ನಿಮ್‌ ಕಾಲ್‌ ಮುಗಿತೇನಿ ಮಗನ್ನ ಬದುಕಿಸಿಕೊಡ್ರಿ!

| Published : Dec 24 2024, 12:49 AM IST

ಸಾರಾಂಶ

ಆ ದ್ಯಾವ್ರ ಸೇವೆಗೆಂದು ಹೋಗಿದ್ದರು. ಅವನೇ ಇವರನ್ನು ಸಾವಿನಿಂದ ದವಡೆಯಿಂದ ಪಾರು ಮಾಡಬೇಕು ಎಂದು ಕೆಎಂಸಿಆರ್‌ಐಗೆ ಭೇಟಿ ನೀಡಿದ ಮಾಲಾಧಾರಿಗಳು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಶಿವಾನಂದ ಗೊಂಬಿ

ಹುಬ್ಬಳ್ಳಿ:

"ನಿಮ್‌ ಕಾಲ್‌ ಮುಗಿತೇನಿ.. ನನ್ನ ಮಗನ ಬದುಕಿಸಿಕೊಡ್ರಿ.. ನಿಮ್ಮ ಫೋಟೋ ಮನ್ಯಾಗ ಇಟ್ಟು ದಿನಾ ಪೂಜಿ ಮಾಡ್ತೇನೆ.. "!ಇದು ಸಿಲಿಂಡರ್‌ ಸೋರಿಕೆಯಿಂದ ಬೆಂಕಿ ತಗುಲಿ ಗಾಯಗೊಂಡಿರುವ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಕುಟುಂಬಸ್ಥರು ಕೆಎಂಸಿಆರ್‌ಐನ ವೈದ್ಯರು, ಆರೋಗ್ಯ ವಿಚಾರಿಸಲು ಆಗಮಿಸುತ್ತಿದ್ದ ಗಣ್ಯರ ಎದುರು ಅಳಲು ತೋಡಿಕೊಳ್ಳುತ್ತಿದ್ದ ಪರಿ.

ಬರೋಬ್ಬರಿ 9 ಜನ ಮಾಲಾಧಾರಿಗಳ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿತ್ತು. ಗಾಯಗೊಂಡ ಎಲ್ಲರೂ ಬಹುತೇಕರು ಕೂಲಿ ಕೆಲಸ ಮಾಡಿಯೇ ಜೀವನ ಕಟ್ಟಿಕೊಳ್ಳುತ್ತಿದ್ದವರು.

ಗಾಯಗೊಂಡವರಲ್ಲಿ ಶಂಕರ ರಾಯನಗೌಡ (27) ಎಂಬಾತ ಕೆಎಂಸಿಆರ್‌ಐನಲ್ಲೇ ವಾರ್ಡ್‌ಬಾಯ್‌ ಕೆಲಸ ಮಾಡುತ್ತಾನೆ. ಚಿಕ್ಕವಯಸ್ಸಿನಲ್ಲೇ ತಂದೆ- ತಾಯಿ ಕಳೆದುಕೊಂಡ ಅನಾಥ ಈತ. ಈತನನ್ನು ದೊಡ್ಡಮ್ಮ ಜಿನ್ನಾಬಾಯಿ ಸಾಕಿ ಸಲುಹಿಸಿದ್ದಾಳೆ. ಬರೀ ನಾಲ್ಕನೆಯ ತರಗತಿ ಕಲಿತಿದ್ದ ಈತ, ನಾಲ್ಕೈದು ವರ್ಷದಿಂದ ಕೆಎಂಸಿಆರ್‌ಐನಲ್ಲೇ ವಾರ್ಡ್‌ಬಾಯ್‌ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. ತನ್ನ ಸ್ನೇಹಿತರು ಅಯ್ಯಪ್ಪಸ್ವಾಮಿ ಮಾಲೆ ಹಾಕಿದ್ದರಿಂದ ತಾನೂ ದೊಡ್ಡಮ್ಮನಿಗೆ ಹೇಳಿ ಮಾಲೆ ಹಾಕಿದ್ದ. ವ್ರತ ಮಾಡುತ್ತಿದ್ದ.

