ಜಿಲ್ಲೆಯಲ್ಲಿ ಲಕ್ಷ ದಾಟಿದ ಯುವ ಮತದಾರರು!

| Published : Mar 20 2024, 01:22 AM IST

ಸಾರಾಂಶ

ಅಂತಿಮ ಮತದಾರರ ಪಟ್ಟಿಯ ಪ್ರಕಾರ ಲೋಕಸಭಾ ಚುನಾವಣೆಗೆ ಮತದಾನ ಮಾಡಲು ಬೆಳಗಾವಿ ಜಿಲ್ಲೆಯ ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರ ಮತ್ತು ಕೆನರಾ ಲೋಕಸಭಾ ಕ್ಷೇತ್ರದ ಕ್ಷೇತ್ರ ವ್ಯಾಪ್ತಿಯ 18 ವಿಧಾನಸಭೆ ಕ್ಷೇತ್ರಗಳಲ್ಲಿ ಒಟ್ಟು 1,08,596 ಯುವ ಮತದಾರರು ನೋಂದಣಿ ಆಗಿದ್ದಾರೆ. ಯುವ ಮತದಾರರು ಚುನಾವಣೆಯಲ್ಲಿ ಮೊದಲ ಬಾರಿಗೆ ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿ

ಅಂತಿಮ ಮತದಾರರ ಪಟ್ಟಿಯ ಪ್ರಕಾರ ಲೋಕಸಭಾ ಚುನಾವಣೆಗೆ ಮತದಾನ ಮಾಡಲು ಬೆಳಗಾವಿ ಜಿಲ್ಲೆಯ ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರ ಮತ್ತು ಕೆನರಾ ಲೋಕಸಭಾ ಕ್ಷೇತ್ರದ ಕ್ಷೇತ್ರ ವ್ಯಾಪ್ತಿಯ 18 ವಿಧಾನಸಭೆ ಕ್ಷೇತ್ರಗಳಲ್ಲಿ ಒಟ್ಟು 1,08,596 ಯುವ ಮತದಾರರು ನೋಂದಣಿ ಆಗಿದ್ದಾರೆ. ಯುವ ಮತದಾರರು ಚುನಾವಣೆಯಲ್ಲಿ ಮೊದಲ ಬಾರಿಗೆ ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅರಭಾವಿ, ಗೋಕಾಕ, ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ, ಬೈಲಹೊಂಗಲ, ಸವದತ್ತಿ ಯಲ್ಲಮ್ಮ ಮತ್ತು ರಾಮದುರ್ಗ ವಿಧಾನಸಭೆ ಕ್ಷೇತ್ರಗಳಲ್ಲಿ ಒಟ್ಟು 47,095 ಯುವ ಮತದಾರರು ನೋಂದಣಿ ಆಗಿದ್ದಾರೆ. ಈ ಪೈಕಿ 25,705 ಪುರುಷ ಮತದಾರರಿದ್ದರೆ, 21,382 ಮಹಿಳಾ ಮತದಾರರಿದ್ದಾರೆ.

ಚಿಕ್ಕೋಡಿ ಲೋಕಸಭಾ ವ್ಯಾಪ್ತಿಗೆ ಒಳಪಡುವ ನಿಪ್ಪಾಣಿ, ಚಿಕ್ಕೋಡಿ- ಸದಲಗಾ, ಅಥಣಿ, ಕಾಗವಾಡ, ಕುಡಚಿ, ರಾಯಬಾಗ, ಹುಕ್ಕೇರಿ ಮತ್ತು ಯಮಕನಮರಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 47,095 ಯುವ ಮತದಾರರು ನೋಂದಣಿ ಆಗಿದ್ದಾರೆ. ಈ ಪೈಕಿ 25,705 ಪುರುಷ ಮತದಾರರಿದ್ದರೆ, 21,382 ಮಹಿಳಾ ಮತದಾರರು ಇದ್ದಾರೆ.

ಕೆನರಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಖಾನಾಪುರ ಮತ್ತು ಕಿತ್ತೂರು ವಿಧಾನಸಭಾ ಕ್ಷೇತ್ರಗಳಲ್ಲಿ 10,912 ಯುವ ಮತದಾರರು ನೋಂದಣಿ ಆಗಿದ್ದಾರೆ. ಹೀಗೆ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 1,08,596 ಯುವ ಮತದಾರರು ಇದ್ದಾರೆ. ಈ ಪೈಕಿ 59624 ಪುರುಷ ಮತದಾರರು, 48957 ಮಹಿಳಾ ಮತದಾರರು ಹಾಗೂ 15 ತೃತೀಯಲಿಂಗಿ ಮತದಾರರು ಇದ್ದಾರೆ.

