ಸಾರಾಂಶ
ಯುವಕರ ಗುಂಪು ನಡೆಸಿದ ಹಲ್ಲೆಯಿಂದ ಕೋಮಾ ಸ್ಥಿತಿ ತಲುಪಿದ್ದ ಸುಮಂತ್ 13 ದಿನಗಳ ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಯುವಕರ ಗುಂಪೊಂದು ಇಟ್ಟಿಗೆಯಿಂದ ನಡೆಸಿದ ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಮದ್ದೂರು ತಾಲೂಕಿನ ಮುಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ.ಮುಟ್ಟನಹಳ್ಳಿಯಯ ಸುಮಂತ್ ಮೃತ ಯುವಕ. ಅದೇ ಗ್ರಾಮದ ಅಂಬರೀಶ್, ರಜನಿಕಾಂತ್ ಹಾಗೂ ಲೋಕೇಶ್ ಹಲ್ಲೆ ನಡೆಸಿದ ಆರೋಪಿಗಳು ಎಂದು ತಿಳಿದುಬಂದಿದೆ. ಯುವಕರ ಗುಂಪು ನಡೆಸಿದ ಹಲ್ಲೆಯಿಂದ ಕೋಮಾ ಸ್ಥಿತಿ ತಲುಪಿದ್ದ ಸುಮಂತ್ 13 ದಿನಗಳ ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.ಗ್ರಾಮದ ಅಂಬರೀಶ್ ಹೆಂಡತಿ ಜೊತೆ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಸುಮಂತ್ ಗಲಾಟೆ ಮಾಡಿಕೊಂಡಿದ್ದನು. ಇದಾದ ಬಳಿಕ ಅಂಬರೀಶ್ ಮತ್ತು ಸ್ನೇಹಿತರಾದ ರಜನಿಕಾಂತ್, ಲೋಕೇಶ್ ಅವರು ತಮ್ಮ ಬಳಿಗೆ ಸುಮಂತ್‌ನನ್ನು ಕರೆಸಿಕೊಂಡಿದ್ದರು. ಮತ್ತೆ ಹಣಕಾಸು ವಿಚಾರವಾಗಿ ಯುವಕರ ನಡುವೆ ಮೊದಲಿಗೆ ಮಾತಿನ ಚಕಮಕಿ ನಡೆದಿದೆ. ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮೂವರು ಸೇರಿ ಇಟ್ಟಿಗೆಯಿಂದ ಸುಮಂತ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿರುವ ದೃಶ್ಯಗಳು ಸೀಸಿ ಟೀವಿಯಲ್ಲಿ ದಾಖಲಾಗಿವೆ.ಗಲಾಟೆಯಲ್ಲಿ ತೀವ್ರವಾಗಿ ಗಾಯಗೊಂಡ ಸುಮಂತ್ ಕೋಮಾ ಸ್ಥಿತಿ ತಲುಪಿದ್ದನು. ಈತನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸುಮಂತ್ ಮಂಗಳವಾರ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾನೆ. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.