ಕಲಬೆರಕೆ ಆಹಾರದಿಂದ ಅನಾರೋಗ್ಯದತ್ತ ಯುವಜನತೆ

| Published : Jan 25 2024, 02:00 AM IST

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಪೌಷ್ಟಿಕಾಂಶವಿಲ್ಲದ ಕಲಬೆರಕೆ ಆಹಾರ ಪದಾರ್ಥಗಳ ಬಳಕೆಯಿಂದ ನಮ್ಮ ಇಂದಿನ ಯುವ ಪೀಳಿಗೆ ಹೆಚ್ಚು ಅನಾರೋಗ್ಯಕ್ಕೆ ತುತ್ತಾಗುತ್ತಿದೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹ.ರಾ. ಮಹೇಶ್ ಬೇಸರ ವ್ಯಕ್ತಪಡಿಸಿದರು. ಹರದನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರ ೬೮ನೇ ಹುಟ್ಟುಹಬ್ಬ ಹಾಗೂ ಜನ ಕಲ್ಯಾಣ ದಿವಸ್ ಅಂಗವಾಗಿ ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಉಚಿತ ಕಣ್ಣಿನ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹಿಂದಿನ ಪೀಳಿಗೆಯ ಜನರು ಕಲಬೆರಕೆ ಇಲ್ಲದ ಉತ್ತಮ ಆಹಾರ ಸೇವಿಸಿ ಗಟ್ಟಿಮುಟ್ಟಾಗಿ ಇರುತ್ತಿದ್ದರು.

ಹ.ರಾ. ಮಹೇಶ್ ಬೇಸರ । ಬಿಎಸ್ ಪಿ ಸಂಸ್ಥಾಪಕಿ ಮಾಯಾವತಿ ಜನ್ಮದಿನದ ನಿಮಿತ್ತ ಉಚಿತ ಆರೋಗ್ಯ ಶಿಬಿರ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಇತ್ತೀಚಿನ ದಿನಗಳಲ್ಲಿ ಪೌಷ್ಟಿಕಾಂಶವಿಲ್ಲದ ಕಲಬೆರಕೆ ಆಹಾರ ಪದಾರ್ಥಗಳ ಬಳಕೆಯಿಂದ ನಮ್ಮ ಇಂದಿನ ಯುವ ಪೀಳಿಗೆ ಹೆಚ್ಚು ಅನಾರೋಗ್ಯಕ್ಕೆ ತುತ್ತಾಗುತ್ತಿದೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹ.ರಾ. ಮಹೇಶ್ ಬೇಸರ ವ್ಯಕ್ತಪಡಿಸಿದರು.

ಹರದನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರ ೬೮ನೇ ಹುಟ್ಟುಹಬ್ಬ ಹಾಗೂ ಜನ ಕಲ್ಯಾಣ ದಿವಸ್ ಅಂಗವಾಗಿ ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಉಚಿತ ಕಣ್ಣಿನ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹಿಂದಿನ ಪೀಳಿಗೆಯ ಜನರು ಕಲಬೆರಕೆ ಇಲ್ಲದ ಉತ್ತಮ ಆಹಾರ ಸೇವಿಸಿ ಗಟ್ಟಿಮುಟ್ಟಾಗಿ ಇರುತ್ತಿದ್ದರು. ಆದರೆ ಇಂದಿನ ಪೀಳಿಗೆ ಸಂಪೂರ್ಣ ರಾಸಾಯನಿಕ ಗೊಬ್ಬರದಿಂದ ಬೆಳೆಯಲಾದ ಕಲಬೆರಕೆ ಆಹಾರದಿಂದ ಸೇವಿಸುವುದರಿಂದ ಅವರ ಆರೋಗ್ಯ ಹಾಳಾಗುತ್ತಿದೆ ಎಂದರು.

