ಸಾರಾಂಶ
ಈತ ಮೆಜೆಸ್ಟಿಕ್‌ನಿಂದ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ನೆಲಮಂಗಲ: ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸುವಾಗ ಯುವ ಪ್ರಯಾಣಿಕನೋರ್ವ ಕುಳಿತಲ್ಲೇ ಹೃದಯಾಘಾತದಿಂದ ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ. ಗುಬ್ಬಿಯ ಕೆ.ಜಿ.ಟೆಂಪಲ್ ನಿವಾಸಿ ಕಿರಣ್( 25) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಈತ ಮೆಜೆಸ್ಟಿಕ್‌ನಿಂದ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎನ್ನಲಾಗಿದೆ. ನೆಲಮಂಗಲ ಬಸ್ ನಿಲ್ದಾಣಕ್ಕೆ ತಲುಪಿದ ಬಿಎಂಟಿಸಿ ಬಸ್‌ನಿಂದ ಪ್ರಯಾಣಿಕರೆಲ್ಲರೂ ಕೆಳಗಿಳಿದರೂ ಯುವಕ ಕಿರಣ್ ಮಾತ್ರ ಕೆಳಗಿಳಿದಿಲ್ಲದ ಕಾರಣ ಬಸ್ ನಿರ್ವಾಹಕ ಆತನನ್ನು ಏಳಿಸಲು ಪ್ರಯತ್ನಿಸಲು ಹೋದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಬಸ್ ಚಾಲಕ ಬಸ್ಸನ್ನೇ ನೆಲಮಂಗಲ ತಾಲೂಕು ಆಸ್ಪತ್ರೆ ಸಮೀಪಕ್ಕೆ ಕೊಂಡೊಯ್ದು ಆಸ್ಪತ್ರೆ ವೈದ್ಯರ ಬಳಿ ಪರೀಕ್ಷಿಸಲಾಗಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಖಚಿತ ಪಡಿಸಿದ್ದಾರೆ. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.