ಯುವ ಜನತೆ ವಿಶ್ವ ಮಾನವರಾಗಬೇಕು: ಡಾ. ಜೆಪಿಕೆ

| Published : Jul 09 2025, 12:25 AM IST

ಯುವ ಜನತೆ ವಿಶ್ವ ಮಾನವರಾಗಬೇಕು: ಡಾ. ಜೆಪಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಯುವ ಜನತೆ ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ವಿಶ್ವ ಮಾನವರಾಗಬೇಕು ಎಂದು ಆಶಾಕಿರಣ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಡಾ.ಜೆ.ಪಿ. ಕೃಷ್ಣೇಗೌಡ ಸಲಹೆ ಮಾಡಿದರು.

- ಐಡಿಎಸ್‌ಜಿ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಯುವ ಜನತೆ ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ವಿಶ್ವ ಮಾನವರಾಗಬೇಕು ಎಂದು ಆಶಾಕಿರಣ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಡಾ.ಜೆ.ಪಿ. ಕೃಷ್ಣೇಗೌಡ ಸಲಹೆ ಮಾಡಿದರು.ನಗರದ ಐಡಿಎಸ್‌ಜಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಂಗಳವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಜಗತ್ತಿನಲ್ಲಿಂದು ಮಾನವೀಯ ಮೌಲ್ಯಗಳ ಕೊರತೆಯಿದೆ, ಅದರಿಂದಾಗಿ ದೌರ್ಜನ್ಯ, ಶೋಷಣೆ, ಅತ್ಯಾಚಾರ, ಕೊಲೆ ಸೇರಿದಂತೆ ಅಪರಾಧ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಎಲ್ಲೆಡೆ ಅಭದ್ರತೆ, ಅಶಾಂತಿ ಕಾಡುತ್ತಿದೆ ಎಂದು ವಿಷಾದಿಸಿದ ಅವರು, ಈ ಪರಿಸ್ಥಿತಿ ಸರಿ ಹೋಗಬೇಕಾದರೆ ಯುವ ಜನತೆ ಭಕ್ತಿ ಭಂಡಾರಿ ಬಸವಣ್ಣನವರ ಸಪ್ತ ಸೂತ್ರಗಳನ್ನು ಮೈಗೂಡಿಸಿ ಕೊಳ್ಳಬೇಕು. ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ವಿಶ್ವಮಾನವರಾಗಲು ಪ್ರಯತ್ನಿಸಬೇಕು ಎಂದು ಕಿವಿ ಮಾತು ಹೇಳಿದರು.ಯುವ ಜನತೆ ಪ್ರತಿದಿನ ಪತ್ರಿಕೆಗಳನ್ನು ಓದಬೇಕು. ಆ ಮೂಲಕ ಜಗತ್ತನ್ನು, ಆಗು ಹೋಗುಗಳನ್ನು ತಿಳಿಯಬೇಕು, ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಆರೋಗ್ಯ ಮತ್ತು ವಿದ್ಯೆ ಒಂದೇ ನಾಣ್ಯದ 2 ಮುಖಗಳಾಗಿವೆ. ಹಾಗಾಗಿ ವಿದ್ಯಾರ್ಥಿಗಳು ಆರೋಗ್ಯವಂತರು ಮತ್ತು ವಿದ್ಯಾವಂತರೂ ಆಗಬೇಕು ಎಂದರು.ನಾವು ಸಮಾಜಮುಖಿಗಳಾದರೆ, ಸಮಾಜದ ಸೇವೆ ಮಾಡಿದರೆ, ಜನಮಾನಸದಲ್ಲಿ ಚಿರಸ್ಥಾಯಿಗಳಾಗಬಹುದು, ಸಮಾಜ ಸೇವೆಯಿಂದ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ. ಹಾಗಾಗಿ ಯುವ ಜನತೆ ಸಮಾಜಮುಖಿಗಳಾಗಬೇಕು ಎಂದು ಹೇಳಿದರು.

