ಕುದೂರು: ಮೆದುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲಿ ಮೃತಪಟ್ಟಿದ್ದ 21 ವರ್ಷದ ಯುವತಿಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕುಟುಂಬಸ್ಥರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ

ಕುದೂರು: ಮೆದುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲಿ ಮೃತಪಟ್ಟಿದ್ದ 21 ವರ್ಷದ ಯುವತಿಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕುಟುಂಬಸ್ಥರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಕುದೂರು ಗ್ರಾಮ ಪಂಚಾಯತಿ ಮಾಜಿ ಸದಸ್ಯ ಪ್ರಕಾಶ್ ರವರ ಮಗಳು ರಕ್ಷಿತಾ(21) ಮೆದುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಮೃತಪಟ್ಟವರು.

ತುಮಕೂರಿನ ಖಾಸಗಿ ಕಾಲೇಜಿನಲ್ಲಿ ಡಿ ಫಾರ್ಮ ಓದುತ್ತಿದ್ದ ಯುವತಿ ಅಂತಿಮ ವರ್ಷದ ಕೊನೆಯ ಪರೀಕ್ಷೆ ಬರೆದು ಹೊರಗೆ ಬಂದು ಮೂರ್ಛೆ ತಪ್ಪಿ ಬಿದ್ದಿದ್ದರು. ನಂತರ ಆಸ್ಪತ್ರೆಯಲ್ಲಿ ಹೆಚ್ಚಿನ ಪರೀಕ್ಷೆ ಮಾಡಿದಾಗ ಮೆದುಳಿನ ಸಮಸ್ಯೆ ಇರುವುದು ಗೊತ್ತಾಗಿದೆ. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಮೆದುಳು ನಿಷ್ಕ್ರಿಯೆಯಾದ ನಂತರ ಮೃತ ರಕ್ಷಿತಾಳ ಇಚ್ಚೆಯಂತೆ ಆಕೆಯ ಅಂಗಾಗಗಳನ್ನು ಕುಟುಂಬದವರು ದಾನ ಮಾಡಿದರು. ಮೆದುಳನ್ನು ಹೊರತು ಪಡಿಸಿ ಮೂತ್ರಪಿಂಡ, ಯಕೃತ್, ಕಣ್ಣು ಒಳಗೊಂಡಂತೆ ಒಂಬತ್ತು ಬಗೆಯ ಅಂಗಾಂಗಗಳನ್ನು ಆಸ್ಪತ್ರೆಗೆ ದಾನ ಮಾಡಿದರು. ರಕ್ಷಿತಾ ಬದುಕಿದ್ದಾಗಲೇ ಈ ರೀತಿಯ ಅಂಗಾಂಗಗಳನ್ನು ದಾನ ಮಾಡಿದರೆ ತುಂಬಾ ಜನರ ಪ್ರಾಣ ಉಳಿಯುತ್ತದೆ. ನಾನೂ ಕೂಡ ಸತ್ತ ನಂತರ ದಾನ ಮಾಡುತ್ತೇನೆ ಎಂದು ತನ್ನ ಗೆಳತಿಯರಿಗೆ ಮತ್ತು ಸೋದರಿಗೆ ತಿಳಿಸಿದ್ದಳಂತೆ. ಆಕೆಯ ಆಸೆಯಂತೆ ಕುಟುಂಬದವರು ತಮ್ಮ ದುಃಖವನ್ನು ಬದಿಗೊತ್ತಿ ಮಗಳ ಕೊನೆಯ ಆಸೆಯನ್ನು ಈಡೇರಿಸಿದ ರೀತಿಗೆ ಕುದೂರು ಮತ್ತು ಚನ್ನರಾಪಟ್ಟಣದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಕ್ಷಿತಾರವರ ತಂದೆಯ ಹುಟ್ಟೂರಾದ ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ರಕ್ಷಿತಾಳ ಸಾವಿಗೆ ಸಂತಾಪ ವ್ಯಕ್ತಪಡಿಸಿ ಆಕೆಯ ಅಂಗಾಗಗಳನ್ನು ದಾನ ಮಾಡಿದ ಮೃತಳ ಕುಟುಂಬದವರ ಮಾನವೀಯತೆಗೆ ಕೇಂದ್ರಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮಂತ್ರಿ ಅಶ್ವತ್‌ನಾರಾಯಣ್, ಮಾಜಿ ಶಾಸಕ ಎ.ಮಂಜುನಾಥ್ ಮೆಚ್ಚುಗೆ ಸೂಚಿಸಿದ್ದಾರೆ.

----------------------------

11ಕೆಆರ್ ಎಂಎನ್ 4.ಜೆಪಿಜಿ

ಪಿ. ರಕ್ಷಿತಾ

---------------------------