ಸಾರಾಂಶ
ರಾಮನಗರ: ನಗರಸಭಾ ವ್ಯಾಪ್ತಿಯಲ್ಲಿನ ಆಸ್ತಿ ಮಾಲೀಕರ ಮನೆ ಬಾಗಿಲಿಗೆ ತೆರಳಿ ಅವರ ಸ್ವತ್ತಿಗೆ ಇ - ಆಸ್ತಿ ಸೃಜಿಸಿ ಕೊಡುವ ನಿಟ್ಟಿನಲ್ಲಿ ನಿಮ್ಮ ಆಸ್ತಿ ನಿಮ್ಮ - ಹಕ್ಕು ಅಭಿಯಾನಕ್ಕೆ ಜುಲೈ 23ರಂದು ಚಾಲನೆ ನೀಡಲಾಗುವುದು ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ತಿಳಿಸಿದರು.
ನಗರಸಭೆ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 23, 28 ಮತ್ತು 30ರಂದು ನಗರಸಭೆಯ 1 ರಿಂದ 9ನೇ ವಾರ್ಡುಗಳಲ್ಲಿ ಅಭಿಯಾನ ನಡೆಯಲಿದೆ. ಆಸ್ತಿ ಮಾಲೀಕರು ತಮ್ಮ ಸ್ವತ್ತಿಗೆ ಸಂಬಂಧಿಸಿದ ಮೂಲ ದಾಖಲಾತಿಗಳನ್ನು ನೀಡಿದ್ದಲ್ಲಿ ಸ್ಥಳದಲ್ಲಿಯೇ ಇ-ಆಸ್ತಿ ಸೃಜಿಸಿ ಕೊಡಲಾಗುವುದು ಎಂದರು.ಜುಲೈ 23ರಂದು ವಿಜಯನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಡ್ ಸಂಖ್ಯೆ 1 ಮತ್ತು 2ಕ್ಕೆ ಸಂಬಂಧಿಸಿದ ಆಸ್ತಿಗಳಿಗೆ ಇ-ಆಸ್ತಿ ಸೃಜಿಸಿಕೊಡಲಾಗುವುದು. ಜುಲೈ 28ರಂದು 3,4 ಮತ್ತು 5ನೇ ವಾರ್ಡುಗಳಿಗೆ ಸಂಬಂಧಿಸಿದಂತೆ ಕಾಯಿಸೊಪ್ಪಿನ ಬೀದಿಯಲ್ಲಿರುವ ಲಕ್ಷ್ಮೀನಾರಾಯಣ ದೇವಸ್ಥಾನದ ಆವರಣದಲ್ಲಿ ಹಾಗೂ ಜುಲೈ 30ರಂದು ನಗರದ ಎಂ.ಜಿ.ರಸ್ತೆಯಲ್ಲಿರುವ ಶ್ರೀ ಕನ್ನಿಕಾ ಮಹಲ್‌ನಲ್ಲಿ 6,7,8 ಮತ್ತು 9ನೇ ವಾರ್ಡುಗಳ ಆಸ್ತಿಗಳಿಗೆ ಇ-ಆಸ್ತಿ ಸೃಜಿಸಿ ಕೊಡಲಾಗುವುದು ಎಂದು ತಿಳಿಸಿದರು.
1ರಿಂದ 9ನೇ ವಾರ್ಡುಗಳಲ್ಲಿ ಇ-ಖಾತಾ ಅಭಿಯಾನ ನಡೆಯಲಿದೆ. ಮೂರು ದಿನಗಳು ನಡೆಯುವ ಅಭಿಯಾನದ ವೇಳೆ ಕಂಡು ಬರುವ ನ್ಯೂನತೆಗಳನ್ನು ದಾಖಲಿಸಿಕೊಂಡು ಸರಿಪಡಿಸಿಕೊಂಡು ಉಳಿದ ವಾರ್ಡುಗಳಲ್ಲಿಯೂ ಇ-ಆಸ್ತಿ ಅಭಿಯಾನವನ್ನು ಮುಂದುವರೆಸಲಾಗುವುದು ಎಂದರು.ಕಳೆದ 6 ತಿಂಗಳ ಅವಧಿಯಲ್ಲಿ ನಗರಸಭೆಯಲ್ಲಿ ಇ-ಖಾತಾ ಅಭಿಯಾನ ನಡೆಯುತ್ತಿದ್ದು, ಇದುವರೆಗೆ 2500ಕ್ಕೂ ಹೆಚ್ಚು ಆಸ್ತಿಗಳಿಗೆ ಇ-ಆಸ್ತಿ ಸೃಜಿಸಿಕೊಡಲಾಗಿದೆ. ಅದರ ಮುಂದುವರೆದ ಭಾಗವಾಗಿ ಮನೆ ಬಳಿಗೆ ಅಧಿಕಾರಿಗಳು ತೆರಳಿ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆದು ಇ-ಆಸ್ತಿ ಸೃಜಿಸಿಕೊಡುವರು ಎಂದು ಹೇಳಿದರು.
