ಸಾರಾಂಶ
ಮರಿಯಮ್ಮನಹಳ್ಳಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶನಿವಾರ ಹೋಳಿ ಹಬ್ಬವನ್ನು ಸಡಗರದಿಂದ ಆಚರಿಸಿದರು.
ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ
ಮರಿಯಮ್ಮನಹಳ್ಳಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶನಿವಾರ ಹೋಳಿ ಹಬ್ಬವನ್ನು ಸಡಗರದಿಂದ ಆಚರಿಸಿದರು.ಶುಕ್ರವಾರ ರಾತ್ರಿ ಪಟ್ಟಣದ ವಿವಿಧ ಓಣಿಗಳಲ್ಲಿ ಕಾಮದಹನ ಮಾಡಿದ ಯುವಕರು ರಾತ್ರಿ ಕೆಲ ಹೊತ್ತು ಹಲಗೆಗಳನ್ನು ಬಡೆಯುತ್ತಾ ಕೇಕೆ ಹಾಕುತ್ತಾ, ವಿವಿಧ ವಾದ್ಯಗಳ ತಾಳಕ್ಕೆ ಕುಣಿದು ಕುಪ್ಪಳಿಸಿದರು.
ಬೆಳಗ್ಗೆಯಿಂದಲೇ ಪಟ್ಟಣದ ಓಣಿ ಓಣಿಗಳಲ್ಲಿ ಯುವಕರು, ಚಿಕ್ಕಮಕ್ಕಳು ಹಾಗೂ ಕೆಲ ಮಹಿಳೆಯರು ಒಬ್ಬರಿಗೊಬ್ಬರು ಬಣ್ಣ ಎರಚುವ ಮೂಲಕ ಹೋಳಿ ಆಟದಲ್ಲಿ ತೊಡಗಿಕೊಂಡಿದ್ದರು.ಇನ್ನು ಕೆಲ ಯುವಕರು ಕೋಳಿ ಮೊಟ್ಟೆಗಳನ್ನು ಹಾಗೂ ಟಮೋಟಾ ಹಣ್ಣುಗಳನ್ನು ತೆಲೆಯ ಮೇಲೆ ಒಡೆದು ಬಣ್ಣ ಹಾಕುತ್ತಾ, ಸ್ನೇಹಿತರ ಮೈಮೇಲೆ ಇರುವ ಬಟ್ಟೆಗಳನ್ನು ಹರಿದು ಕೇಕೆ ಹಾಕುತ್ತಾ ಹಲಗೆ ವಾದನದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು.
ಪಟ್ಟಣದಲ್ಲಿ ಶನಿವಾರ ಹೋಳಿ ಹಬ್ಬದ ಅಂಗವಾಗಿ ಕೆಲ ಅಂಗಡಿ, ಹೋಟಲ್‌ಗಳು ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿಕೊಂಡು ಹೋಳಿ ಆಟದಲ್ಲಿ ತೊಡಗಿಕೊಂಡಿದ್ದರು. ಮಧ್ಯಾಹ್ನದ ವೇಳೆಗೆ ವ್ಯಾಪಾರ ವಹಿವಾಟು ಎಂದಿನಂತೆ ನಡೆಯಿತು.ಶಾಲಾ-ಕಾಲೇಜುಗಳಲ್ಲಿ ಪರೀಕ್ಷೆಗಳು ನಡೆಯುತ್ತಿರುವುದರಿಂದ ಕೆಲ ವಿದ್ಯಾರ್ಥಿಗಳು ಹೋಳಿ ಹಬ್ಬದಲ್ಲಿ ತೊಡಗಿಕೊಳ್ಳದೇ ಪರೀಕ್ಷೆ ಬರೆಯಲು ಶಾಲಾ-ಕಾಲೇಜುಗಳಿಗೆ ತೆರಳಿದ್ದರು.
ಚಿಕ್ಕಮಕ್ಕಳು ಹೋಳಿ ಆಟದಲ್ಲಿ ತೊಡಗಿಕೊಂಡು ಸಂಭ್ರಮಿಸಿದರು. ಹೋಳಿ ಹಬ್ಬವನ್ನು ತಮ್ಮ ತಮ್ಮ ಓಣಿಗಳಲ್ಲಿ ಆಚರಿಸಿಕೊಂಡು ಕೊನೆಯಲ್ಲಿ ಎಲ್ಲಾ ಓಣಿಯ ಯುವಕರು ಪಟ್ಟಣದ ನಾರಾಯಣದೇವರಕೆರೆ ವೃತ್ತದಲ್ಲಿ ಬಂದು ಕೆಲವರು ಹೋಳಿ ಆಚರಿಸಿದರು.ಮರಿಯಮ್ಮನಹಳ್ಳಿ ಸೇರಿದಂತೆ ಹೋಬಳಿಯ ಅನೇಕ ಗ್ರಾಮಗಳಲ್ಲಿ ಸಂಭ್ರಮದ ಹೋಳಿ ಹಬ್ಬ ಆಚರಿಸಲಾಯಿತು.