ಯುವ ಮತದಾರರು ಫಲಿತಾಂಶ ನಿರ್ಣಯದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಇನ್ನು ಹಲವಾರು ಜನರು ಅರ್ಜಿ ಸಲ್ಲಿಸಿ ನೋಂದಣಿಗೆ 18 ವರ್ಷ ತುಂಬುವುದನ್ನು ಕಾಯುತ್ತಿದ್ದಾರೆ. ಸಾಮಾನ್ಯ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹೊಸ ಹಾಗೂ ಯುವ ಮತದಾರರ ಮೇಲೆ ಕಣ್ಣು ನೆಟ್ಟು ಕಾರ್ಯತಂತ್ರ ರೂಪಿಸುತ್ತಾರೆ. ಅವರನ್ನು ಸೆಳೆಯಲು ನಾನಾ ಕಸರತ್ತು ನಡೆಸುತ್ತಾರೆ. ಯುವ ಮತದಾರರ ನಾಡಿಮಿಡಿತ ಅರಿಯುವ ಪ್ರಯತ್ನವನ್ನು ರಾಜಕೀಯ ಪಕ್ಷಗಳು ಮಾಡುತ್ತವೆ. ಆದರೆ, ಯುವ ಮತದಾರರು ಯಾರ ಪರ ಮತ ಚಲಾಯಿಸುತ್ತಾರೆ ಎನ್ನುವುದು ನಿಗೂಢವಾಗಿದೆ.

15 ತೃತೀಯ ಲಿಂಗ ಮತದಾರರು:

ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 15 ಜನ ತೃತೀಯ ಲಿಂಗ ಮತದಾರರು ಇದ್ದಾರೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಚಿಕ್ಕೋಡಿ-ಸದಲಗಾ, ರಾಯಬಾಗ, ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಒಬ್ಬರು ಹಾಗೂ ಹುಕ್ಕೇರಿಯಲ್ಲಿ ಇಬ್ಬರು ಹೀಗೆ ಒಟ್ಟು 5 ಜನ ತೃತೀಯ ಲಿಂಗ ಮತದಾರರು ಇದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಅರಭಾವಿ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ, ಬೈಲಹೊಂಗಲ, ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಒಬ್ಬರು ಹಾಗೂ ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಮೂವರು ಹೀಗೆ ಒಟ್ಟು 8 ಜನ ತೃತೀಯಲಿಂಗ ಮತದಾರರು ಇದ್ದಾರೆ. ಅದರಂತೆ ಕೆನರಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ಖಾನಾಪುರ ಮತ್ತು ಕಿತ್ತೂರ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಒಬ್ಬರು ಹೀಗೆ ಒಟ್ಟು 2 ತೃತೀಯ ಲಿಂಗ ಮತದಾರರು ಇದ್ದಾರೆ.ವಿಧಾನಸಭಾ ಕ್ಷೇತ್ರವಾರು ಯುವ ಮತದಾರರ ವಿವರ

ವಿಧಾನಸಭೆ ಕ್ಷೇತ್ರ ಮತದಾರರು

ನಿಪ್ಪಾಣಿ 5986

ಚಿಕ್ಕೋಡಿ ಸದಲಗಾ 6975

ಅಥಣಿ 7575

ಕಾಗವಾಡ 5540

ಕುಡಚಿ 5805

ರಾಯಬಾಗ 6470

ಹುಕ್ಕೇರಿ 5995

ಯಮಕನಮರಡಿ 6243

ಅರಬಾವಿ 7554

ಗೋಕಾಕ 6693

ಬೆಳಗಾವಿ ಉತ್ತರ 5654

ಬೆಳಗಾವಿ ದಕ್ಷಿಣ 5055

ಬೆಳಗಾವಿ ಗ್ರಾಮೀಣ 6228

ಬೈಲಹೊಂಗಲ 5154

ಸವದತ್ತಿ ಯಲ್ಲಮ್ಮ 5661

ರಾಮದುರ್ಗ 5096

ಖಾನಾಪುರ 5747

ಕಿತ್ತೂರ 5165

ಒಟ್ಟು 108596