ಕುಡಿತದ ಮತ್ತಿನಲ್ಲಿ ಯುವಕ ದಾಂದಲೆ: ಸಂಕೋಲೆ ಹಾಕಿ ಎಳೆದೊಯ್ಯುವಾಗ ಕುತ್ತಿಗೆಗೆ ಬಿಗಿದು ಸಾವು

| Published : May 11 2024, 12:01 AM IST

ಕುಡಿತದ ಮತ್ತಿನಲ್ಲಿ ಯುವಕ ದಾಂದಲೆ: ಸಂಕೋಲೆ ಹಾಕಿ ಎಳೆದೊಯ್ಯುವಾಗ ಕುತ್ತಿಗೆಗೆ ಬಿಗಿದು ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಸಂಪ್ಯ ಪೊಲೀಸರು ಚೇತನ್ ತಾಯಿ ಉಮಾವತಿ ಮತ್ತು ನೆರೆಯ ನಿವಾಸಿ ಯೂಸುಫ್ ಅವರನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಕುಡಿತದ ಮತ್ತಿನಲ್ಲಿ ನೆರೆಯ ಮನೆಗೆ ತೆರಳಿ ದಾಂದಲೆ ಎಬ್ಬಿಸುತ್ತಿದ್ದ ಯುವಕನನ್ನು ಸಂಕೋಲೆಯಿಂದ ಬಿಗಿದು ಮನೆಗೆ ಎಳೆದುಕೊಂಡು ಹೋಗುತ್ತಿದ್ದ ವೇಳೆ ಸಂಕೋಲೆ ಕುತ್ತಿಗೆ ಭಾಗಕ್ಕೆ ಬಿಗಿದು ಮೃತಪಟ್ಟ ಘಟನೆ ಬೆಟ್ಟಂಪಾಡಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಈ ಬಗ್ಗೆ ಸುಮೋಟೊ ಕೇಸು ದಾಖಲಿಸಿಕೊಡಿರುವ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

ಬೆಟ್ಟಂಪಾಡಿ ಗ್ರಾಮದ ಬರೆ ನಿವಾಸಿ ದಿ. ಕೊರಗಪ್ಪ ಶೆಟ್ಟಿ ಎಂಬವರ ಪುತ್ರ ಚೇತನ್ ಶೆಟ್ಟಿ (೩೫) ಮೃತಪಟ್ಟ ಯುವಕ. ಚೇತನ್ ಶೆಟ್ಟಿ ಅವರು ವಿಪರೀತ ಕುಡಿತದ ಚಟ ಹೊಂದಿದ್ದು, ಗುರುವಾರ ರಾತ್ರಿ ವಿಪರೀತ ಮದ್ಯ ಸೇವಿಸಿ ಮನೆಗೆ ಬಂದಿದ್ದ. ತಡರಾತ್ರಿ ಮನೆಯಲ್ಲಿ ಗಲಾಟೆ ಮಾಡಿ ತಾಯಿಯೊಂದಿಗೆ ಜಗಳವಾಡಿ ಬಳಿಕ ನೆರೆಯ ನಿವಾಸಿ ಯೂಸುಫ್ ಎಂಬವರ ಮನೆಗೆ ಹೋಗಿ ಬಾಗಿಲು ಬಡಿಯುತ್ತಾ ದಾಂದಲೆ ಎಬ್ಬಿಸಿದ್ದ. ಈ ವಿಚಾರವನ್ನು ಯೂಸುಫ್ ಅವರು ಉಮಾವತಿ ಅವರಿಗೆ ಕರೆ ಮಾಡಿ ತಿಳಿಸಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ತಾಯಿ ಉಮಾವತಿ ಅವರು ಚೇತನ್‌ನನ್ನು ಮನೆಗೆ ಕರೆದುಕೊಂಡು ಬರಲು ನಾಯಿಯನ್ನು ಕಟ್ಟಿಹಾಕುವ ಸಂಕೋಲೆ ಹಿಡಿದುಕೊಂಡು ಯೂಸುಫ್ ಅವರ ಮನೆಗೆ ಹೋಗಿದ್ದರು. ಅಲ್ಲಿದ್ದ ಚೇತನ್‌ನನ್ನು ಯೂಸುಫ್ ಅವರ ಸಹಕಾರದೊಂದಿಗೆ ಸಂಕೋಲೆಯಲ್ಲಿ ಕಟ್ಟಿಹಾಕಿ ಎಳೆದು ಕೊಂಡು ಮನೆಗೆ ಬರುತ್ತಿದ್ದ ವೇಳೆ ಸಂಕೋಲೆ ಕುತ್ತಿಗೆಗೆ ಬಿಗಿದ ಪರಿಣಾಮವಾಗಿ ಮನೆಗೆ ತಲುಪಿದ ವೇಳೆ ಚೇತನ್ ತೀರಾ ಅಸ್ವಸ್ಥಗೊಂಡಿದ್ದರು. ಬಳಿಕ ಆತನನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾದರೂ ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿದ್ದಎಂದು ತಿಳಿದು ಬಂದಿದೆ.

ಆರಂಭದಲ್ಲಿ ಆತ್ಮಹತ್ಯೆ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಸಂಪ್ಯ ಪೊಲೀಸರು ಪುತ್ತೂರು ಆಸ್ಪತ್ರೆಗೆ ತೆರಳಿ ಮೃತದೇಹ ಪರಿಶೀಲನೆ ನಡೆಸಿದ ವೇಳೆ ಮೃತದೇಹದ ಕುತ್ತಿಗೆಯ ಭಾಗದಲ್ಲಿ ಸಂಕೋಲೆಯಿಂದ ಬಿಗಿದ ಗುರುತುಗಳು ಕಂಡು ಬಂದಿತ್ತು. ಅನುಮಾನ ವ್ಯಕ್ತವಾದ ಹಿನ್ನಲೆಯಲ್ಲಿ ಪೊಲೀಸರು ಮೃತನ ತಾಯಿಯನ್ನು ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.

ಜಿಲ್ಲಾ ಎಸ್ಪಿ ರಿಷ್ಯಂತ್ ಸಿ.ಬಿ. ಘಟನೆ ನಡೆದ ಸ್ಥಳ ಮತ್ತು ಮೃತದೇಹ ಇಟ್ಟಿದ್ದ ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವ ಮಹಜರು ನಡೆಸಲು ಮಂಗಳೂರಿನ ದೇರಳಕಟ್ಟೆಯಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕೊಂಡೆಯ್ಯಲಾಗಿದೆ. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಸಂಪ್ಯ ಪೊಲೀಸರು ಚೇತನ್ ತಾಯಿ ಉಮಾವತಿ ಮತ್ತು ನೆರೆಯ ನಿವಾಸಿ ಯೂಸುಫ್ ಅವರನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.