ಯುವ ಕವಿಗಳು ತಮ್ಮ ಬರವಣಿಗೆಯಲ್ಲಿ ಅಧ್ಯಯನ ಶೀಲತೆ, ಬರವಣಿಗೆಗಳ ಜವಾಬ್ದಾರಿ ಹಾಗೂ ಎಚ್ಚರಿಕೆ ಅಗತ್ಯ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೇಮಾನಂದ ಲಕ್ಕನವರ ಅಭಿಪ್ರಾಯ ವ್ಯಕ್ತಪಡಿಸಿದರು.

ರಟ್ಟೀಹಳ್ಳಿ: ಯುವ ಕವಿಗಳು ತಮ್ಮ ಬರವಣಿಗೆಯಲ್ಲಿ ಅಧ್ಯಯನ ಶೀಲತೆ, ಬರವಣಿಗೆಗಳ ಜವಾಬ್ದಾರಿ ಹಾಗೂ ಎಚ್ಚರಿಕೆ ಅಗತ್ಯ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೇಮಾನಂದ ಲಕ್ಕನವರ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ತಿಪ್ಪಾಯಿಕೊಪ್ಪ ಗ್ರಾಮದ ಮೂಕಪ್ಪ ಶಿವಯೋಗಿಗಳ ಪತ್ರಿ ಮರಡಿ ತಪೋವನದಲ್ಲಿ ನಡೆದ ಚಿಂತನಮಾಲೆಯ ಮೊದಲ ಕಾವ್ಯಕಮ್ಮಟ ಹಾಗೂ ದಸರಾ ಕವಿಗೋಷ್ಠಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಮಾಜಕ್ಕೆ ಫಲವತ್ತಾದ ವಿಷಯಾಧರಿತ ಬರಹಗಳು ಮತ್ತು ಮುಂದಿನ ಯುವ ಪೀಳಿಗೆಗೆ ಮಾರ್ಗದರ್ಶನ ನೀಡುವಂತಿರಬೇಕು, ಉತ್ತಮ ಓದು ಒಬ್ಬ ವ್ಯಕ್ತಿ ಉತ್ತಮ ಬರಹಗಾರರನ್ನು ರೂಪಿಸುವುದಲ್ಲದೇ ಬೇರೆಯವರು ಬರೆದ ಸಾಹಿತ್ಯವನ್ನು ಓದುವುದರೊಂದಿಗೆ ಅದರ ಮಿತಿಗಳನ್ನು ಗುರುತಿಸಿಕೊಳ್ಳಬೇಕು ಎಂದರು.

ಚಿಂತನ ಮಾಲೆಯ ಕಾರ್ಯಕಾರ್ಯ ಸಮಿತಿ ಅಧ್ಯಕ್ಷ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ ಪ್ರಾಚಾರ್ಯ ಡಾ.ಎಸ್.ಪಿ. ಗೌಡರ ಮಾತನಾಡಿ, ಬದುಕನ್ನು ತುಂಬಾ ಸ್ವಾದಿಷ್ಟವಾಗಿ ಅನುಭವಿಸಿದವನಿಗೆ ಮಾತ್ರ ಉತ್ತಮ ಬರವಣಿಗೆಯಲ್ಲಿ ತೊಡಗಿಕೊಳ್ಳಲು ಸಾಧ್ಯ, ಓದುಗನಿಗೆ ಚಿಂತಿಸಲು ಅವಕಾಶ ನೀಡುವಂತಹ ಬರವಣಿಗೆ ಕವಿಯದ್ದಾಗಬೇಕು ಎಂದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ ಗುರು ಮೂಕಪ್ಪ ಶಿವಯೋಗಿ ಮಠದ ಮಹಾಂತ ಸ್ವಾಮಿಗಳು ಮಾತನಾಡಿ, ಮೈಸೂರು ದಸರಾ ಬಂದಾಗ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಗರಿಗೆದರುತ್ತವೆ, ಕವನ ವಾಚನ ಮಾಡುವಾಗ ಕೇಳುವ ಸಹೃದಯ ವರ್ಗವು ಬಹಳ ಮುಖ್ಯ ಎಂದರು.

ಶ್ರೀ ಮಠದಲ್ಲಿ ಅಂತಹ ಕಲೆ, ಸಾಹಿತ್ಯ, ಸಾಂಸ್ಕೃತಿಕ ಪರಂಪರೆ ಉಳಿಸಿ ಬೆಳೆಸಿಕೊಂಡು ಬಂದಿದ್ದು, ಮಠದಲ್ಲಿ ಕೇವಲ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಬರಹಗಾರರನ್ನು ಮತ್ತು ಚಿಂತಕರನ್ನು ಒಳಗೊಂಡಂತಹ ಸೃಜನಾತ್ಮಕ ಕಾರ್ಯಕ್ರಮಗಳಿಗೆ ವೇದಿಕೆಯನ್ನು ರೂಪಿಸಬೇಕಾದ ಅಗತ್ಯತೆ ಇತ್ತು. ಆ ಹಿನ್ನೆಲೆಯಲ್ಲಿ ತಪೋವನ ಚಿಂತನ ಮಾಲೆ ಸರಣಿ ಸಾಹಿತ್ಯಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.

ದಸರಾ ಕವಿಗೋಷ್ಠಿಯಲ್ಲಿ 26 ಕವಿಗಳು ತಮ್ಮ ಕವನಗಳನ್ನು ವಾಚಿಸಿದರು. ಆಯ್ದ 5 ಕವಿಗಳನ್ನು ಗುರುತಿಸಿ ಗೌರವಿಸಲಾಯಿತು ಹಾಗೂ ಆಯ್ದ ಕವನಗಳನ್ನು ವೈರಾಗ್ಯನಿಧಿ ಮುಕೇಶ್ವರ ಮಾಸಪತ್ರಿಕೆಯಲ್ಲಿ ಪ್ರಕಟಿಸಲಾಗುವುದು ಎಂದು ಶ್ರೀ ಮಠ ಪ್ರಕಟಣೆಯಲ್ಲಿ ತಿಳಿಸಿದರು.

ಚಿಂತನೆ ಮಾಲೆ ಕಾರ್ಯಕ್ರಮದ ಕಾರ್ಯಾಧ್ಯಕ್ಷ ಕೆ.ಆರ್. ಕೋಣ್ತಿ, ದಾಸೋಹಿ ಕವಿಕಾಶಿ ಅಧ್ಯಕ್ಷ ಡಾ. ಮಂಜುನಾಥ ತಲ್ಲೂರ, ಕೆ.ಎಂ.ಎಫ್‌. ಮಾಜಿ ನಿರ್ದೇಶಕ ಹನಮಂತಗೌಡ ಭರಮಣ್ಣನವರ, ಸಾಹಿತಿ ನಿಂಗಪ್ಪ ಚಳಗೇರಿ, ಸರ್ವಜ್ಞ ಪತ್ರಿಕೆ ಸಂಪಾದಕ ಎಸ್.ಬಿ. ಮಠದ ಮುಂತಾದವರು ಇದ್ದರು.