ಸಾರಾಂಶ
ಇತ್ತೀಚೆಗೆ ನಡೆದ ನಗರಸಭೆ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಪಕ್ಷದ 3 ಸದಸ್ಯರು ವಿಪ್ ಉಲ್ಲಂಘಿಸಿರುವುದಾಗಿ ತಿಳಿಸಿ ಏಕಾಏಕಿ ಪಕ್ಷದಿಂದ ಉಚ್ಛಾಟನೆಗೊಳಿಸಲಾಗಿದೆ ಎಂದು ಕೆ.ಮಂಜುನಾಥ್ ಆರೋಪಿಸಿದರು.
ಭದ್ರಾವತಿ : ಭಾರತೀಯ ಜನತಾ ಪಕ್ಷದಲ್ಲಿ ನಾವು ಸಲ್ಲಿಸಿರುವ ಸೇವೆಗೆ ಯಾವುದೇ ಬೆಲೆ ಇಲ್ಲ. ಈ ಹಿನ್ನೆಲೆಯಲ್ಲಿ ಪಕ್ಷ ಬಿಡುವ ನಿರ್ಧಾರ ಕೈಗೊಂಡು ದೂರವಿರುವುದಾಗಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ, ಯುವ ಮುಖಂಡ, ಕೆ.ಮಂಜುನಾಥ್ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ನಡೆದ ನಗರಸಭೆ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಪಕ್ಷದ 3 ಸದಸ್ಯರು ವಿಪ್ ಉಲ್ಲಂಘಿಸಿರುವುದಾಗಿ ತಿಳಿಸಿ ಏಕಾಏಕಿ ಪಕ್ಷದಿಂದ ಉಚ್ಛಾಟನೆಗೊಳಿಸಲಾಗಿದೆ. ಇದರಿಂದಾಗಿ ಮನನೊಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮ್ಮುಖ ದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಾಗಿ ಸ್ಪಷ್ಟಪಡಿಸಿದರು.
ಯಾವುದೇ ಒತ್ತಡದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿಲ್ಲ. ಸ್ವಯಂ ಇಚ್ಛೆಯಿಂದ ಸೇರ್ಪಡೆಗೊಂಡಿದ್ದೇವೆ. ನನ್ನ ಜೊತೆ ನಗರಸಭೆ ಸದಸ್ಯೆ ಅನಿತಾರವರ ಪತಿ ಮಲ್ಲೇಶ್ ಸಹ ಸೇರ್ಪಡೆಗೊಂಡರು. ಉಳಿದಂತೆ ಮುಂದಿನ ಬೆಳವಣಿಗೆಗಳನ್ನು ಗಮನಿಸಿ ನಗರಸಭೆ ಹಿರಿಯ ಸದಸ್ಯರಾದ ವಿ.ಕದಿರೇಶ್, ಅನಿತಾ ಹಾಗೂ ಶಶಿಕಲಾರವರು ಸಹ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಕುಮಾರ್, ಬಿ.ಕೆ.ಮೋಹನ್, ಸುದೀಪ್ ಕುಮಾರ್, ಗೋಪಾಲ್, ಮಲ್ಲೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.