ಸಾರಾಂಶ
ಕನ್ನಡ ಸಾಹಿತ್ಯ ಪರಿಷತ್ , ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ನಡಿಗೆ ಶಾಲಾ, ಕಾಲೇಜುಗಳ ಕಡೆಗೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕರ್ನಾಟಕ ರಾಜ್ಯದಲ್ಲಿ ಎಲ್ಲಾ ಭಾಷಿಗರು ಏಕತೆಯಿಂದ ಹೊಂದಿಕೊಂಡು ಬದುಕುತ್ತಿದ್ದಾರೆ ಎಂದು ಕಡಹಿನಬೈಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುನೀಲ್ ಕುಮಾರ್ ತಿಳಿಸಿದರು.
ಶುಕ್ರವಾರ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಸಂಯುಕ್ತ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಡಿಗೆ ಶಾಲಾ ಕಾಲೇಜುಗಳ ಕಡೆಗೆ, ಮಕ್ಕಳಿಗೆ ಕನ್ನಡದಲ್ಲಿ ರಸ ಪ್ರಶ್ನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮುಖ್ಯ ಅತಿಥಿಯಾಗಿ ಮಾತನಾಡಿದರು. ಬೇರೆ,ಬೇರೆ ರಾಜ್ಯಗಳಲ್ಲಿ ಆ ರಾಜ್ಯದ ಭಾಷೆ ಬಿಟ್ಟು ಬೇರೆ ಭಾಷೆಯಲ್ಲಿ ಮಾತನಾಡುವುದೇ ಇಲ್ಲ. ಆದರೆ, ಕರ್ನಾಟಕದಲ್ಲಿ ಎಲ್ಲಾ ಭಾಷಿಕ ರಿಗೂ ಗೌರವ ನೀಡುತ್ತಿದೆ. ರಾಜ್ಯದಲ್ಲಿ ಕನಕ ದಾಸರು, ಪುರಂದರ ದಾಸರು ದಾಸ ಸಾಹಿತ್ಯ ನೀಡಿದ ರಾಜ್ಯವಾಗಿದೆ. ಕುವೆಂಪು, ಶಿವರಾಮ ಕಾರಂತ, ಯು.ಆರ್.ಅನಂತಮೂರ್ತಿಯಂತಹ ಮೇರು ಸಾಹಿತಿಗಳು ಹುಟ್ಟಿದ ನಾಡಾಗಿದೆ. ಕನ್ನಡ ಭಾಷೆ ಸಮೃದ್ಧ ಭಾಷೆಯಾಗಿದ್ದು ಎಂದಿಗೂ ಮರೆಯಬಾರದು. ವಿಶೇಷವಾಗಿ ಯುವ ಜನರು ಕನ್ನಡ ಭಾಷೆಯನ್ನು ಪ್ರೀತಿಸಬೇಕು ಎಂದು ಕರೆ ನೀಡಿದರು.ಸಭೆ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಶಾಲಾ, ಕಾಲೇಜುಗಳಲ್ಲೂ ಕನ್ನಡದ ಕಂಪು ಪಸರಿಸುವ ಕೆಲಸ ಮಾಡುತ್ತಿದೆ. ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅದೇ ಶಾಲೆಯಲ್ಲಿ ಸನ್ಮಾನಿಸಿ ಪ್ರೋತ್ಸಾಹ ನೀಡುತ್ತಿದ್ದೇವೆ. ಗ್ರಾಮೀಣ ಪ್ರದೇಶದಲ್ಲೂ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ವಿಶೇಷವಾಗಿ ಯುವಜನರು ಹಾಗೂ ಮಹಿಳೆಯರಿಗೆ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಬರುವ ಹತ್ತಾರು ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ ಎಂದರು.
ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಹಿರಿಯ ಶಿಕ್ಷಕ ವಿಶ್ವನಾಥ್ ಉದ್ಘಾಟಿಸಿ ಮಾತನಾಡಿ, 2 ಸಾವಿರ ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆ ಸುಂದರ ಭಾಷೆಯಾಗಿದೆ. ಕ್ರಿ.ಪೂರ್ವದಲ್ಲಿ ಕನ್ನಡ ಭಾಷೆ ಆಡು ಭಾಷೆಯಾಗಿತ್ತು.4 ದ್ರಾವಿಢ ಭಾಷೆಯಲ್ಲಿ ಕನ್ನಡ ಭಾಷೆಯೂ ಸೇರಿದೆ. ಕನ್ನಡ ಭಾಷೆಗೆ 8 ಜ್ಞಾನ ಪೀಠ ಪ್ರಶಸ್ತಿ ಲಭಿಸಿದೆ. ಅಲ್ಲದೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ಸಿಕ್ಕಿದೆ. ಕನ್ನಡದ ಲಿಪಿ ಕದಂಬಕ ಕಾಲದಲ್ಲಿ ಪ್ರಾರಂಭವಾಯಿತು. ಕನ್ನಡ ಭಾಷೆ ಉಳಿವಿಗಾಗಿ ಕನ್ನಡ ಸಾಹಿತ್ಯ ಪರಿಷತ್ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದೆ. ನರಸಿಂಹರಾಜಪುರ ತಾಲೂಕು ಕಸಾಪ ಕನ್ನಡಕ್ಕೆ ಸಂಬಂಧಪಟ್ಟ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಅತಿಥಿಯಾಗಿದ್ದ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಪದ್ಮಸತೀಶ್ ಮಾತನಾಡಿ, ಮಕ್ಕಳು ಶಾಲಾ ಹಂತದಲ್ಲೇ ಶಿಸ್ತನ್ನು ಪಾಲಿಸಬೇಕು. ಶಿಕ್ಷಕರಿಗೆ, ಪೋಷಕರಿಗೆ ಗೌರವ ನೀಡಬೇಕು. ಉತ್ತಮ ಶಿಕ್ಷಣ ಪಡೆದು ಕಲಿತ ಶಾಲೆಗೆ, ತಂದೆ, ತಾಯಿಗಳಿಗೆ ಗೌರವ ತರಬೇಕು. ಸರ್ಕಾರಿ ಶಾಲೆ ಎಂಬ ಕೀಳರಿಮೆ ಬಿಡಬೇಕು ಎಂದರು.
ಇದೇ ಸಂದರ್ಭದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ಕು.ಎಚ್.ವಿ. ಮನ್ವಿತ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಅತಿಥಿಗಳಾಗಿ ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಅಶ್ವಿನಿ, ಸದಸ್ಯರಾದ ಚಂದ್ರಶೇಖರ್, ವಾಣಿ ನರೇಂದ್ರ, ಪೂರ್ಣಿಮಾ, ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ನಂದಿನಿ ಆಲಂದೂರು, ಕಸಾಪ ಕಸಬಾ ಹೋಬಳಿ ಅಧ್ಯಕ್ಷ ಉದಯಗಿಲ್ಲಿ, ಕಸಾಪ ಯುವ ಘಟಕದ ಅಧ್ಯಕ್ಷ ಸತ್ಯಪ್ರಕಾಶ್, ಮಹಿಳಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಪೂರ್ಣಿಮಾ ಮಧು, ಕೋಶಾಧ್ಯಕ್ಷೆ ರೇಖಾ ಮೋಹನ್, ತಾ.ಕಸಾಪ ಮಾಜಿ ಅಧ್ಯಕ್ಷೆ ಮೀನಾಕ್ಷಿ ಕಾಂತರಾಜ್, ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಸದಸ್ಯರಾದ ಶೈಲಾ, ಸನ್ಮತಿ ರಕ್ಷಿತ್ ಮತ್ತಿತರರು ಇದ್ದರು.
ನಂತರ ಮಕ್ಕಳಿಗಾಗಿ ನಡೆದ ಜಾನಪದ ರಸಪ್ರಶ್ನೆ ಕಾರ್ಯಕ್ರಮವನ್ನು ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮತ್ತು ತಂಡದವರು ನಡೆಸಿಕೊಟ್ಟರು. ಪ್ರಥಮ,ದ್ವಿತೀಯ,ತೃತೀಯ ಸ್ಥಾನ ಪಡೆದ ತಂಡಗಳಿಗೆ ಬಹುಮಾನ ನೀಡಲಾಯಿತು .4 ನೇ ಸ್ಥಾನ ಪಡೆದ ತಂಡಕ್ಕೆ ಸಮಾಧಾನಕರ ಬಹುಮಾನ ನೀಡಲಾಯಿತು. ಶಿಕ್ಷಕ ನಾಗರಾಜ್ ಸ್ವಾಗತಿಸಿದರು.ಶಿಕ್ಷಕಿ ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.