ಸಿ.ಕೆ. ನಾಗರಾಜ

ಹೊಸಪೇಟೆ: ಹೋಳಿ ಹಬ್ಬ ಬಂತೆಂದರೆ ಸಾಕು, ಹಳ್ಳಿ, ನಗರ ಸೇರಿದಂತೆ ಬೀದಿಗಳಲ್ಲಿ ಸಂಭ್ರಮ. ಎಲ್ಲೆಲ್ಲೂ ಹಲಗೆ ವಾದನದ ಸದ್ದು, ಹುಡುಗರು, ಯುವಕರ ನೃತ್ಯ, ಕುಣಿದು ಕುಪ್ಪಳಿಸುವುದು ಸಾಮಾನ್ಯವಾಗಿ ಕಂಡುಬರುತ್ತದೆ.

ಈಗಾಗಲೇ ಗಲ್ಲಿ ಗಲ್ಲಿಗಳಲ್ಲಿ ರಂಗಿನಾಟಕ್ಕೆ ಸಿದ್ಧತೆ ನಡೆದಿದೆ. ಹಲಗೆಯ ವಾದನದ ಸದ್ದು 2-3 ದಿನಗಳಿಂದ ಎಲ್ಲೆಡೆ ಕೇಳಿ ಬರುತ್ತಿದೆ.

ಹೋಳಿ ಹಬ್ಬದಲ್ಲಿ ಓಣಿ ಓಣಿಯಲ್ಲಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪಿಸುವುದು, ಊರಿನ ಮನೆ ಮನೆ ಬಾಗಿಲಿಗೆ ಹಲಗೆ ಬಾರಿಸುತ್ತಾ ಮೆರವಣಿಯಲ್ಲಿ ಸಾಗಿ, ಮನೆಯವರಿಂದ ಹಣ ಸಂಗ್ರಹಿಸುವುದು. ಹಲಗೆ ಬಡಿಯುತ್ತಾ ಬಾಯಿ ಬಡಿದುಕೊಳ್ಳುವುದು ಇಂತಹ ಹಲವು ಚಟುವಟಿಕೆಯಲ್ಲಿ ಹುಡುಗರು, ಯುವಕರು ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ.

ಬಹುತೇಕ ಓಣಿಯಲ್ಲಿ ಹುಡುಗರೇ ಕಾಮಣ್ಣನ ಮೂರ್ತಿ ಸಿದ್ಧಪಡಿಸಿ ಪ್ರತಿಷ್ಠಾಪನೆ ಮಾಡುತ್ತಾರೆ. ಮೂರ್ತಿಗೆ ಹಳೆಯ ಅಂಗಿ ಅಥವಾ ನಿಲುವಂಗಿ, ಪ್ಯಾಂಟ್ ತಂದು ಅದರಲ್ಲಿ ಒಣ ಬತ್ತದ ಹುಲ್ಲು ತುಂಬಿ, ಕಟ್ಟಿಗೆ ಸಿಕ್ಕಿಸಿ ಕಾಮನ ಮೂರ್ತಿ ಸಿದ್ಧಪಡಿಸುತ್ತಾರೆ. ಮುಖಕ್ಕೆ ಗಡಿಗೆ ತಂದು ಅದಕ್ಕೆ ಕಣ್ಣು, ಮೂಗು, ಕಿವಿ, ಬಾಯಿ, ಮೀಸೆ ಬರೆದಿರುತ್ತಾರೆ. ಇನ್ನು ಕೆಲವರು ಚಿತ್ರಕಲಾವಿದರಿಂದ ಕಾಮನ ಮುಖದ ಚಿತ್ರ ಬರೆಯಿಸಿ ಗಡಿಗಿಗೆ ಅಂಟಿಸಿರುತ್ತಾರೆ. ಕೊರಳಲ್ಲಿ ಒಂದು ಹೂವಿನ ಹಾರ ಹಾಕಿ, ಕಾಮನ ಮೂರ್ತಿಯನ್ನು ಹೊತ್ತುಕೊಂಡು ಹುಡುಗರು ಖಷಿಯಿಂದ ಹಲಗೆ ಹೊಡೆಯುತ್ತಾ, ಓಣಿ ಓಣಿಗಳಲ್ಲಿ ತಿರುಗಾಡಿ, ಬಣ್ಣದಾಟಕ್ಕೆ ಹಣ ಸಂಗ್ರಹಿಸುತ್ತಾರೆ.


