ಸಾರಾಂಶ
ಶಿರಸಿ: ಯುವಕರು, ಮಕ್ಕಳು ನಮ್ಮ ಭವಿಷ್ಯದ ಜ್ಯೋತಿಗಳು. ಅವರ ಕನಸು, ಆಕಾಂಕ್ಷೆಗಳು ಮತ್ತು ಕಾರ್ಯಗಳು ನಾಳಿನ ಭಾರತವನ್ನು ರೂಪಿಸುತ್ತದೆ ಎಂದು ಸಹಾಯಕ ಆಯುಕ್ತೆ ಕೆ.ವಿ. ಕಾವ್ಯರಾಣಿ ಹೇಳಿದರು.
ಅವರು ಗುರುವಾರ ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ೭೮ನೆಯ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ, ಸಂದೇಶ ನೀಡಿದರು. ೭೮ ವರ್ಷಗಳ ಹಿಂದೆ ವಸಾಹತುಶಾಹಿ ಆಳ್ವಿಕೆಯ ಸರಪಳಿಯಲ್ಲಿ ಬಂಧಿತವಾಗಿದ್ದ ನಮ್ಮ ರಾಷ್ಟ್ರವು ಸ್ವಾತಂತ್ರ್ಯಕ್ಕಾಗಿ ತನ್ನ ಅವಿರತ ಹೋರಾಟದಲ್ಲಿ ಅಂತಿಮವಾಗಿ ವಿಜಯಶಾಲಿಯಾಯಿತು. ಆ ದಿನವು ಕೇವಲ ಇತಿಹಾಸದ ಘಟನೆಯಲ್ಲ. ಬದಲಾಗಿ ಭಾರತೀಯರಿಗೆ ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ. ನಮ್ಮ ಪೂರ್ವಜರ ಧೈರ್ಯ, ಪರಾಕ್ರಮ ಮತ್ತು ಸೋಲರಿಯದ ಮನೋಭಾವಕ್ಕೆ ಇದು ಸಾಕ್ಷಿಯಾಗಿದೆ. ಮಹಾತ್ಮ ಗಾಂಧಿ ನೇತೃತ್ವದ ಅಹಿಂಸಾತ್ಮಕ ಚಳವಳಿಯಿಂದ ಹಿಡಿದು ಭಗತ್ ಸಿಂಗ್ ಮತ್ತು ರಾಣಿ ಲಕ್ಷ್ಮೀಬಾಯಿ ಅವರಂಥ ಸ್ವಾತಂತ್ರ್ಯ ಹೋರಾಟಗಾರ ದಿಟ್ಟ ಕ್ರಮಗಳ ವರೆಗೆ ನಮ್ಮ ಸ್ವಾತಂತ್ರ್ಯದ ಹೋರಾಟವು ಭಾರತವನ್ನು ವ್ಯಾಖ್ಯಾನಿಸುವ ವೈವಿಧ್ಯತೆ ಮತ್ತು ಏಕತೆಯನ್ನು ಪ್ರತಿಬಿಂಬಿಸುವ ಸಾಮೂಹಿಕ ಪ್ರಯತ್ನವಾಗಿತ್ತು ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಸ್ವಾತಂತ್ರ್ಯ ಬಂದು ೭೮ ವರ್ಷ ಕಳೆದರೂ ನಮ್ಮ ದೇಶದಲ್ಲಿರುವ ಎಲ್ಲ ಪ್ರಜೆಗಳು ಸರಿಯಾದ ಸೂರು ಹೊಂದದಿರುವುದು ಬೇಸರದ ಸಂಗತಿ. ಸೂರನ್ನು ಒದಗಿಸುವ ಕೆಲಸ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಆಗಬೇಕಿದೆ. ನಮ್ಮ ನಮ್ಮ ಜವಾಬ್ದಾರಿಗಳನ್ನು ಅರಿತು ಪ್ರತಿಯೊಬ್ಬರೂ ಕೆಲಸ ಮಾಡಿದರೆ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತದೆ ಎಂದರು.
ಪೊಲೀಸ್ ಇಲಾಖೆಯಲ್ಲಿ ಸಾಧನೆಗೈದ ಶಿರಸಿ ನಗರ ಠಾಣೆ ಪಿಎಸ್‌ಐ ನಾಗಪ್ಪ ಬಿ., ಅರಣ್ಯ ಇಲಾಖೆಯಲ್ಲಿ ಸಾಧನೆ ಮಾಡಿದ ಮಂಜುನಾಥ ಚಿಗ್ಲಿ, ಮಾಜಿ ಸೈನಿಕ ಗಣಪತಿ ಹೆಗಡೆ, ಕಸಾಪ ತಾಲೂಕಾಧ್ಯಕ್ಷ ಸುಬ್ರಾಯ ಭಟ್ ಬಕ್ಕಳ ಅವರನ್ನು ಗೌರವಿಸಲಾಯಿತು.ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೀಡುವ ಉಚಿತ ಲ್ಯಾಪ್‌ಟಾಪ್‌ಗಳನ್ನು ಶಾಸಕ ಭೀಮಣ್ಣ ನಾಯ್ಕ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು.
ತಹಸೀಲ್ದಾರ್ ಶ್ರೀಧರ ಮುಂದಲಮನಿ, ಡಿಎಸ್‌ಪಿ ಕೆ.ಎಲ್. ಗಣೇಶ, ಡಿಡಿಪಿಐ ಪಿ. ಬಸವರಾಜು, ನಗರಸಭೆ ಪೌರಾಯುಕ್ತ ಕಾಂತರಾಜು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ತಾಪಂ ಇಒ ಸತೀಶ ಹೆಗಡೆ ಮತ್ತಿತರರು ಇದ್ದರು.ಧ್ವಜಾರೋಹಣದ ಆನಂತರ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಗೃಹರಕ್ಷಕ ದಳ, ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳು ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಯಿತು. ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಲಾಯಿತು. ರಂಗೋಲಿ ಸ್ಪರ್ಧೆಯಲ್ಲಿ ಶ್ಯಾಮಲಾ ನಾಯ್ಕ ಪ್ರಥಮ, ಶ್ಯಾಮಲಾ ಜೋಗಳೇಕರ್ ದ್ವಿತೀಯ, ರೇಷ್ಮಾ ನಾಯ್ಕ ತೃತೀಯ ಹಾಗೂ ಹರ್ಷಾ ಮರಾಠಿ ಸಮಾಧಾನಕರ ಬಹುಮಾನ ಪಡೆದುಕೊಂಡರು. ಗಾಳಿಪಟ ಹಾರಿಸುವ ಸ್ಪರ್ಧೆಯಲ್ಲಿ ಕಾಶಿರಾಜ ಬಳ್ಳಾರಿ, ಲಿಖಿತ್ ರಾಜ್ ಹಾಗೂ ಸುಕೃತಿರಾಜ್ ಪ್ರಥಮ ಸ್ಥಾನ ಹಾಗೂ ನಿಧಿಶ್ರೀ ಗಜೇಂದ್ರ ದ್ವಿತೀಯ ಸ್ಥಾನ ಪಡೆದುಕೊಂಡರು.