ಇ-ಆಸ್ತಿ ಸೃಜಿಸಲು ಆಸ್ತಿ ಮಾಲೀಕರು ತಮ್ಮ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಮತದಾರರ ಗುರುತಿನ ಚೀಟಿ, ಪಾನ್ ಕಾರ್ಡ್ ಪಡಿತರ ಚೀಟಿ ಇತ್ಯಾದಿ ಮಾಲೀಕರ ಗುರುತನ್ನು ದೃಢೀಕರಿಸುವ ದಾಖಲೆ, ಪೌತಿ ಖಾತೆ ಆದಲ್ಲಿ ಮರಣ ಹೊಂದಿದ ಆಸ್ತಿ ಮಾಲೀಕರ ಮರಣ ಪ್ರಮಾಣ ಪತ್ರ ಮತ್ತು ವಂಶವೃಕ್ಷ ಪ್ರಮಾಣ ಪತ್ರ, ನೀರಿನ ತೆರಿಗೆ ರಶೀದಿ ಪ್ರತಿ, ಆರ್.ಆರ್.ಸಂಖ್ಯೆ ದಾಖಲೆ, 1-4-2004 ರ ನಂತರ ಆಸ್ತಿ ನೋಂದಣಿಯಾಗಿದ್ದರೆ ಆ ದಿನಾಂಕದಿಂದ ಪಸಕ್ತ ಸಾಲಿನವರೆಗೆ ನೂಮೂನೆ 15ರ ಇ.ಸಿ., ಆಸ್ತಿಯ ಭಾವಚಿತ್ರ.ನೋದಾಯಿತ ಕ್ರಮ/ದಾನ/ವಿಭಾಗ/ವಿಲ್/ಆಸ್ತಿ ವಿಭಜನೆ/ಹಕ್ಕು ನಿವೃತ್ತಿ ಮುಂತಾದ ದಾಖಲೆಗಳು, ಪ್ರಸಕ್ತ ಸಾಲಿನವರೆಗೆ ಕಂದಾಯ ಪಾವತಿಸಿರುವ ರಶೀದಿ (ನಮೂನೆ 2 ಮತ್ತು ಚಲನ್), ವಿದ್ಯುತ್ ನಿರಪೇಕ್ಷಣ ಪತ್ರ, ಕಟ್ಟಡ ಪರವಾನಿಗೆ ನಕ್ಷೆ ಪ್ರತಿ, ವಿಭಜಿತ ಸ್ವತ್ತಿನ ನಕ್ಷೆ (ಆಸ್ತಿಗಳು ವಿಭಜನೆಗೊಂಡಿದ್ದಲ್ಲಿ). ಈ ದಾಖಲೆಗಳನ್ನು ಆಸ್ತಿ ಮಾಲೀಕರು ನೀಡಿದಲ್ಲಿ ಸ್ಥಳದಲ್ಲಿಯೇ ಇ-ಆಸ್ತಿ ಸೃಜಿಸಿ ಕೊಡಲಾಗುವುದು ಎಂದು ಕೆ.ಶೇಷಾದ್ರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯ ಸೋಮಶೇಖರ್ (ಮಣಿ), ಅಧಿಕಾರಿ ಕಿರಣ್ ಇದ್ದರು.19ಕೆಆರ್ ಎಂಎನ್ 4.ಜೆಪಿಜಿ
ರಾಮನಗರ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.