ಸಾರಾಂಶ
ಉದ್ಯೋಗವಿದ್ದಲ್ಲಿ ಕೆಲಸ ಮಾಡಬೇಕು. ಶಿಕ್ಷಣವೆಂಬುದು ವಿದ್ಯೆ ಕಲಿಯಲಿಕ್ಕೆ ಮಾತ್ರ ಅಲ್ಲ. ಅದರೊಂದಿಗೆ ಉತ್ತಮವಾದಂತಹ ಕೌಶಲ ಬೆಳೆಸಿಕೊಳ್ಳಬೇಕು
ಕನ್ನಡಪ್ರಭ ವಾರ್ತೆ ಜಮಖಂಡಿ
ನಿರುದ್ಯೋಗಕ್ಕೆ ಮುಖ್ಯ ಕಾರಣ ಯುವಜನರಲ್ಲಿ ಆಸಕ್ತಿ ಇಲ್ಲದಿರುವುದು. ಉದ್ಯೋಗದ ಕೊರತೆಗಿಂತ ಆಕಾಂಕ್ಷಿಗಳ ಕೊರತೆ ಜಾಸ್ತಿ ಇದೆ. ಹೆಣ್ಣು ಕಲಿಯುವುದು ಅಷ್ಟೇ ಅಲ್ಲದೆ ಉದ್ಯೋಗ ಮಾಡಿದರೆ ಅವಳ ಮುಂದಿನ ಜೀವನ ಉತ್ತಮ ರೂಪಗೊಳ್ಳುತ್ತದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಗುರುಪಾದಯ್ಯ ಹಿರೇಮಠ ತಿಳಿಸಿದರು.ರೋಟರಿ ಸಂಸ್ಥೆ ರಾಮತೀರ್ಥ, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಆರ್‌ಸಿ.ಡಬ್ಲು, ಕನೆಕ್ಟ್ ಧಾರವಾಡ ಮುಂತಾದ ಸಂಸ್ಥೆಗಳ ಆಶ್ರಯದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಭವನದಲ್ಲಿ ರಾಜ್ಯಮಟ್ಟದ ಬೃಹತ್ ಉದ್ಯೋಗಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಉದ್ಯೋಗದ ಬಗ್ಗೆ ಆಸಕ್ತಿ ಹೊಂದಿರಬೇಕು. ಉದ್ಯೋಗವು ನಿಮ್ಮನ್ನ ಹುಡುಕಿ ಬರದೆ ನೀವು ಉದ್ಯೋಗ ಹುಡುಕಿಕೊಂಡು ಹೋಗಬೇಕು. ಉದ್ಯೋಗವಿದ್ದಲ್ಲಿ ಕೆಲಸ ಮಾಡಬೇಕು. ಶಿಕ್ಷಣವೆಂಬುದು ವಿದ್ಯೆ ಕಲಿಯಲಿಕ್ಕೆ ಮಾತ್ರ ಅಲ್ಲ. ಅದರೊಂದಿಗೆ ಉತ್ತಮವಾದಂತಹ ಕೌಶಲ ಬೆಳೆಸಿಕೊಳ್ಳಬೇಕು ಎಂದರು.
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಸುನಂದಾ ಶಿರೂರ ಮಾತನಾಡಿ, ಒಂದು ಸಮಾಜಕ್ಕೆ ಒಳ್ಳೆಯದಾಗಬೇಕಾದರೆ ಯುವಕರು ನಿರ್ದಿಷ್ಟ ಅವಧಿಯಲ್ಲಿ ಉದ್ಯೋಗ ಪಡೆದುಕೊಳ್ಳಬೇಕು. ಉದ್ಯೋಗಕ್ಕೆ ಬೇಕಾದ ಅರ್ಹತೆ ಹಾಗೂ ಕೌಶಲ ಬೆಳೆಸಿಕೊಳ್ಳಬೇಕು. ಇಲ್ಲಿ ಬಂದಂತಹ ಆಕಾಂಕ್ಷಿಗಳಿಗೆ ಯಾವುದೇ ಮೋಸವಾಗದಂತೆ ಎಲ್ಲ ಕಂಪನಿಯವರು ನಿಗಾವಹಿಸಬೇಕು. ಆಯ್ಕೆಯಾದ ಉದ್ಯೋಗ ಆಕಾಂಕ್ಷಿಗಳಿಗೆ ಸಾಯಂಕಾಲದೊಳಗಾಗಿ ಆದೇಶ ಪ್ರತಿ ನೀಡಬೇಕು. ಯುವಕರು ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕಕ್ಕೆ ಸೀಮಿತವಾಗದೆ ಉದ್ಯೋಗಕ್ಕೆ ಬೇಕಾದ ಕೌಶಲ ಬೆಳೆಸಿಕೊಳ್ಳಬೇಕು. ಗಾಳಿ ಬಿಟ್ಟಾಗ ತೋರಿಕೊಳ್ಳಬೇಕು ಹಾಗೆಯೇ ಉದ್ಯೋಗ ಸಿಕ್ಕಾಗ ಉದ್ಯೋಗ ಮಾಡಬೇಕು ಎಂದರು.ಉದ್ಯೋಗ ಮೇಳದಲ್ಲಿ ಬೆಂಗಳೂರು, ಬಾಗಲಕೋಟೆ, ವಿಜಯಪುರ, ಧಾರವಾಡ, ಕಾರವಾರದ ಹಲವು ಹೆಸರಾಂತ ಕಂಪನಿಗಳ ಹಾಗೂ 20ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಭಾಗವಹಿಸಿದ್ದವು 950ಕ್ಕೂ ಅಧಿಕ ಅಭ್ಯರ್ಥಿಗಳು ಭಾಗವಹಿಸಿದ್ದರು. 272 ಉದ್ಯೋಗಾಕಾಂಕ್ಷಿಗಳು ಆಯ್ಕೆಯಾಗಿದ್ದು ವಿವಿಧ ಕಂಪನಿಗಳ ತರಬೇತಿಗೆ ಆಹ್ವಾನ ಪಡೆದರು.