ಸಾರಾಂಶ
ಯುವ ಜನತೆಗೆ ಏಡ್ಸ್ ಬಗ್ಗೆ ಸರಿಯಾದ ಮಾಹಿತಿ ಸಿಗುವಂತಾಗಬೇಕು
ಹೊನ್ನಾವರ: ಯುವ ಜನತೆಗೆ ಏಡ್ಸ್ ಬಗ್ಗೆ ಸರಿಯಾದ ಮಾಹಿತಿ ಸಿಗುವಂತಾಗಬೇಕು ಎಂದು ಹೊನ್ನಾವರ ತಾಲೂಕಾಸ್ಪತ್ರೆಯ ಆಪ್ತ ಸಮಾಲೋಚಕ ವಿನಾಯಕ ಪಟಗಾರ ಹೇಳಿದರು.
ಅವರು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು, ಐಸಿಟಿಸಿ ವಿಭಾಗ ತಾಲೂಕು ಆಸ್ಪತ್ರೆ, ಹೊನ್ನಾವರ ಮತ್ತು ಎಸ್.ಡಿಎಂ ಪದವಿ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ಇದರ ಸಹಯೋಗದಲ್ಲಿ ಕಾಲೇಜಿನ ಆರ್.ಎಸ್.ಹೆಗಡೆ ಸಭಾಭವನದಲ್ಲಿ ನಡೆದ ಎಚ್ ಐ ವಿ ಕುರಿತು ಜಾಗೃತಿ- ಏಡ್ಸ್ ತಡೆಗಟ್ಟುವಲ್ಲಿ ಯುವಜನತೆಯ ಪಾತ್ರ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ಲೈಂಗಿಕ ಶಿಕ್ಷಣವನ್ನು ವಿದ್ಯಾರ್ಥಿಗಳಿರುವಾಗಲೇ ನೀಡಬೇಕು. ನಮ್ಮ ಮಡಿವಂತಿಕೆಯನ್ನು ಬಿಟ್ಟು ಮಾತನಾಡಬೇಕು. ಲೈಂಗಿಕತೆಯ ವಿಚಾರವನ್ನು ವಿದ್ಯಾರ್ಥಿಗಳ ಎದುರು ಚರ್ಚಿಸದೆ ಇದ್ದಿದ್ದರಿಂದಲೇ ಈಗ ಫೋಕ್ಸೋ ಕೇಸ್ ಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.ಈಗೀಗ ನಮ್ಮಲ್ಲಿ ಏಡ್ಸ್ ಹರಡುವ ಪ್ರಮಾಣದಲ್ಲಿ ಕಡಿಮೆ ಆಗಿದೆ. ಜಗತ್ತಿನಲ್ಲಿ ಏಡ್ಸ್ ಹರಡುತ್ತಿರುವ ರಾಷ್ಟ್ರಗಳಲ್ಲಿ ಮುಂದುವರಿಯುತ್ತಿರುವ ದೇಶಗಳೇ ಹೆಚ್ಚು. ಇದರಲ್ಲಿ ಭಾರತವೂ ಇದೆ. ಮಹಾರಾಷ್ಟ್ರ, ಕರ್ನಾಟಕ, ಆಂಧ್ರ, ತಮಿಳುನಾಡು , ಮಣಿಪುರಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದೆ ಎಂದರು. ಉತ್ತರಕನ್ನಡ ನಮ್ಮ ರಾಜ್ಯದಲ್ಲಿ ಏಡ್ಸ್ ಸೋಂಕಿತರ ಸಂಖ್ಯೆಯಲ್ಲಿ ೨೮ ನೇ ಸ್ಥಾನದಲ್ಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಡಿ.ಎಲ್. ಹೆಬ್ಬಾರ್ ಮಾತನಾಡಿ, ಏಡ್ಸ್ ಇದು ಮಾರಣಾಂತಿಕ ಕಾಯಿಲೆ. ನಾವು ಈ ಕಾಯಿಲೆ ಬಗ್ಗೆ ಮುನ್ನೆಚ್ಚರಿಕೆ ಹೊಂದಿರಬೇಕು. ಯುವಜನತೆ ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಭಾರತ ಜಗತ್ತಿನಲ್ಲಿ ಏಡ್ಸ್ ಸೋಂಕಿತರ ಪ್ರಮಾಣದಲ್ಲಿ ೩ನೇ ಸ್ಥಾನದಲ್ಲಿದೆ. ಈ ಕಾಯಿಲೆಯನ್ನು ತಡೆಗಟ್ಟುವಲ್ಲಿ ಯುವಕರು ಮುಂಜಾಗ್ರತೆ ವಹಿಸಿ ಎಂದರು.ಪದವಿ ಕಾಲೇಜಿನ ಎನ್.ಎಸ್.ಎಸ್. ಯೋಜನಾಧಿಕಾರಿ ಎನ್.ಜಿ.ಹೆಗಡೆ, ಅಪಗಾಲ, ಯೂನಿಯನ್ ಉಪಾಧ್ಯಕ್ಷ ಎನ್.ಜಿ.ಅನಂತಮೂರ್ತಿ ಉಪಸ್ಥಿತರಿದ್ದರು. ಉಪನ್ಯಾಸಕ ಡಾ. ಎಂ.ಜಿ.ಹೆಗಡೆ ಸ್ವಾಗತಿಸಿದರು. ವಿದ್ಯಾಧರ ನಾಯ್ಕ ನಿರೂಪಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))