ಸಾರಾಂಶ
ಕಾರವಾರದಲ್ಲಿ ನಡೆದ ಅಪರೂಪದ ಘಟನೆಕನ್ನಡಪ್ರಭ ವಾರ್ತೆ ಕಾರವಾರ
ಮೀನುಗಾರಿಕೆ ನಡೆಸುತ್ತಿದ್ದಾಗ ಜಿಗಿದು ಬಂದು ಮೀನಿನ ಮುಳ್ಳು ಚುಚ್ಚಿ ಇಲ್ಲಿನ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದು, ಇದೊಂದು ಅಪರೂಪದ ದುರಂತದ ಘಟನೆಯಾಗಿದೆ.ತಾಲೂಕಿನ ಮಾಜಾಳಿಯ ಅಕ್ಷಯ ಅನಿಲ್ ಮಾಜಾಳೀಕರ (24)ಮೃತ ಯುವಕ.
ಮಂಗಳವಾರ ಮಾಜಾಳಿಯ ದಂಡೆಬಾಗದಲ್ಲಿ ಅಕ್ಷಯ್ ಮೀನು ಹಿಡಿಯುತ್ತಿದ್ದಾಗ ಹಠಾತ್ತಾಗಿ ಜಿಗಿದುಬಂದ ಮೀನಿನ ಮುಳ್ಳು ಹೊಟ್ಟೆಗೆ ನಾಟಿ ತೀವ್ರ ಗಾಯ ಉಂಟಾಯಿತು. ನಂತರ ಜಿಲ್ಲಾ ಆಸ್ಪತ್ರೆಗೆ ಬಂದು ದಾಖಲಾಗಿದ್ದು, ಚಿಕಿತ್ಸೆ ಫಲಿಸದೆ ಗುರುವಾರ ಮುಂಜಾನೆ ಮೃತಪಟ್ಟಿದ್ದಾರೆ.ಸ್ಥಳೀಯವಾಗಿ ಕರೆಯಲಾಗುವ ಕಂಡೆ (ಸಕ್ಕರ್ ಫಿಶ್)ನ ಮುಳ್ಳು ಈತನಿಗೆ ನಾಟಿದೆ. ಈ ಮೀನಿನ ಮೂತಿಯಲ್ಲಿ 8-10 ಇಂಚು ಉದ್ದದ ಮುಳ್ಳು ಕಾಣಬಹುದು. ಇಂತಹ ಮೀನು ಸಮುದ್ರದಿಂದ ಜಿಗಿದು ಬಂದು ಚುಚ್ಚಿದೆ.
ವೈದ್ಯರ ನಿರ್ಲಕ್ಷ್ಯದ ಪರಿಣಾಮವಾಗಿ ಯುವಕ ಮೃತಪಟ್ಟಿದ್ದು, ಯುವಕನಿಗೆ ಎಕ್ಸರೆ ಮಾತ್ರ ಮಾಡಲಾಗಿತ್ತು. ಸ್ಕ್ಯಾನ್ ಮಾಡಿದ್ದರೆ ಹೊಟ್ಟೆಯಲ್ಲಿ ಏನಾಗಿದೆ ಎಂದು ಗೊತ್ತಾಗಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿತ್ತು ಎಂದು ಅಕ್ಷಯ ಅವರ ಪಾಲಕರು ಆರೋಪಿಸಿದ್ದಾರೆ.ಇದೊಂದು ಅಪರೂಪದ ದುರಂತವಾಗಿದ್ದು, ವಿಶ್ವದಲ್ಲಿ ಇದುವರೆಗೆ ನಾಲ್ವರು ಮಾತ್ರ ಇಂತಹ ಘಟನೆಗಳಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿಧಾನಪರಿಷತ್ ಶಾಸಕ ಗಣಪತಿ ಉಳ್ವೇಕರ ವೈದ್ಯರ ಹೇಳಿಕೆಯನ್ನು ಉಲ್ಲೇಖಿಸಿ ತಿಳಿಸಿದ್ದಾರೆ.
ಶಾಸಕ ಸತೀಶ ಸೈಲ್, ವಿಧಾನಪರಿಷತ್ ಶಾಸಕ ಗಣಪತಿ ಉಳ್ವೇಕರ ಜಿಲ್ಲಾಸ್ಪತ್ರೆಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಪ್ರಾಥಮಿಕ ತನಿಖೆಯಲ್ಲಿ ವೈದ್ಯರ ನಿರ್ಲಕ್ಷ್ಯ ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ ಇಂತಹ ಘಟನೆಗಳು ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯ ಎತ್ತಿ ತೋರಿಸುತ್ತಿವೆ.ವೈದ್ಯರ ನಿರ್ಲಕ್ಷ್ಯ: ಆರೋಪ
ಜಿಲ್ಲಾಸ್ಪತ್ರೆಯಲ್ಲಿ ಮೀನುಗಾರ ಯುವಕ ಮೃತಪಟ್ಟ ಸುದ್ದಿ ವ್ಯಾಪಿಸಿ 300ಕ್ಕೂ ಹೆಚ್ಚು ಜನರು, ಮೀನುಗಾರರು ಆಸ್ಪತ್ರೆ ಎದುರು ಆಗಮಿಸಿ ವೈದ್ಯರ ನಿರ್ಲಕ್ಷ್ಯದಿಂದ ಯುವಕ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಪ್ರತಿಭಟಿಸಿದರು.ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಪ್ರತಿಭಟನಾಕಾರರು ವೈದ್ಯರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಂಡರು.