ಸಮಾಜ ಒಡೆದಾಳುವವರಿಗೆ ಹಣಬಲ, ಅಧಿಕಾರ ಬಲ ಹಾಗೂ ಸಂಘಟನೆಗಳ ಬಲವಿದೆ. ಆದರೆ ಅದನ್ನು ಪ್ರತಿರೋಧಿಸುವ ಸಂಘಟನೆಗಳು ಹಾಗೂ ಸಂಘಟಕರಿಗೆ ಶಕ್ತಿ ಇಲ್ಲದಂತಾಗಿದೆ. ಯುವಕರನ್ನು ಧರ್ಮ, ಜಾತಿ ಹಾಗೂ ಜನವಿರೋಧಿ ಸಂಸ್ಕೃತಿಯ ನಶೆಯಲ್ಲಿ ಮುಳುಗಿಸಲಾಗಿದೆ ಎಂದು ಮುದಗಲ್-ತಿಮ್ಮಾಪುರ ಕಲ್ಯಾಣಾಶ್ರಮದ ಮಹಾಂತ ಸ್ವಾಮೀಜಿ ಸಾಲಿಮಠ ಟೀಕಿಸಿದರು.
ಕನ್ನಡಪ್ರಭ ವಾರ್ತೆ ಸಿಂಧನೂರು
ಸಮಾಜ ಒಡೆದಾಳುವವರಿಗೆ ಹಣಬಲ, ಅಧಿಕಾರ ಬಲ ಹಾಗೂ ಸಂಘಟನೆಗಳ ಬಲವಿದೆ. ಆದರೆ ಅದನ್ನು ಪ್ರತಿರೋಧಿಸುವ ಸಂಘಟನೆಗಳು ಹಾಗೂ ಸಂಘಟಕರಿಗೆ ಶಕ್ತಿ ಇಲ್ಲದಂತಾಗಿದೆ. ಯುವಕರನ್ನು ಧರ್ಮ, ಜಾತಿ ಹಾಗೂ ಜನವಿರೋಧಿ ಸಂಸ್ಕೃತಿಯ ನಶೆಯಲ್ಲಿ ಮುಳುಗಿಸಲಾಗಿದೆ ಎಂದು ಮುದಗಲ್-ತಿಮ್ಮಾಪುರ ಕಲ್ಯಾಣಾಶ್ರಮದ ಮಹಾಂತ ಸ್ವಾಮೀಜಿ ಸಾಲಿಮಠ ಟೀಕಿಸಿದರು.ನಗರದ ಕರಡಿ ಬಸವ ಸಭಾಂಗಣದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ಜಿಲ್ಲಾ ಘಟಕದಿಂದ ಶುಕ್ರವಾರ ಹಮ್ಮಿಕೊಂಡಿದ್ದ ‘ಕೋಮು ಸೌಹಾರ್ದತೆ ಮತ್ತು ಪ್ರಸ್ತುತ ಸವಾಲುಗಳು’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಯುವಕರಿಗೆ ತಿಳಿವಳಿಕೆ ನೀಡಿದರೂ ವಾಪಸ್ ಮೂಲ ಸ್ಥಿತಿಗೆ ಬರಲಾಗದಂತಹ ದುಸ್ಥಿತಿಗೆ ತಲುಪಿದ್ದಾರೆ. ಇಂತಹ ಸಂದರ್ಭ ಕೋಮು ಸೌಹಾರ್ದತೆಗೆ ಎದುರಾಗುವ ಸವಾಲುಗಳನ್ನು ಎದುರಿಸಲು ಬುದ್ಧೀಜೀವಿಗಳಾಗುವುದಕ್ಕಿಂತ ನಾವು ಬದ್ಧತೆ ಜೀವಿಗಳಾಗಬೇಕಿದೆ. ವಿಚ್ಛಿದ್ರಕಾರಿ ಸಂಘಟನೆಗಳು ದೇಶ, ರಾಜ್ಯ ಹಾಗೂ ಸ್ಥಳೀಯ ಮಟ್ಟದವರೆಗೂ ತಮ್ಮ ಕಬಂಧಬಾಹುಗಳನ್ನು ಚಾಚಿದ್ದು, ಜನರ ಮನಸ್ಸಲ್ಲಿ ಧರ್ಮ, ಜಾತಿ, ಮತ-ಪಂಥಗಳ ವಿಷಬೀಜ ಬಿತ್ತಿ ಸೌಹಾರ್ದತೆಗೆ ಧಕ್ಕೆ ತರುತ್ತಿವೆ. ಇಂತಹ ದುರಿತ ಕಾಲದಲ್ಲಿ ಹಳ್ಳಿ ಹಳ್ಳಿಗೆ ಸೌಹಾರ್ದತೆ ಬೆಸುಗೆ ಬೆಸೆಯಬೇಕಿದೆ. ಆ ಮೂಲಕ ಸಹಬಾಳ್ವೆ ಸಂಸ್ಕೃತಿ ಎತ್ತಿಹಿಡಿಯಬೇಕು ಎಂದರು.
