ಮೂಡುಬಿದಿರೆ: ವಿಕಸಿತ ಭಾರತ ನಿರ್ಮಾಣದ ಮಹಾಸಂಕಲ್ಪ ಸಾಕಾರಗೊಳಿಸಲು ಯುವಜನತೆ ಕೇವಲ ಫಲಾನುಭವಿಗಳಾದರೆ ಸಾಲದು, ರಾಷ್ಟ್ರದ ಭವಿಷ್ಯ ರೂಪಿಸುವ ಶಿಲ್ಪಿಗಳಾಗಬೇಕು ಎಂದು ನವದೆಹಲಿಯ ಸಂಸದೆ ಬಾನ್ಸುರಿ ಸ್ವರಾಜ್ ನುಡಿದರು.

ಡಾ. ವಿ.ಎಸ್. ಆಚಾರ‍್ಯ ಸಭಾಂಗಣದಲ್ಲಿ ನಡೆದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟಮ್ ಸ್ಪೀಕರ್ಸ್‌ ಕ್ಲಬ್‌ನ 2026-27 ಸಾಲಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

‘ವಂದೇ ಮಾತರಂ’ ಘೋಷಣೆಯೊಂದಿಗೆ ಭಾಷಣ ಪ್ರಾರಂಭಿಸಿದ ಅವರು, ವಂದೇ ಮಾತರಂ ಕೇವಲ ದೇಶಭಕ್ತಿಯ ಘೋಷಣೆಯಲ್ಲ. ಅದು ಭಾರತದ ಆತ್ಮಸ್ವರವಾಗಿ ಪ್ರತಿಧ್ವನಿಸಬೇಕು. ಸ್ವಾತಂತ್ರ‍್ಯ ಸಮರದಲ್ಲಿ ಯುವಶಕ್ತಿಗೆ ಸ್ಪೂರ್ತಿ ತುಂಬಿದ ಈ ಘೋಷಣೆ ಇಂದಿನ ವಿಕಸಿತ ಭಾರತದ ಪಥದಲ್ಲಿ ಪ್ರೇರಣೆಯ ಮಾರ್ಗಸೂಚಿಯಾಗಬೇಕು ಎಂದು ಅಭಿಪ್ರಾಯಪಟ್ಟರು. 2047ರೊಳಗೆ ವಿಕಸಿತ ಭಾರತ ನಿರ್ಮಾಣವು ಕೇವಲ ಕನಸಲ್ಲ, ಅದು ಸಂಕಲ್ಪ. ಇಂದಿನ ಪೀಳಿಗೆ ಅನುಭವಿಸುತ್ತಿರುವ ಸ್ವಾತಂತ್ರ‍್ಯ ಹಾಗೂ ಅವಕಾಶಗಳು ಹಿಂದಿನ ತಲೆಮಾರಿನ ತ್ಯಾಗಗಳ ಫಲ. ಅದಕ್ಕೆ ಪ್ರತಿಯಾಗಿ ಯುವಕರು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹೇಳಿದರು.

ವಿದ್ಯಾಗಿರಿ, ಮಿಜಾರಿನ ವಿಶಾಲ ಹಸಿರುಗಾವಲು, ಸಮಗ್ರ ಮೂಲಸೌಕರ್ಯ ಹಾಗೂ ಶಿಸ್ತುಬದ್ಧ ಶೈಕ್ಷಣಿಕ ವಾತಾವರಣಕ್ಕೆ ಮನಸೋತರು. ಆಳ್ವಾಸ್‌ನ ಶೋಭಾವನ ಕಾಟೇಜ್‌ನಲ್ಲಿ ಶುಕ್ರವಾರವೇ ಬಂದು ವಾಸ್ತವ್ಯವಿದ್ದ ಅವರು, ಅಲ್ಲಿ ಸಂಜೆ ಹಾಗೂ ಮುಂಜಾನೆ ಶೋಭಾವನದ ಗೆಸ್ಟ್‌ ಹೌಸ್‌ ನಲ್ಲಿ ನೀಡಲಾದ ಆತಿಥ್ಯವನ್ನು ಮೆಚ್ಚಿಕೊಂಡರು. ಅನ್ನ–ಸಾಂಬಾರ್, ಜೈನ್ ಉಪ್ಪಿನಕಾಯಿ, ಇಡ್ಲಿ, ಹೊಳಿಗೆ, ತೆಂಗಿನ ಚಟ್ನಿ, ನೀರ್ ದೋಸೆ, ಶಿರಾ, ಅವಲಕ್ಕಿ–ಕಡಲೆ, ಶಾವಿಗೆ ಪಾಯಸ, ವಡೆ ಮೊದಲಾದ ಸ್ಥಳೀಯ ಕರಾವಳಿಯ ಖಾದ್ಯಗಳನ್ನು ಆಸ್ವಾದಿಸಿದರು.

ಬಾನ್ಸುರಿ ಸ್ವರಾಜ್ ಅವರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್‌ನ ಅಧ್ಯಕ್ಷೆ ಡಾ. ದೀಪಾ ಕೊಠಾರಿ, ಆಳ್ವಾ ಫಾರ್ಮಸಿ ಆಡಳಿತಾಧಿಕಾರಿ ಡಾ. ಗ್ರೀಷ್ಮಾ ವಿವೇಕ್ ಆಳ್ವ, ಬಾನ್ಸುರಿ ಸ್ವರಾಜ್ ಸಂಬಂದಿ ನೀತು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ‍್ಯಕ್ರಮವನ್ನು ರೋಸ್ಟಮ್ ಸ್ಪೀಕರ್ಸ್‌ ಕ್ಲಬ್‌ನ ಸದಸ್ಯೆ ನಿಯತಿ ಅಮೀನ್ ನಿರೂಪಿಸಿ, ಶ್ರೀಶ್ ಕೊಟೇಗಾರ್ ವಂದಿಸಿದರು.