ಯುವ ಜನರು ಮುಂದೆ ಬಂದು ದೇಶ ಕಟ್ಟಿ

| Published : Jan 17 2025, 12:45 AM IST

ಸಾರಾಂಶ

ವಿದ್ಯಾರ್ಥಿಗಳು ತಾವು ಎಷ್ಟೇ ಎತ್ತರಕ್ಕೆ ಬೆಳೆದು, ಉನ್ನತ ಸ್ಥಾನ ಪಡೆದರೂ ಕೂಡ ತಮ್ಮನ್ನು ರೂಪಿಸಿದ ಗುರುಗಳನ್ನು, ವಿದ್ಯಾ ಸಂಸ್ಥೆಗಳನ್ನು ಹಾಗೂ ತಂದೆ ತಾಯಿಗಳಿಗೆ ಋಣಿಯಾಗಿ ಬಾಳಬೇಕು ಎಂದು ತುಮಕೂರು ರಾಮಕೃಷ್ಣ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಶಿರಾ ವಿದ್ಯಾರ್ಥಿಗಳು ತಾವು ಎಷ್ಟೇ ಎತ್ತರಕ್ಕೆ ಬೆಳೆದು, ಉನ್ನತ ಸ್ಥಾನ ಪಡೆದರೂ ಕೂಡ ತಮ್ಮನ್ನು ರೂಪಿಸಿದ ಗುರುಗಳನ್ನು, ವಿದ್ಯಾ ಸಂಸ್ಥೆಗಳನ್ನು ಹಾಗೂ ತಂದೆ ತಾಯಿಗಳಿಗೆ ಋಣಿಯಾಗಿ ಬಾಳಬೇಕು ಎಂದು ತುಮಕೂರು ರಾಮಕೃಷ್ಣ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ನುಡಿದರು. ಅವರು ನಗರದ ಪ್ರೆಸಿಡೆನ್ಸಿ ಕಾಲೇಜಿನ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿ ಪಡೆದ 499 ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡಿದರು. ಪ್ರತಿ ವರ್ಷದಂತೆ ಪ್ರೆಸಿಡೆನ್ಸಿ ಕಾಲೇಜಿನ ವಿದ್ಯಾರ್ಥಿಗಳು ಈ ಬಾರಿಯೂ ಜಿಲ್ಲೆಯಲ್ಲಿಯೇ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶದ ಜೊತೆಗೆ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ, ಐಐಟಿ, ಜೆಇಇ, ಕೃಷಿ ವಿಜ್ಞಾನ, ಪಶುವೈದ್ಯಕೀಯ ಮತ್ತು ಎಂಜಿನಿಯರಿಂಗ ವ್ಯಾಸಂಗಕ್ಕೆ ಪ್ರವೇಶ ಪಡೆದಿರುವುದು ಸಂತಸದ ವಿಷಯ ಹಾಗೂ ಮುಂದಿನ ದಿನಗಳಲ್ಲಿ ಈ ಕಾಲೇಜು ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದು ಮಾದರಿ ಸಂಸ್ಥೆಯಾಗಲೆಂದು ಆಶಿಸಿದರು.ವಿಧಾನ ಪರಿಷತ್‌ ಸದಸ್ಯ ಹಾಗೂ ಪ್ರೆಸಿಡೆನ್ಸಿ ಸಂಸ್ಥೆಯ ಅಧ್ಯಕ್ಷರಾದ ಚಿದಾನಂದ್ ಎಂ. ಗೌಡ ಅವರು ಮಾತನಾಡಿ ಇಂದಿನ ವಿದ್ಯಾರ್ಥಿಗಳು ಕೇವಲ ವೈದ್ಯಕೀಯ ಹಾಗೂ ಎಂಜಿನೀಯರಿಂಗ್‌ ನಂತಹ ವೃತ್ತಿಪರ ಕೋರ್ಸುಗಳಿಗೆ ಜೋತು ಬೀಳದೆ ಆಡಳಿತ ಸೇವೆಗಳಾದ ಐಎಎಸ್, ಐಪಿಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸು ಮಾಡಿ ದೇಶದ ಉನ್ನತ ಸ್ಥಾನಗಳನ್ನು ಅಲಂಕರಿಸುವಂತಗಾಬೇಕು. ಜೊತೆಗೆ ರಾಜಕೀಯ ಕೆಟ್ಟದ್ದೆಂದು ಪರಿಭಾವಿಸದೆ ನಮ್ಮ ಪ್ರಜ್ಞಾವಂತ ಯುವ ಪೀಳಿಗೆ ರಾಜಕೀಯ ರಂಗವನ್ನು ಪ್ರವೇಶಿಸಿ ಸದೃಢ ಭಾರತವನ್ನು ಕಟ್ಟಬೇಕು ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಸುಬ್ರಹ್ಮಣ್ಯ ಡಿ.ಕೆ., ಮತ್ತು ಶೈಕ್ಷಣಿಕ ಸಲಹೆಗಾರರು, ಆಡಳಿತಾಧಿಕಾರಿಗಳು, ಉಪನ್ಯಾಸಕ ವರ್ಗದವರು, ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.