ಕಾಮಣ್ಣನ ಮೂರ್ತಿ ಹೊತ್ತುಕೊಂಡು ಬೇಸಿಗೆಯ ಉರಿ ಬಿಸಿಲು ಎನ್ನದೇ ಹಲಗೆ ಬಡಿಯುತ್ತಾ ಓಣಿ ಓಣಿಯಲ್ಲಿ ತಿರುಗಾಡಿದರೂ ಕಿಂಚತ್ತೂ ಬೇಸರ ಮತ್ತು ದಣಿವು ಹುಡುಗರ ಮುಖದಲ್ಲಿ ಕಂಡು ಬರುವುದಿಲ್ಲ. ಮನೆ ಮುಂದೆ ಹೋಗಿ ಮನೆಯವರಿಗೆ ಕಾಮಣ್ಣನ ಪಟ್ಟಿ ಕೊಡ್ರಿ ಎಂದು ಹಲಗೆ ಬಾರಿಸುತ್ತಾ, ಕಾಮನ ಪಟ್ಟಿ (ದೇಣಿಗೆ) ಮನೆಯವರು ಕೊಟ್ಟಷ್ಟು ತಗೆದುಕೊಂಡು ಮತ್ತೆ ಮುಂದಿನ ಮನೆಗೆ ತೆರಳುತ್ತಾರೆ.

ಮನೆ ಮನೆಯಿಂದ ಸಂಗ್ರಹಿಸಿದ ಕಾಮನ ಪಟ್ಟಿಯ (ದೇಣಿಗೆ ಹಣ) ಹಣದಲ್ಲಿ ಕಾಮದಹನ ಮಾಡುವಾಗ ಪೂಜಾ ಸಾಮಗ್ರಿಗಳು ಮತ್ತು ಮಂಡಕ್ಕಿ ಕಾರ ಅಥವಾ ಮಡ್ಡಿಕ್ಕಿ ಒಗ್ಗರಣೆ ಮಾಡಿಸಿ, ಓಣಿಯಲ್ಲಿರುವ ಎಲ್ಲರನ್ನು ಸೇರಿಕೊಂಡು ಲಘು ಉಪಾಹಾರ ಸವಿಯುತ್ತಾರೆ. ಇನ್ನು ಉಳಿದ ಹಣದಲ್ಲಿ ಓಕಳಿಯ ದಿನ ಬಣ್ಣ ಖರೀದಿಸಿ ತಮ್ಮ ಓಣಿಯ ಎಲ್ಲ ಹುಡುಗರಿಗೂ ಬಣ್ಣ ನೀಡಿ ಓಕುಳಿಯಾಡುತ್ತಾರೆ.

ಕೆಲ ಊರುಗಳಲ್ಲಿ ಮಾ. 2ರಂದು ರಾತ್ರಿ ಕಾಮದಹನ ನಡೆಯಲಿದೆ. ಇನ್ನೂ ಕೆಲ ಊರುಗಳಲ್ಲಿ ಮಾ. 3ರಂದು ರಾತ್ರಿ ಕಾಮ ದಹನ ನಡೆಯಲಿದೆ. ಆದರೆ ಮಂಗಳವಾರ ಹುಣ್ಣಿಮೆ ಮತ್ತು ಚಂದ್ರಗ್ರಹಣ ಇರುವುದರಿಂದ ಬಹುತೇಕವಾಗಿ ಮಾ. 4ರಂದು ಹೋಳಿಯ ರಂಗಿನಾಟಕ್ಕೆ ಜನರು ತುದಿಗಾಲಲ್ಲಿ ಸಿದ್ಧರಾಗಿ ನಿಂತಿದ್ದಾರೆ.