ಪ್ರವಚನಕಾರ ಇಳಕಲ್‌ನ ಲಾಲ್ಹುಸೇನ್ ಕಂದಗಲ್ ಮಾತನಾಡಿ, ಹಿಂದೆ ಹಬ್ಬಗಳು ಎಂದರೆ ಹೊಸ ಉಡುಪು, ತಿನಿಸು ಹಾಗೂ ಸಂಭ್ರಮ ಎದ್ದು ಕಾಣುತ್ತಿತ್ತು. ಆದರೆ ಇಂದು ಹಬ್ಬಗಳು ಎಂದರೆ ಎಲ್ಲರಲ್ಲೂ ಭಯದ ವಾತಾವರಣ ಆವರಿಸುತ್ತದೆ. ಹಬ್ಬದ ಸಂದರ್ಭ ಪೊಲೀಸ್ ವಾಹನಗಳು ನಿಲ್ಲುತ್ತವೆ, ಗಸ್ತು ತಿರುಗುತ್ತವೆ. ಆ ರೀತಿಯ ಪರಿಸ್ಥಿತಿ ಸೃಷ್ಠಿಯಾಗಿದೆ. ಜೀವಕ್ಕೆ ಅನ್ನ, ಆಹಾರವೆಷ್ಟು ಮುಖ್ಯವೋ, ಸಮಾಜದಲ್ಲಿ ಪ್ರತಿಯೊಬ್ಬರೂ ನೆಮ್ಮದಿಯಿಂದ ಜೀವಿಸಲು ಸೌಹಾರ್ದತೆ ಅಷ್ಟೇ ಮುಖ್ಯ ಎಂದು ಪ್ರತಿಪಾದಿಸಿದರು.ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಭಾಷುಮಿಯಾ, ಸಿಪಿಐ ಜಿಲ್ಲಾ ಘಟಕದ ಕಾರ್ಯದರ್ಶಿ ಚಂದ್ರಶೇಖರ ಕ್ಯಾತ್ನಟ್ಟಿ, ಅಂಗನವಾಡಿ ಫೆಡರೇಶನ್ ಜಿಲ್ಲಾ ಘಟಕದ ಅಧ್ಯಕ್ಷೆ ಸುಲೋಚನಾ, ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಸರಸ್ವತಿ ಪಾಟೀಲ್ ಮಾತನಾಡಿದರು. ಡಿ.ಎಚ್.ಕಂಬಳಿ ಪ್ರಸ್ತಾವನೆಗೈದರು.
ಹಟ್ಟಿಚಿನ್ನದಗಣಿ ನೌಕರರ ಸಂಘದ ಮುಖಂಡ ಚಂದ್ರಶೇಖರ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಚಂದ್ರಶೇಖರ, ಮುಖಂಡರಾದ ಬಸವಂತರಾಯಗೌಡ ಕಲ್ಲೂರು, ಎಸ್.ದೇವೇಂದ್ರಗೌಡ, ಶಾಂತಾ ಗೊರೇಬಾಳ, ಆರೋಗ್ಯಮ್ಮ, ಯಮನಮ್ಮ ಮರಾಠಿ, ಗಂಗಾ ಗೊರೇಬಾಳ, ಜಗದೀಶ ಸುಕಾಲಪೇಟೆ, ಹಮಾಲರ ಸಂಘದ ಗಂಗಮ್ಮ, ಸುಭಾನ್ಸಾಬ್, ಪ್ರಕಾಶ ಉಪಸ್ಥಿತರಿದ್ದರು. ವೀರೇಶ ಕನ್ನಾರಿ ಸ್ವಾಗತಿಸಿದರು. ಬಸವರಾಜ ಬಾದರ್ಲಿ ನಿರೂಪಿಸಿದರು.