ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಭಾರತ ದೇಶದಲ್ಲಿ ಜನಸಂಖ್ಯೆ ಹೆಚ್ಚು, ಸಮಸ್ಯೆಗಳು ಹೆಚ್ಚು ಆ ಸಮಸ್ಯೆಗಳನ್ನು ಪರಿಹರಿಸಲು ಯಾರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೋ ಅಂತಹವರು ಮುಂದೆ ಬರಬೇಕು ಜನ ನಾಯಕರಾಗಬೇಕು. ಅಂತಹ ಕೆಲಸವನ್ನು ಅಬ್ದುಲ್ಲಾ ಖಾನ್ ಅವರು ಯುವ ನಾಯಕರಾಗಿ ಹಲವಾರು ಜನರಿಗೆ ಜನಸೇವೆ ಮಾಡುವ ಕಾರ್ಯ ಮಾಡುತ್ತಿದ್ದಾರೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು. ನಗರದ ಬೇಗಂ ಮೊಹಲ್ಲಾದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ಲಾ ಖಾನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣೆ ಶಿಬಿರ ಹಾಗೂ ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ ಶಿಬಿರ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಅಬ್ದುಲ್ಲಾ ಖಾನ್ ಅವರಿಗೆ ಸನ್ಮಾನಿಸಿ ಮಾತನಾಡಿದರು.
ಮನುಷ್ಯ ಹುಟ್ಟುವುದು ಸಹಜ ಆದರೆ ನಾವು ಹುಟ್ಟಿ ಬೆಳೆದು ಈ ಸಮಾಜಕ್ಕೆ ಏನು ಕೊಡುಗೆ ನೀಡುತ್ತೇವೆ ಎಂಬುದು ಮುಖ್ಯ. ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ಲಾ ಖಾನ್ ಅವರು ತಮ್ಮ ಹುಟ್ಟು ಹಬ್ಬದಂದು ಹಲವಾರು ಸಮಾಜಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ನಾನೂ ಸಹ 100 ಜನರಿಗೆ ಟೈಲರಿಂಗ್ ಮೆಷಿನ್ ವಿತರಿಸುವ ಕಾರ್ಯಕ್ರಮ ಮಾಡುತ್ತೇನೆ ಎಂದರು. ನಿವೇಶನ ಹಂಚುವುದು ಶತಸಿದ್ಧಶಿರಾ ನಗರದಲ್ಲಿ ಸುಮಾರು 10 ಸಾವಿರ ಮಂದಿ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಂತಹ ನಿವೇಶನ ರಹಿತರಿಗೆ ನಿವೇಶನ ನೀಡಬೇಕೆಂಬುದು ನನ್ನ ಸಂಕಲ್ಪ ಆದರೆ ಇದಕ್ಕೆ ಕೆಲವರು ನಾನಾ ರೀತಿಯ ತೊಂದರೆ ಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಕಾನೂನು ರೀತಿಯಲ್ಲಿ ಕರಾರುವಕ್ಕಾಗಿ ಜನ ಉಪಯೊಗಿ ಕೆಲಸ ಮಾಡುತ್ತಿದ್ದೇನೆ. ಇದರಲ್ಲಿ ಕೆಲವರು ರಾಜಕೀಯ ಬೆರೆಸುವ ಕೆಲಸ ಮಾಡುತ್ತಿದ್ದಾರೆ ಎಂದರು. ಕೆಪಿಸಿಸಿ ಅಲ್ಪಸಂಖ್ಯಾತರ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲಾ ಖಾನ್ ಅವರು ಮಾತನಾಡಿ ಶಿರಾ ಕ್ಷೇತ್ರದ ಶಾಸಕರಾದ ಟಿ.ಬಿ.ಜಯಚಂದ್ರ ಅವರು ಬರದ ನಾಡಾಗಿದ್ದ ಶಿರಾ ತಾಲೂಕನ್ನು ನೀರಿನಿಂದ ಸಮೃದ್ಧಿ ಮಾಡಿ ನೀರಿನ ಸಮಸ್ಯೆ ಪರಿಹರಿಸಿದ್ದಾರೆ. ಅವರ ದೂರ ದೃಷ್ಟಿ, ಮಾರ್ಗದರ್ಶನದಂತೆ ನಾನೂ ಸಹ ಸಾಮಾಜಿಕ ಕೆಲಸ ಮಾಡುತ್ತಿದ್ದೇನೆ. ನನ್ನ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸಿ ಆಚರಿಸುವ ಬದಲು ಏನಾದರೂ ವಿಶೇಷವಾದ ಸಾಮಾಜಿಕ ಕಾರ್ಯ ಮಾಡಬೇಕೆಂಬುದು ನನ್ನ ಉದ್ದೇಶ. ಈ ನಿಟ್ಟಿನಲ್ಲಿ ಇಂದು ಆರೋಗ್ಯ ತಪಾಸಣಾ ಶಿಬಿರವನ್ನು ತಾಲೂಕು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಏರ್ಪಡಿಸಲಾಗಿತ್ತು. ಇದರೊಂದಿಗೆ ವಿಷನ್‌ಟೆಕ್ ವತಿಯಿಂದ ಸ್ಥಳದಲ್ಲಿಯೇ ಕಣ್ಣನ್ನು ಪರೀಕ್ಷೆ ಮಾಡಿ ಕನ್ನಡ ವಿತರಣೆ ಮಾಡುವ ಕಾರ್ಯ ಮಾಡಿದ್ದಾರೆ ಎಲ್ಲರಿಗೂ ಧನ್ಯವಾದ ಎಂದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸಚ್ಚಿದಾನಂದ ಕುಚನೂರು, ತಾಲೂಕು ಆರೋಗ್ಯಾಧಿಕಾರಿ ಡಾ.ಸಿದ್ದೇಶ್, ನಗರಸಭೆ ಆಶ್ರಯ ಸಮಿತಿ ಸದಸ್ಯ ನೂರುದ್ದೀನ್, ವೈದ್ಯರಾದ ಡಾ.ಶಬಿನಾ, ಡಾ.ಭಾರತಿ, ಡಾ.ನರೇಂದ್ರ ಬಾಬು, ಪೌರಾಯುಕ್ತ ರುದ್ರೇಶ್, ಕೆಪಿಸಿಸಿ ಮಾದ್ಯಮ ಉಸ್ತುವಾರಿ ಸಂಜಯ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್.ಮಂಜುನಾಥ್, ಮುಖಂಡರಾದ ನಸ್ರುಲ್ಲಾ ಖಾನ್, ಸಾಲೇಹ ಸೇರಿದಂತೆ ಹಲವರು ಹಾಜರಿದ್ದರು.