ವೈದ್ಯರಾದ ಡಾ. ವರ್ಷಾ ಅಭಿಷೇಕ್‌ ಮಾತನಾಡಿ, ವಿದ್ಯಾರ್ಥಿ ಜೀವನ ಬಂಗಾರದ ಜೀವನ, ವಿದ್ಯಾರ್ಥಿಗಳು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಉನ್ನತ ಕನಸುಗಳನ್ನು ಕಾಣಬೇಕು. ಅವುಗಳ ನನಸಿಗಾಗಿ ಶ್ರಮಿಸಬೇಕು, ಶಿಕ್ಷಣ ವಂತರು ದೇಶಕ್ಕಾಗಿ, ಸಮಾಜಕ್ಕಾಗಿ ದುಡಿಯಬೇಕು ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಕೆ.ಎನ್. ಲಕ್ಷ್ಮಿಕಾಂತ್ 2008ರಲ್ಲಿ ಕಾಲೇಜಿನಲ್ಲಿ ಆರಂಭಗೊಂಡ ಸ್ನಾತಕೋತ್ತರ ಕೇಂದ್ರ ಇದುವರೆಗೆ ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದೆ ಎಂದು ತಿಳಿಸಿದರು.ನಾವು ಗಳಿಸಿದ ಪದವಿಗಳು, ನಾವು ಪಡೆದ ವಿದ್ಯೆ ಸಾರ್ಥಕವಾಗಬೇಕಾದರೆ ನಾವು ಸಮಾಜಮುಖಿಗಳಾಗಬೇಕು. ವಿದ್ಯಾರ್ಥಿ ಗಳು ತಾವು ಕಲಿತ ವಿದ್ಯೆಯನ್ನು ಇತರರಿಗೆ ಹಂಚಬೇಕು. ಉತ್ತಮ ನಾಗರಿಕರಾಗಬೇಕು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯೆ ಡಾ.ಆರ್.ಎ. ಪುಷ್ಪ ಭಾರತಿ, ವಿದ್ಯಾರ್ಥಿಗಳು ದುರಭ್ಯಾಸಗಳಿಂದ ದೂರ ವಿರಬೇಕು. ಹೆತ್ತವರು, ಗುರುಗಳು ಮತ್ತು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಬೇಕು. ಪಡೆದ ಪದವಿಯನ್ನು, ವಿದ್ಯೆಯನ್ನು ಸಮಾಜಕ್ಕಾಗಿ ಬಳಸಬೇಕು ಎಂದು ಕಿವಿ ಮಾತು ಹೇಳಿದರು.ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ನೆನಪಿನ ಕಾಣಿಕೆ ನೀಡಲಾಯಿತು, ವಿದ್ಯಾರ್ಥಿಗಳು ತಮ್ಮ ಕಲಿಕೆ ಅವಧಿಯ ಅನುಭವಗಳನ್ನು ವಿವರಿಸಿದರು, ಆಶಾಕಿರಣ ಅಂಧ ಮಕ್ಕಳ ಶಾಲೆ ಅಧ್ಯಕ್ಷ ಡಾ.ಜೆ.ಪಿ. ಕೃಷ್ಣೇಗೌಡ ಮತ್ತು ಅವರ ಪುತ್ರಿ ಡಾ. ವರ್ಷಾ ಅಭಿಷೇಕ್‌ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಹ ಪ್ರಾಧ್ಯಾಪಕರಾದ ಪ್ರೊ.ಎಂ.ತ್ರಿಪುರ ಮಹೇಶ್ವರ, ಡಾ. ಎಸ್. ಮಹೇಶ್, ಉಪನ್ಯಾಸಕರಾದ ಕೆ.ಸಿ.ಆಶಾ, ದೇವಾನಂದ್, ದಿನೇಶ್, ಬಸವರಾಜ್, ಲೋಕೇಶ್, ರಾಘವೇಂದ್ರ, ವಿದ್ಯಾರ್ಥಿಗಳಾದ ಎಂ.ಕೆ.ಭವಾನಿ, ಅಸ್ಮ ಬಾನು ಉಪಸ್ಥಿತರಿದ್ದರು.8 ಕೆಸಿಕೆಎಂ 1ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಂಗಳವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮವನ್ನು ಡಾ. ಜೆ.ಪಿ. ಕೃಷ್ಣೇಗೌಡ ಅವರು ಉದ್ಘಾಟಿಸಿದರು. ಡಾ. ಪುಷ್ಪ ಭಾರತಿ, ಡಾ.ಕೆ.ಎನ್‌. ಲಕ್ಷ್ಮೀಕಾಂತ್‌, ಡಾ. ವರ್ಷಾ ಅಭಿಷೇಕ್‌ ಇದ್ದರು.