"ನಾನು ವಯಸ್ಸಾದವಳು ಇಲ್ಲೇ ಮನ್ಯಾಗ ಇರೋ.. ನಾನೇ ಅಡುಗೆ ಮಾಡಿ ಕೊಡ್ತೇನೆ ನಡಿಯುತ್ತೆ.. " ಎಂದು ದೊಡ್ಡಮ್ಮ ಜಿನ್ನಾಬಾಯಿ ಹೇಳಿದರೂ, ಇಲ್ಲಾಬೇ ಎಲ್ಲ ಅಯ್ಯಪ್ಪ ಸ್ವಾಮಿಗೊಳ ಹ್ಯಾಂಗ್‌ ಇರ್ತಾರ್‌ ಹಂಗ ಇರ್ತನೆ ಅಂತ್ಹೇಳಿ ಸನ್ನಿಧಾನದಲ್ಲೇ ಉಳಿದುಕೊಂಡಿದ್ದ. ಈಗ ನೋಡಿದರೆ ದವಾಖಾನಿ ಸೇರ್‍ಯಾನ್‌ ಏನ್ಮಾಡ್ಲಿ " ಎಂದು ರೋದಿಸುವ ಈಕೆ, ಡಾಕ್ಟರ್‌, ಗಣ್ಯರ ಎದುರಿಗೆ "ಪರದೇಶಿ ಮಗಾ ಅದಾನ ಯಪ್ಪಾ, ಹ್ಯಾಂಗರ್‌ ಮಾಡಿ ಬದುಕಿಸಿಕೊಡಿ. ನಿಮ್ಮ ಕೈ ಮುಗಿತೇನಿ, ಕಾಲ್‌ ಹಿಡಿತೇನಿ.. " ಎಂದು ರೋದಿಸುತ್ತಿದ್ದಳು.

ಇನ್ನು ಪ್ರಕಾಶ ಬಾರಕೇರ್‌ (36) ಎಂಬಾತ ಕೂಡ ಇಸ್ಕಾನ್‌ನ ಬಿಸಿಯೂಟ ವಿಭಾಗದಲ್ಲಿ ಕೆಲಸಕ್ಕಿದ್ದನಂತೆ. ಈತ ಕಳೆದ ಆರು ವರ್ಷದಿಂದ ವ್ರತ ಮಾಡುತ್ತಿದ್ದನಂತೆ. ಆರನೆಯ ತರಗತಿ ಓದುತ್ತಿದ್ದ ಈತನ ಮಗ ವಿನಾಯಕ ಬಾರಕೇರ್‌ನಿಗೆ ಇದು ಎರಡನೆಯ ವರ್ಷದ ವ್ರತವಾಗಿತ್ತು. ತಂದೆ ಮಗ ಇಬ್ಬರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಈತನ ತಾಯಿ ನಾಗಮ್ಮ ಬಾರಕೇರ್‌, "ನನ್ನ ಮಗ, ಮೊಮ್ಮಗಗ ಬಹಳ ಗಾಯ ಆಗೈತಿ ಏನ್ರಿ. ಹ್ಯಾಂಗರ ಮಾಡಿ ಬದುಕಿಸಿಕೊಡ್ರಿ.. ನಿಮಗ ಪುಣ್ಯಾ ಬರತೈತಿ.. " ಎಂದು ವೈದ್ಯರನ್ನು ಬೇಡಿಕೊಳ್ಳುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.

"ಆ ದ್ಯಾವ್ರ ಸೇವೆಗೆಂದು ಹೋಗಿದ್ದರು. ಅವನೇ ಇವರನ್ನು ಸಾವಿನಿಂದ ದವಡೆಯಿಂದ ಪಾರು ಮಾಡಬೇಕು.. " ಎಂಬ ಪ್ರಾರ್ಥನೆ ಅಲ್ಲಿಗೆ ಬಂದಿದ್ದ ಮಾಲಾಧಾರಿಗಳದ್ದಾಗಿತ್ತು. ಗಣ್ಯರು ಕೂಡ ಕುಟುಂಬಸ್ಥರಿಗೆ ಸಮಾಧಾನ ಮಾಡುತ್ತಿದ್ದರು.