ಕೆಮಿಕಲ್ ಮುಕ್ತ ಬೆಳೆ ಬೆಳೆಯುವಂತೆ ಹಾಗೂ ಕೊಟ್ಟಿಗೆ ಗೊಬ್ಬರ ಬಳಸುವಂತೆ ನಮ್ಮ ಸರ್ಕಾರ ಕ್ರಮ ಕೈಗೊಳ್ಳಬೇಕು. ಇದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದರು. ಸಾರ್ವಜನಿಕರು ಬೀಡಿ, ಸಿಗರೇಟು, ಕುಡಿತಕ್ಕೆ ಬಲಿಯಾಗಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ದುಶ್ಚಟಗಳಿಂದ ದೂರ ಇರಬೇಕು ಎಂದ ಅವರು, ಸಾರ್ವಜನಿಕರ ಅನುಕೂಲಕ್ಕಾಗಿ ಬಹುಜನ ಸಮಾಜ ಪಕ್ಷದ ವತಿಯಿಂದ ಕಣ್ಣಿನ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಎನ್. ನಾಗಯ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆರೋಗ್ಯ ಪ್ರತಿಯೊಬ್ಬರಿಗೂ ಬಹಳ ಮುಖ್ಯವಾಗಿದೆ. ಆದ್ದರಿಂದ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದರೊಂದಿಗೆ ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ತಮ್ಮ ಆರೋಗ್ಯವನ್ನು ಮತ್ತಷ್ಟು ಉತ್ತಮವಾಗಿರಿಸಿಕೊಳ್ಳಿ ಎಂದರು.

ಹರದನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಗುರುರಾಜ್.ಎಸ್. ಮಾತನಾಡಿ, ಇಂತಹ ಉಚಿತ ಶಿಬಿರಗಳಿಂದ ಸಾಕಷ್ಟು ಬಡಜನರಿಗೆ ಅನುಕೂಲವಾಗಲಿದೆ. ಇಂತಹ ಕಾರ್ಯಕ್ರಮಗಳನ್ನು ಪಕ್ಷಗಳು, ಸಂಘ, ಸಂಸ್ಥೆಗಳು ಹೆಚ್ಚೆಚ್ಚು ಆಯೋಜಿಸಿ ಬಡ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದರು.

ಶಿಬಿರದಲ್ಲಿ ೧೦೦ಕ್ಕೂ ಹೆಚ್ಚು ಜನರಿಗೆ ತಪಾಸಣೆ ನಡೆಸಲಾಯಿತು. ಇದರಲ್ಲಿ ೩೩ ಜನರನ್ನು ಅರವಿಂದ ಕಣ್ಣಾಸ್ಪತ್ರೆಗೆ ಶಸ್ತ್ರ ಚಿಕಿತ್ಸೆಗೆ ಕಳುಹಿಸಿಕೊಡಲಾಗುವುದು ಎಂದರು. ಬಹುಜನ ಸಮಾಜ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ಪ್ರಧಾನ ಕಾರ್ಯದರ್ಶಿ ಬ.ಮ. ಕೃಷ್ಣಮೂರ್ತಿ, ಟೌನ್ ಅಧ್ಯಕ್ಷ ರಂಗಸ್ವಾಮಿ, ಲಿಂಗಾಯತ ಸಮಾಜದ ಮುಖಂಡ ಪರಮೇಶ್ವರಪ್ಪ, ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆ ಡಾ. ರೋಹಲ್ ಚಾಕೋ, ಕ್ಯಾಂಪ್ ಪಿಆರ್‌ಓ ವಿಜಯ್, ಬಾಲರಾಜು, ಮಂಜು, ಸಿದ್ದರಾಜು, ಯೋಗೇಶ್, ಅಭಿ, ಕೃಷ್ಣಮೂರ್ತಿ, ಚಂದ್ರಕಾಂತ್, ಶಿವಶಂಕರ್, ದೊಡ್ಡರಾಯಪೇಟೆ ಶಿವು ಮತ್ತಿತರರು ಇದ್ದರು.