಂದಿಗೆ ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ)ದ ಯಂಗ್ ಇಂಡಿಯನ್ಸ್ (ವೈಐ) ವತಿಯಿಂದ ಎರಡು ದಿನಗಳ ಯಂಗ್ ಇಂಡಿಯಾ ಪಾರ್ಲಿಮೆಟ್-2025 ಯುವ ಸಮಾವೇಶ ನಡೆಯಿತು.ಸಮಾರೋಪ ಸಮಾರಂಭದಲ್ಲಿ ಸಂಸದ ಯದುವೀರ್ ಒಡೆಯರ್ ಮಾತನಾಡಿ, ಗ್ರಾಪಂ ಸದಸ್ಯರು, ನಗರಪಾಲಿಕೆ ಸದಸ್ಯರು, ಶಾಸಕರು ಮತ್ತು ಸಂಸದರವರೆಗೆ ಸ್ಥಳೀಯ ಪ್ರತಿನಿಧಿಗಳಿಂದ ತಿಳಿದುಕೊಳ್ಳುವುದು ಮತ್ತು ಪರಸ್ಪರರ ಜವಾಬ್ದಾರಿಯನ್ನು ತಿಳಿದುಕೊಳ್ಳುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಶ್ರೇಷ್ಠ ನಾಯಕರು ಸಹ ಅತ್ಯುತ್ತಮ ಕೇಳುಗರಾಗಿದ್ದರು ಎಂದು ಹೇಳಿದರು.ಯುವಕರು ಸಕ್ರಿಯ ಆಲಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ಅವರು ವಿದ್ಯಾರ್ಥಿಗಳೊಂದಿಗೆ ತೊಡಗಿಸಿಕೊಂಡರು.ಮೈಸೂರಿನ ಯುವ ದಾರ್ಶನಿಕರು, ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ರಾಷ್ಟ್ರ ನಿರ್ಮಾಣ, ಭಾರತದ ಬೆಳವಣಿಗೆ ಮತ್ತು ಭವಿಷ್ಯದ ಮೇಲೆ ಪರಿಣಾಮ ಬೀರುವ ಅಂಶಗಳು, ನಾಯಕತ್ವ ಗುಣ ಬೆಳೆಸಿಕೊಳ್ಳುವುದು ಸೇರಿದಂತೆ ಯುವ ಪೀಳಿಗೆಯಲ್ಲಿ ನಾಗರಿಕ ಜವಾಬ್ದಾರಿ ಕುರಿತು ಕ್ರಿಯಾತ್ಮಕ ಚರ್ಚೆಗಳನ್ನು ನಡೆಸಲಾಯಿತು.ಹವಾಮಾನ ಬದಲಾವಣೆ, ಸಾಮಾಜಿಕ ನ್ಯಾಯ, ಉದ್ಯೋಗ ಮತ್ತು ಉದ್ಯಮಶೀಲತೆ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ, ಡಿಜಿಟಲ್ ಭಾರತ, ಆರೋಗ್ಯ ಮತ್ತು ಯೋಗಕ್ಷೇಮ, ಆರ್ಥಿಕ ಬೆಳವಣಿಗೆ, ರಾಷ್ಟ್ರೀಯ ಭದ್ರತೆ, ಕ್ರೀಡೆ ಮತ್ತು ಯವ ಅಭಿವೃದ್ಧಿಯಂತಹ ಪ್ರಮುಖ ವಿಷಯಗಳನ್ನು ಮಂಡಿಸಲಾಯಿತು.ಯಂಗ್ ಇಂಡಿಯನ್ಸ್ ಮೈಸೂರು ಚಾಪ್ಟರ್ ಅಧ್ಯಕ್ಷ ಗಗನ್ ರಂಕಾ ಮಾತನಾಡಿ, ಸಮಾವೇಶವು ನಾಳಿನ ನಾಯಕರನ್ನು ರೂಪಿಸುವ ಒಂದು ಚಳುವಳಿಯಾಗಿದೆ. ಅರ್ಥಪೂರ್ಣ ಚರ್ಚೆಗಳು ಮತ್ತು ನಿರ್ಧಾರ ತೆಗೆದುಕೊಳ್ಳುವ ಸದೃಢ ಮನಸ್ಸು ಯುವಕರಲ್ಲಿ ಬರಬೇಕು ಎಂದರು.ಯುವ ಉದ್ಯಮಿ ಪ್ರಿಯಾಂಕ ಶ್ರೀಧರ್ ಮಾತನಾಡಿ, ಯುವಜನರು ರಾಜಕೀಯ ಕ್ಷೇತ್ರವನ್ನು ವೃತ್ತಿ ಜೀವನವನ್ನಾಗಿ ಆಯ್ಕೆ ಮಾಡಿಕೊಳ್ಳುವ ಮೂಲಕ ರಾಷ್ಟ್ರವನ್ನು ನಿರ್ಮಾಣಕ್ಕೆ ಶ್ರಮಿಸಬೇಕು. ಈ ನಿಟ್ಟಿನಲ್ಲಿ ಯಂಗ್ ಇಂಡಿಯಾ ಪಾರ್ಲಿಮೆಂಟ್ ಪ್ರೇರಣೆ ನೀಡಲಿದೆ ಎಂದು ತಿಳಿಸಿದರು.100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ- ಸಮಾವೇಶದಲ್ಲಿ ಭಾರತೀಯ ವಿದ್ಯಾ ಭವನ, ದಕ್ಷ ಪಿಯು ಕಾಲೇಜು, ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್, ಮಾನಸ ಸರೋವರ ಪುಷ್ಕಕರಣಿ ವಿದ್ಯಾಶ್ರಮ, ಜೆಎಸ್ಎಸ್ಐಟಿ ಕ್ಯಾಂಪಸ್ ನ ಜೆಎಸ್ಎಸ್ ಪಬ್ಲಿಕ್ ಸ್ಕೂಲ್, ಸರ್ಕಾರಿ ಆದರ್ಶ ವಿದ್ಯಾಲಯ, ಆರ್ಕಿಡ್ಸ್ ಪಬ್ಲಿಕ್ ಸ್ಕೂಲ್, ನಂಜನಗೂಡಿನ ರೋಟರಿ ಸ್ಕೂಲ್ ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳಿಂದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಯಂಗ್ ಇಂಡಿಯಾ ಪಾರ್ಲಿಮೆಂಟ್ ಸಮಾವೇಶಗಳು ನಗರ ಮಟ್ಟದ ಸುತ್ತು ಮುಗಿದ ನಂತರ, ಪ್ರಾದೇಶಿಕ ಮಟ್ಟ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಡೆಯಲಿದೆ. ದೆಹಲಿಯ ಸಂಸತ್ ಭವನದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.