ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿ ಫೋಟೋಗಳನ್ನು ಕ್ಲಿಕ್ ಮಾಡುತ್ತಿದ್ದ ಕುಕನೂರು ಪಟ್ಟಣದ ಕುಮಾರ ಕೊಟ್ರಪ್ಪ ಹಾಳಕೇರಿ ಹೈನುಗಾರಿಕೆಯಲ್ಲೂ ಕ್ಲಿಕ್‌ ಆಗಿದ್ದಾರೆ. ಪಟ್ಟಣದಲ್ಲಿ ತಮ್ಮ ಸ್ವಂತ ಜಮೀನಿನಲ್ಲಿ ಹೈನುಗಾರಿಕೆ ಮಾಡುತ್ತಿರುವ ಯುವಕ ಕುಮಾರ ಹಾಳಕೇರಿ ಸದ್ಯ ಮಾದರಿ ಆಗಿದ್ದಾರೆ.

ಅಮರೇಶ್ವರಸ್ವಾಮಿ ಕಂದಗಲ್ಲಮಠ

ಕುಕನೂರು: ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿ ಫೋಟೋಗಳನ್ನು ಕ್ಲಿಕ್ ಮಾಡುತ್ತಿದ್ದ ಪಟ್ಟಣದ ಕುಮಾರ ಕೊಟ್ರಪ್ಪ ಹಾಳಕೇರಿ ಹೈನುಗಾರಿಕೆಯಲ್ಲೂ ಕ್ಲಿಕ್‌ ಆಗಿದ್ದಾರೆ.

ಪಟ್ಟಣದಲ್ಲಿ ತಮ್ಮ ಸ್ವಂತ ಜಮೀನಿನಲ್ಲಿ ಇವರು ಹೈನುಗಾರಿಕೆ ಮಾಡುತ್ತಿದ್ದಾರೆ. ಅಷ್ಟೊಂದು ಆಸಕ್ತಿ ಇಲ್ಲದ ಕುಮಾರ ಕೊರೋನಾ ವೇಳೆಯಲ್ಲಿ ಜಮೀನಿಗೆ ಬರತೊಡಗಿದರು. ಮೊದಲು ಜಮೀನಿನಲ್ಲಿದ್ದ ಶೆಡ್‌ನಲ್ಲಿ ಕೋಳಿಗಳನ್ನು ಸಾಕಲು ಆರಂಭಿಸಿದರು. ಹವ್ಯಾಸವಾಗಿ ನಾನಾ ಪಕ್ಷಿಗಳನ್ನು ಸಹ ಸಾಕಿದರು. ಇದು ಮುಂದುವರಿಯುತ್ತಾ ಉತ್ತಮ ಜಾತಿಯ ನಾಯಿಗಳನ್ನು ಸಾಕಿ, ಒಳ್ಳೆಯ ತಳಿಯ ಮರಿಗಳನ್ನು ಉತ್ತಮ ಬೆಲೆಗೆ ಮಾರಾಟ ಸಹ ಮಾಡಿದರು.

ಹೀಗೆ ಫೋಟೋಗ್ರಾಫಿ ವೃತ್ತಿಯಿಂದ ಕುರಿ ಹಾಗು ಸಾಕುಪ್ರಾಣಿಗಳ ಸಾಕಾಣಿಕೆಗೆ ಬದಲಾಯಿಸಿದರು. ಬಳಿಕ ಹೈನುಗಾರಿಕೆ ಆರಂಭಿಸಿದರು. ಒಂದು ಆಕಳಿಂದ ಆರಂಭವಾದ ಅವರ ಹೈನುಗಾರಿಕೆ, ಸದ್ಯ 8 ಆಕಳು, 3 ಎಮ್ಮೆ, ಐದಾರು ಕರುಗಳ ವರೆಗೆ ಬೆಳೆದಿದೆ. ಜರ್ಸಿ, ಸಾಯಿವಾಲಾ, ಗೀರ್, ಎಚ್.ಎಫ್. ಜಾತಿಯ ಆಕಳು, ಮುರ್ರಾ ತಳಿಯ ಎಮ್ಮೆ ಸಾಕಿದ್ದಾರೆ. ಅವರ ಜಮೀನಿಗೆ ಜನ ಆಗಮಿಸಿ ಲೀಟರ್ ಹಾಲಿಗೆ ₹60 ನೀಡಿ ಖರೀದಿಸುತ್ತಾರೆ. ತಿಂಗಳಿಗೆ ₹1.20 ಲಕ್ಷ ಆದಾಯ ಬರುತ್ತದೆ.

ಬಿಡಾಡಿ ದನಗಳ ಆರೈಕೆ: ರಸ್ತೆ ದಾಟುವಾಗ, ಇಲ್ಲವೇ ರಸ್ತೆ ಮಧ್ಯದಲ್ಲಿ ವಾಹನಗಳಿಂದ ಬಿಡಾಡಿ ದನಗಳಿಗೆ ಗಾಯಗಳಾದಾಗ, ಇಲ್ಲವೇ ಬಿಡಾಡಿ ದನಗಳು ಹುಷಾರು ಇಲ್ಲದೇ ಇರುವಾಗ, ಕುಮಾರ ಹಾಳಕೇರಿ ಗಮನಕ್ಕೆ ಬಂದರೆ ತಕ್ಷಣ ತಮ್ಮ ಸ್ನೇಹಿತರನ್ನು ಕರೆದುಕೊಂಡು ಆ ಸ್ಥಳಕ್ಕೆ ಆಗಮಿಸಿ, ಸ್ವತಃ ತಾವೇ ಚಿಕಿತ್ಸೆ ನೀಡುತ್ತಾರೆ.

ಚಿಕಿತ್ಸೆ ಮಾಡುತ್ತೇವೆ: ಫೋಟೋಗ್ರಾಫಿ ನನ್ನ ವೃತ್ತಿ ಆಗಿತ್ತು. ಕೊರೋನಾ ಸಮಯ ನನ್ನನ್ನು ಹೈನುಗಾರಿಕೆಯತ್ತ ವಾಲುವಂತೆ ಮಾಡಿತು. ಹೈನುಗಾರಿಕೆಯಲ್ಲಿ ದುಡಿದರೆ ಲಾಭ ಇದೆ. ಬಿಡಾಡಿ ದನಗಳ ಗಾಯ ಹಾಗೂ ಅವುಗಳಿಗೆ ತೊಂದರೆ ಆದರೆ ಸ್ಪಂದನೆ ಮಾಡಬೇಕು ಎಂಬ ಆಸೆಯಿಂದ ಸ್ನೇಹಿತರ ಜತೆ ತೆರಳಿ ಚಿಕಿತ್ಸೆ ಮಾಡುತ್ತೇವೆ ಎಂದು ಕುಕನೂರಿನ ಕುಮಾರ ಹಾಳಕೇರಿ ಹೇಳಿದರು.